ಅಗ್ನಿಪರೀಕ್ಷೆಯಲ್ಲಿ ಪಾಸಾದ ಎಚ್​ಡಿಕೆ, ಇನ್ನು ಜೆಡಿಎಸ್-ಕಾಂಗ್ರೆಸ್ ಆಡಳಿತ ನಿರ್ವಿಘ್ನ

<< ಸ್ಪೀಕರ್ ಆಗಿ ಕೆ.ಆರ್​.ರಮೇಶ್​ ಕುಮಾರ್ ಆಯ್ಕೆ , ಬಿಜೆಪಿಗೆ ಪ್ರತಿಪಕ್ಷ ಸ್ಥಾನ ಕಾಯಂ >>

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ವಿಶ್ವಾಸಮತ ಯಾಚನೆಗೆ ಗೆಲುವಾಗಿದ್ದು, ಇನ್ನು ಮುಂದೆ ನಿರಾತಂಕವಾಗಿ ಆಡಳಿತ ನಡೆಸಬಹುದಾಗಿದೆ. ಎರಡೂ ಪಕ್ಷಗಳು ತಮ್ಮ ಪ್ರಣಾಳಿಕೆಯನ್ನು ಅನುಷ್ಠಾನಕ್ಕೆ ತರಲು ಸಮನ್ವಯದಿಂದ ಕೆಲಸ ಮಾಡಬೇಕಿದೆ. ಪ್ರತಿಪಕ್ಷವಾಗಿ ಬಿಜೆಪಿ ಕಾರ್ಯನಿರ್ವಹಿಸಲಿದೆ.

ವಿಶ್ವಾಸಮತ ಯಾಚನೆ ಮೇಲಿನ ಚರ್ಚೆಯಲ್ಲಿ ಮೊದಲಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿದರೆ, ಪ್ರತ್ಯುತ್ತರವಾಗಿ ಪ್ರತಿಪಕ್ಷ ನಾಯಕ ಬಿ. ಎಸ್​. ಯಡಿಯೂರಪ್ಪ ಭಾಷಣ ಮಾಡಿದರು. ಇಬ್ಬರೂ ನಾಯಕರ ಸುದೀರ್ಘ ಭಾಷಣ ಮಾಡಿದರು. ಒಂದು ಹಂತದಲ್ಲಿ ಬಿಎಸ್​ವೈ ಭಾಷಣದಿಂದ ಸದನವೇ ನಗೆಗಡಲಲ್ಲಿ ತೇಲಿತು. ತಮ್ಮ ಭಾಷಣ ಮುಗಿಸಿ ಬಿಎಸ್​ವೈ ಸಭಾತ್ಯಾಗ ಮಾಡಿದರು. ಪಕ್ಷದ ಇತರೆ ಎಲ್ಲಾ ಶಾಸಕರು ಅವರನ್ನು ಹಿಂಬಾಲಿಸಿದರು. ಹಾಗಾಗಿ ಯಾವುದೇ ಅನಿರೀಕ್ಷಿತ ಬೆಳವಣಿಗೆ ಇಲ್ಲದೆ ಸಮ್ಮಿಶ್ರ ಸರ್ಕಾರಕ್ಕೆ ಬಹುಮತದ ಗೆಲುವು ದೊರೆಯಿತು.

