ಹಾಸನ: ನನಗೆ ಅಧಿಕಾರಕ್ಕಿಂತ ನಿಮ್ಮ ಪ್ರೀತಿ ಮುಖ್ಯ. ನಿಮಗೆಂದೂ ನಾನು ದ್ರೋಹ ಮಾಡಿಲ್ಲ. ನಾನು ಸಂಪಾದಿಸಿದ ಭೂಮಿಯಲ್ಲಿ ವೃದ್ಧಾಶ್ರಮ ನಿರ್ಮಾಣಕ್ಕೆ ನಿರ್ಧಾರ ಮಾಡಿದ್ದೇನೆ. ಕೇತೋಗಾನಹಳ್ಳಿ ಭೂಮಿಯಲ್ಲಿ ವೃದ್ಧಾಶ್ರಮ ನಿರ್ಮಾಣ ಮಾಡಿ, ವೃದ್ಧರ ಜತೆ ಬದುಕಲು ಚಿಂತಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಭಾವನಾತ್ಮಕವಾಗಿ ಮಾತನಾಡಿದರು.
ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ಅನರ್ಹಗೊಂಡ ಬಳಿಕ ಉಪಸಮರಕ್ಕೆ ಸಜ್ಜಾಗಿರುವ ಜೆಡಿಎಸ್ ನಾಯಕರು ಇಂದು ಕೆ.ಆರ್.ಪೇಟೆಯಲ್ಲಿ ಕಾರ್ಯಕರ್ತ ಸಭೆ ನಡೆಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಚ್ಡಿಕೆ, ಲೋಕಸಭಾ ಚುನಾವಣೆಗೆ ನಿಲ್ಲಬೇಡ ಎಂದು ನನ್ನ ಮಗನಿಗೆ ಹೇಳಿದ್ದೆ. ಜಿಲ್ಲೆಯ ಶಾಸಕರು ಒತ್ತಾಯ ಹಾಕಿ ನಿಲ್ಲಿಸಿದರು. ಆದರೆ, ನನನ್ನು ಹಾಗೂ ನನ್ನ ಮಗನನ್ನು ಮಾಧ್ಯಮಗಳು ಪ್ರತಿನಿತ್ಯ ಖಳನಾಯಕರನ್ನಾಗಿ ಬಿಂಬಿಸಿದವು. ನಾನು ಮುಖ್ಯಮಂತ್ರಿಯಾದ ದಿನದಿಂದ ಸರ್ಕಾರ ತೆಗೆಯಲು ಮಾಧ್ಯಮಗಳು ಮುಂದಾದವು ಎಂದು ಅಸಮಾಧಾನ ಹೊರಹಾಕಿದರು.
ನಾಲೆಗಳಿಗೆ ನೀರು ಬಿಟ್ಟಿದ್ದಕ್ಕೆ ಸ್ವಾಭಿಮಾನಿಗಳು ಚುನಾವಣಾ ಆಯೋಗದ ಮೂಲಕ ನೋಟಿಸ್ ಕೊಡಿಸಿದರು ಎಂದು ಹೇಳಿದ ಅವರು, ಪ್ರತಿನಿತ್ಯ ವರ್ಗಾವಣೆ ದಂಧೆ ನಡೆಯುತ್ತಿದೆ. ಒಕ್ಕಲಿಗ ಅಧಿಕಾರಿಗಳನ್ನು ಚೆಂಡಾಡುತ್ತಿದ್ದಾರೆ. ರವಿಕಾಂತೇಗೌಡರನ್ನು ಯಾಕಪ್ಪ ಎತ್ತಂಗಡಿ ಮಾಡಿದೆ? ಯಾವ ತಪ್ಪು ಕೆಲಸ ಮಾಡಿದ್ದಕ್ಕೆ ತೆಗೆದೆ? ಕುಮಾರಸ್ವಾಮಿ ಅಭಿಮಾನಿ ಕಾರಣಕ್ಕೆ ಎತ್ತಂಗಡಿ ಮಾಡಿದಾ ಎಂದು ಸಿಎಂ ಯಡಿಯೂರಪ್ಪ ವಿರುದ್ಧ ಕಿಡಿಕಾರಿದರು.
ಬಡ ಕುಟುಂಬಗಳಿಗಾಗಿ ನಾನು ರಾಜಕೀಯ ಮಾಡಿದ್ದು. ಯಡಿಯೂರಪ್ಪ ರೀತಿ ಜೈಲಿಗೋಗಲು ರಾಜಕೀಯ ಮಾಡಿಲ್ಲ. ನಿಮ್ಮ ಯಡಿಯೂರಪ್ಪನೂ ಬರಲ್ಲ, ಸಿದ್ದರಾಮಯ್ಯನೂ ಬರಲ್ಲ. ಬಡ ಕುಟುಂಬಗಳ ನೆರವಿಗೆ ನನ್ನ ಬಿಟ್ಟು ಬೇರೆ ಯಾರೂ ಬರಲ್ಲ ಎಂದ ಎಚ್ಡಿಕೆ, ಮಾಜಿ ಸಂಸದ ಶಿವರಾಮೇಗೌಡ ವಿರುದ್ಧವೂ ವಾಗ್ದಾಳಿ ನಡೆಸಿ, ಲೋಕಸಭಾ ಚುನಾವಣೆ ವೇಳೆ ಅಪಪ್ರಚಾರ ಮಾಡಿದರು. ಅಪ್ಪ, ಮಗನಿಂದ ನಮ್ಮ ಬಗ್ಗೆ ಅಪಪ್ರಚಾರ ಮಾಡಲಾಯಿತು ಎಂದು ಗುಡುಗಿದರು.
ರಾಜಕೀಯದಿಂದ ಇಷ್ಟೊತ್ತಿಗೆ ನಿವೃತ್ತಿ ಘೋಷಿಸುತ್ತಿದ್ದೆ. ಲಕ್ಷಾಂತರ ಕಾರ್ಯಕರ್ತರಿಗಾಗಿ ಇನ್ನೂ ಇದ್ದೀನಿ. ನನಗೆ ದೇವೇಗೌಡರ ರೀತಿ ಇಳಿವಯಸ್ಸಿನಲ್ಲೂ ರಾಜಕೀಯ ಮಾಡುವ ಹಂಗಿಲ್ಲ. ಇನ್ಮುಂದೆ ಮೈತ್ರಿ ಮಾಡಿಕೊಳ್ಳಲ್ಲ. ಯಾರ ಜತೆಗೂ ಮೈತ್ರಿ ಮಾಡಿಕೊಳ್ಳಲ್ಲ ಎಂದ ಅವರು ಮೈತ್ರಿ ಬೇಡವೇ ಬೇಡ ಎಂದ ಕಾರ್ಯಕರ್ತರಿಗೆ ಅಭಯ ನೀಡಿದರು. (ದಿಗ್ವಿಜಯ ನ್ಯೂಸ್)