ಕೆ.ಆರ್.ಪೇಟೆ: ರಾಜಕೀಯ ನಿವೃತ್ತಿ ಘೊಷಣೆ ಮಾಡ್ತೀನಿ. ದೇವೇಗೌಡರಂತೆ ಕಡೆಗಾಲದತನಕ ರಾಜಕಾರಣ ಮಾಡಲ್ಲ. ಲಕ್ಷಾಂತರ ಕಾರ್ಯಕರ್ತರಿಗಾಗಿ ಇನ್ನೂ ಇದ್ದೀನಿ. ಚುನಾವಣೆಗೆ ಸಿದ್ಧರಾಗಿ, 17 ಕ್ಷೇತ್ರವೋ, 224 ಕ್ಷೇತ್ರವೋ ಗೊತ್ತಿಲ್ಲ…
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಡಿದ ಮಾತುಗಳಿವು. ಕೆ.ಆರ್.ಪೇಟೆಯಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಇನ್ಮುಂದೆ ಯಾರ ಜತೆಗೂ ಮೈತ್ರಿ ಮಾಡಿಕೊಳ್ಳಲ್ಲ ಎಂದು ಘೊಷಿಸಿದರು.
ಈ ಸಭೆಗೆ ಹೋಗದಂತೆ ನಾರಾಯಣಗೌಡ ತಮ್ಮ ಪಿಎ ಕೈಯಿಂದ ಹಣ ಕೊಡಿಸಿದ್ದಾರೆ. ಬಾಂಬೆಯಲ್ಲಿ ಅವರಿಗೆ ಹಣ ಎಲ್ಲಿ ಬರುತ್ತೆ. ಎಚ್.ವಿಶ್ವನಾಥ್ ಬೀದಿಲಿ ಬಿದ್ದಿದ್ದರು. ಅವರನ್ನು ಸಾ.ರಾ.ಮಹೇಶ್ ಕರೆದುಕೊಂಡು ಬಂದು ಶಾಸಕರನ್ನಾಗಿ ಮಾಡಿದರು. ಕುಮಾರಸ್ವಾಮಿಯದು ರಾಕ್ಷಸ ಸರ್ಕಾರ ಅಂತೆ. ಅವರಿಗೆ ಮಾನವೀಯತೆ ಇದೆಯಾ? ಅವರು ಇಲ್ಲದಿದ್ದಾಗ 20 ಸಾವಿರ ಅಂತರದಿಂದ ಸಾ.ರಾ.ಮಹೇಶ್ ಗೆಲ್ಲುತ್ತಿದ್ದರು. ಅವರು ಬಂದಮೇಲೆ 1,800 ಲೀಡ್ ತೆಗೆದುಕೊಂಡಿದ್ದಾರೆ ಎಂದು ಕಿಡಿಕಾರಿದರು. ಎಲ್ಲ ಕ್ಷೇತ್ರಕ್ಕಿಂತ ಹೆಚ್ಚು ಹಣವನ್ನು ಈ ಕ್ಷೇತ್ರಕ್ಕೆ ಕೊಟ್ಟಿದ್ದೇನೆ. ಚುನಾವಣಾ ವೆಚ್ಚಕ್ಕೆ ಹಣ ಕೊಟ್ಟೆ. ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ಹಣ ಕೊಟ್ಟೆ. ಆತ ಒಂದೇ ಒಂದು ರೂ. ಕೊಟ್ಟಿದ್ದಾನಾ? ಮೃತ ರೈತರ ಕುಟುಂಬಕ್ಕೆ ಹಣ ಕೊಟ್ಟಿದ್ದಾನಾ ಕೇಳಿ? ಆತನದ್ದು ಸುಳ್ಳಿನ ರಾಜಕೀಯ. ಅಂತಹ ಸುಳ್ಳಲ್ಲಿ ರಾಜಕೀಯ ಮಾಡಬೇಕಾದ ಅವಶ್ಯಕತೆ ನನಗಿಲ್ಲ ಎಂದು ಕಣ್ಣೀರಾದ ಅವರು, ಇಲ್ಲಿ ಜನರ ವಿಶ್ವಾಸ ಗಳಿಸಲು ನಾನು ಕಣ್ಣೀರಿಟ್ಟಿಲ್ಲ ಎಂದರು.