ಕಾಂಗ್ರೆಸ್​ ಹಾಗೂ ಜೆಡಿಎಸ್​ ಪರ 117 ಶಾಸಕರು ಬೆಂಬಲ ಸೂಚಿಸಿದ್ದು ಮ್ಯಾಜಿಕ್​ ನಂಬರ್​ 111ಕ್ಕಿಂತ 6 ಶಾಸಕರ ಹೆಚ್ಚಿನ ಬೆಂಬಲ ಪಡೆದುಕೊಂಡು ಮುಂದಿನ ಐದು ವರ್ಷಗಳು ಅಧಿಕಾರ ನಡೆಸಲು ಸದನದಿಂದ ಸಮ್ಮತಿ ಪಡೆದುಕೊಂಡಿದೆ. ಸದನವನ್ನು ಅನಿರ್ದಿಷ್ಟಾವಧಿಗೆ ಸ್ಪೀಕರ್​ ಮುಂದೂಡಿದ್ದಾರೆ. ಬಹುಮತ ಸಾಬೀತಾದ ಹಿನ್ನೆಲೆಯಲ್ಲಿ ಆಡಳಿತ ಪಕ್ಷಗಳ ಎಲ್ಲ ಸದಸ್ಯರು ಸದನದಲ್ಲೇ ವಿಜಯದ ಸಂಕೇತ ಪ್ರದರ್ಶಿಸಿ, ಪರಸ್ಪರ ಅಭಿನಂದಿಸಿಕೊಂಡು ಸಂಭ್ರಮಿಸಿದರು.

2018ನೇ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಲಭಿಸದ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಇಂದು ವಿಧಾನಸೌಧದಲ್ಲಿ ವಿಶ್ವಾಸಮತ ಯಾಚನೆ ಮಾಡಲಾಯಿತು. ಇದಕ್ಕೂ ಮೊದಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚಿಸಿದ್ದ ಬಿಜೆಪಿ ಬಹುಮತ ಸಾಬೀತುಪಡಿಸಲು ವಿಫಲವಾಗಿ ವಿಶ್ವಾಸಮತ ಯಾಚನೆಗೂ ಮುನ್ನವೇ ಬಿಎಸ್​ವೈ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ರೆಸಾರ್ಟ್​ ವಾಸ್ತವ್ಯ ಅಂತ್ಯ
ಈ ಮೂಲಕ ಇಷ್ಟು ದಿನ ರೆಸಾರ್ಟ್​ನಲ್ಲಿದ್ದ ಕಾಂಗ್ರೆಸ್​ ಹಾಗೂ ಜೆಡಿಎಸ್​ ಶಾಸಕರು ತಮ್ಮ ತಮ್ಮ ಮನೆಗೆ ತೆರಳಲಿದ್ದಾರೆ. ಕಾಂಗ್ರೆಸ್​ -ಜೆಡಿಎಸ್​ ಸಮ್ಮಿಶ್ರ ಸರ್ಕಾರದಿಂದ ರಾಜ್ಯದ ಮುಖ್ಯಮಂತ್ರಿಯಾಗಿ ಬುಧವಾರ (ಮೇ 23ರಂದು) ಎಚ್​.ಡಿ.ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಿದ್ದರು.

ಸಮ್ಮಿಶ್ರ ಸರ್ಕಾರ ರಚನೆವರೆಗೆ…

  1. ಮೇ 12: 2018ರ ಕರ್ನಾಟಕ ವಿಧಾನಸಭಾ ಚುನಾವಣೆ
  2. ಮೇ 15: ಫಲಿತಾಂಶ ಪ್ರಕಟ (222 ವಿಧಾನಸಭಾ ಕ್ಷೇತ್ರಗಳು) ಬಿಜೆಪಿ-104, ಕಾಂಗ್ರೆಸ್​- 78, ಜೆಡಿಎಸ್​- 38, ಪಕ್ಷೇತರರು- 02
  3. ಮೇ 15: ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಬಿಜೆಪಿ ಹಾಗೂ ಕಾಂಗ್ರೆಸ್​-ಜೆಡಿಎಸ್​ ಸಮ್ಮಿಶ್ರ ಸರ್ಕಾರ ರಚಿಸಲು ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಕೆ.
  4. ಮೇ 16: ಬಿಜೆಪಿ ಸರ್ಕಾರ ರಚನೆಗೆ ಗ್ರೀನ್‌ ಸಿಗ್ನಲ್‌ ನೀಡಿದ ರಾಜ್ಯಪಾಲರು.
  5. ಮೇ 17: ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಗುರುವಾರ ಬೆಳಗ್ಗೆ 9ಕ್ಕೆ ರಾಜಭವನದಲ್ಲಿ ಪ್ರಮಾಣವಚನ ಸ್ವೀಕಾರ.
  6. ಮೇ 18: ಹಂಗಾಮಿ ಸಭಾಧ್ಯಕ್ಷರಾಗಿ ಬಿಜೆಪಿಯ ಕೆ.ಜಿ.ಬೋಪಯ್ಯ ನೇಮಕ.
  7. ಮೇ 18: ಕಾಂಗ್ರೆಸ್​-ಜೆಡಿಎಸ್​ ಸುಪ್ರೀಂ ಕೋರ್ಟ್​ಗೆ ಅರ್ಜಿ ಬಹುಮತ ಇಲ್ಲದ ಹೊರತಾಗಿಯೂ ಬಿಜೆಪಿಗೆ ರಾಜ್ಯಪಾಲರು ಸರ್ಕಾರ ರಚಿಸಲು ಆಹ್ವಾನ ನೀಡಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ಜೆಡಿಎಸ್​-ಕಾಂಗ್ರೆಸ್​ ಅರ್ಜಿ ಸಲ್ಲಿಕೆ. ಮಧ್ಯರಾತ್ರಿ ಸುಪ್ರೀಂಕೋರ್ಟ್​​ನ ಸಾಂವಿಧಾನಿಕ ಪೀಠ ವಿಚಾರಣೆ ನಡೆಸಿ ಮೇ 19ರ 4ಗಂಟೆಗೆ ಬಹುಮತ ಸಾಬೀತುಪಡಿಸಲು ಬಿಜೆಪಿ ಸರ್ಕಾರಕ್ಕೆ ಸೂಚನೆ. ಬಹುಮತ ಸಾಬೀತು ಮಾಡುವ ಪ್ರಕ್ರಿಯೆ ನಡೆಯುವಾಗ ಸೂಕ್ತ ಭದ್ರತೆ ಕಲ್ಪಿಸಲು ಸಂಬಂಧಿತ ಡಿಜಿಪಿಗೆ ಆದೇಶಿಸುವುದಾಗಿಯೂ ನ್ಯಾಯಪೀಠ ತಿಳಿಸಿತ್ತು. ಬಹುಮತ ಸಾಬೀತು ಪಡಿಸುವ ಪ್ರಕ್ರಿಯೆಗೆ ಹೆಚ್ಚಿನ ಸಮಯಾವಕಾಶ ನೀಡಲು ಸಾಧ್ಯವಿಲ್ಲ. ಆದ್ದರಿಂದ ಶನಿವಾರ ಸಂಜೆ ನಾಲ್ಕು ಗಂಟೆಗೆ ಸದನದಲ್ಲಿ ಬಹುಮತ ಸಾಬೀತಾಗಬೇಕು ಎಂದು ಸುಪ್ರೀಂ ಕೋರ್ಟ್​ ಆದೇಶಿಸಿತ್ತು.
  8. ಮೇ 19: ವಿಧಾನಸಭೆಯಲ್ಲಿ ನೂತನ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ.
  9. ಮೇ 19: ಬಹುಮತ ಸಾಬೀತು ಪಡಿಸುವ ಮುಂಚೆಯೇ ವಿಶ್ವಾಸಮತ ಯಾಚನೆಯ ಭಾಷಣದ ವೇಳೆಯೇ ಬಿ.ಎಸ್​. ಯಡಿಯೂರಪ್ಪ ರಾಜೀನಾಮೆ ಸಲ್ಲಿಕೆ.
  10. ಮೇ 23: ಜೆಡಿಎಸ್-ಕಾಂಗ್ರೆಸ್​ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ. ದೇವರು, ಕನ್ನಡಿಗರ ಹೆಸರಲ್ಲಿ ಪ್ರಮಾಣ ವಚನ ಪಡೆದ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿಯಾಗಿ ಡಾ.ಜಿ. ಪರಮೇಶ್ವರ್ ಪ್ರಮಾಣ ವಚನ ಸ್ವೀಕಾರ.

Leave a Reply

Your email address will not be published. Required fields are marked *