ವೃದ್ಧರ ಜತೆ ಬದುಕುವೆ: ನನಗೆ ಅಧಿಕಾರಕ್ಕಿಂತ ನಿಮ್ಮ ಪ್ರೀತಿ ಮುಖ್ಯ. ನಾನು ದ್ರೋಹ ಮಾಡಿಲ್ಲ. ಸಂಪಾದಿಸಿದ ಕೇತಗೋನಹಳ್ಳಿ ಭೂಮಿಯಲ್ಲಿ ವೃದ್ಧಾಶ್ರಮ ನಿರ್ವಣಕ್ಕೆ ನಿರ್ಧಾರ ಮಾಡಿದ್ದೇನೆ. ವೃದ್ಧರ ಜತೆ ಬದುಕಲು ಚಿಂತಿಸಿದ್ದೇನೆ ಎಂದು ಎಚ್ಡಿಕೆ ಹೇಳಿದರು.
ಅವನೊಬ್ಬ ಕ್ರಿಮಿನಲ್!
ದೇವೇಗೌಡರಿಗೂ ಕೆ.ಆರ್.ಪೇಟೆ ಕ್ಷೇತ್ರಕ್ಕೂ ಬಿಡಿಸಲಾಗದ ನಂಟಿದೆ. ಕಾವೇರಿ ನೀರನ್ನು ಈ ಭಾಗಕ್ಕೆ ಕೊಡಿಸಿದ ಕೀರ್ತಿ ಗೌಡರದ್ದು. ಕೆಲ ಯುವಕರಿಗೆ ಆ ವಿಚಾರ ಗೊತ್ತಿಲ್ಲ. ಅವಕ್ಕೆ ಬರೀ ನಿಖಿಲ್ ಎಲ್ಲಿದ್ದೀಯಪ್ಪ ಅನ್ನೋದಷ್ಟೇ ಗೊತ್ತು. ಈ ಕ್ಷೇತ್ರದ ಜನ ಹಿಂದಿನಿಂದಲೂ ದೇವೇಗೌಡರ ಜತೆಗೆ ಇದ್ದೀರಾ. ಇವತ್ತು ನಮ್ಮನ್ನು ಬಿಟ್ಟು ಹೋದವನ ಬಗ್ಗೆ ಮಾತಾಡಲ್ಲ ಎಂದು ಅನರ್ಹಗೊಂಡಿರುವ ನಾರಾಯಣಗೌಡ ವಿರುದ್ಧ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದರು. ಈ ರಾಜಕಾರಣದಲ್ಲಿ ನಮ್ಮ ಕುಟುಂಬದ ಸ್ವಯಂಕೃತ ಅಪರಾಧವಿದೆ. ದೇವೇಗೌಡರಿಗೆ ಅಂದು ನಾರಾಯಣಗೌಡ ಮರುಳು ಮಾಡಿದ. ಇಡೀ ಕುಟುಂಬ ಅವನ ಪರ ಇತ್ತು. ನಾನು ಅವನಿಗೆ ಬೇಡ, ಕೃಷ್ಣ ಅವರಿಗೆ ಟಿಕೆಟ್ ಕೊಡಬೇಕೆಂದು ನಿರ್ಧರಿಸಿದ್ದೆ. ನನ್ನ ತಂಗಿ ನಾರಾಯಣಗೌಡ ಪರ ಪ್ರಚಾರ ಮಾಡಿದರು. ಹಳ್ಳಿ ಹಳ್ಳಿ ಸುತ್ತಿದ್ದಳು. ಅವಳಿಗೆ ಆತ ಕೊಟ್ಟ ಬಳುವಳಿ ಏನು? ನನ್ನ ತಂಗಿ ಮಗಳ ಮದುವೆಗೆ ದುಡ್ಡು ಕೊಟ್ಟೆ ಅಂತಿದ್ದಾನೆ. ಅವನೊಬ್ಬ ಕ್ರಿಮಿನಲ್. ಅಂತಹ ಕ್ರಿಮಿನಲ್ ಜಿಲ್ಲೆಯೊಳಗೆ ಇನ್ನೊಬ್ಬ ಸಿಗಲ್ಲ. ನನ್ನ ತಂಗಿ ಕುಟುಂಬವನ್ನ ಬೀದಿಗೆ ತಂದ ಕ್ರಿಮಿನಲ್ ಎಂದು ಕಿಡಿಕಾರಿದರು.
ಮಂತ್ರಿಮಂಡಲವಿಲ್ಲದೆ ಯಡಿಯೂರಪ್ಪ ಏಕಾಂಗಿಯಾಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ಪ್ರವಾಹವಾಗಿದ್ದು, ಕಿಂಚಿತ್ತೂ ಗಮನಹರಿಸಿಲ್ಲ. ಸಿಎಂ ಒಬ್ಬರೇ ಎಲ್ಲೆಡೆ ಓಡಾಡಿ ಹೇಗೆ ಸಮಸ್ಯೆ ಬಗೆ ಹರಿಸ್ತಾರೆ ನೋಡೋಣ. ರಾಜ್ಯದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದ್ದು, ಒಕ್ಕಲಿಗ ಅಧಿಕಾರಿಗಳನ್ನು ಚೆಂಡಾಡುತ್ತಿದ್ದಾರೆ. ರವಿಕಾಂತೇಗೌಡರನ್ನು ಕುಮಾರಸ್ವಾಮಿ ಅಭಿಮಾನಿ ಅಂತ ಎತ್ತಂಗಡಿ ಮಾಡಿದ್ದಾ?
| ಎಚ್.ಡಿ.ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ
ಜನರ ಹೃದಯದಲ್ಲಿ ಸಣ್ಣ ಜಾಗ ಸಿಕ್ಕರೆ ಸಾಕು
ಹಾಸನ: ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದಿರುವ ನಾನು, ದೇವರ ಆಶೀರ್ವಾದದಿಂದ ಸಿಎಂ ಸ್ಥಾನ ಅಲಂಕರಿಸಿದ್ದೆ. ಆದರೀಗ ರಾಜಕಾರಣದಿಂದ ಹಿಂದೆ ಸರಿಯಬೇಕೆನಿಸಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ದೇವರ ಆಶೀರ್ವಾದದಿಂದ ಒಮ್ಮೆ 20, ಈಗ 14 ತಿಂಗಳು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ರಾಜ್ಯದ ಜನರ ಹೃದಯದಲ್ಲಿ ಸಣ್ಣ ಜಾಗ ಸಿಕ್ಕರೆ ಸಾಕೆಂಬ ನಿರ್ಧಾರಕ್ಕೆ ಬಂದಿದ್ದೇನೆ. ರಾಜಕೀಯದಲ್ಲಿ ಮುಂದುವರಿಯಲೇಬೇಕೆಂಬ ಹುಚ್ಚು ನನಗಿಲ್ಲ. ಗೂಟ ಹೊಡೆದುಕೊಂಡು ಯಾರೂ ಶಾಶ್ವತವಾಗಿ ಕುರ್ಚಿ ಮೇಲೆ ಇರಲ್ಲ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ನಿಮ್ಮ ತೆವಲು, ಸ್ಟೋರಿಗಾಗಿ ನಮ್ಮ ಕುಟುಂಬವನ್ನು ಕಾಮಿಡಿಯಾಗಿ ಬಳಸಿ ಕೊಳ್ಳಬೇಡಿ ಎಂದು ಮಾಧ್ಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.