ನಮ್ಮನ್ನು ಯಾರೂ ಏನೂ ಮಾಡಲಾಗದು: ಸರ್ಕಾರ ಉಳಿಸುವ ಶಕ್ತಿ ನನಗೆ, ಡಿಕೆ ಶಿವಕುಮಾರ್​ಗೆ ಇದೆ

ಚನ್ನಪಟ್ಟಣ: ಈ ವರ್ಷದ ಆಗಸ್ಟ್​ ಬಳಿಕ ಸರ್ಕಾರ ಪತನವಾಗುತ್ತದೆ ಎಂದು ಒಂದು ವರ್ಗ ಗಡುವು ಕೊಟ್ಟಿದೆ. ಆದರೆ ಲೋಕಸಭೆ ಚುನಾವಣೆ ಬಳಿಕವೂ ನಮ್ಮ ಸರ್ಕಾರ ಸುಭದ್ರವಾಗಿರಲಿದೆ. ನನಗೆ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್​ ಅವರಿಗೆ ಸರ್ಕಾರ ಉಳಿಸುವ ಶಕ್ತಿ ಇದೆ ಎಂದು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಸಕಾರ ಕೆಡವಲು ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಅಧಿಕಾರಿಗಳಿಗೆ ಸರ್ಕಾರ ಎಷ್ಟು ದಿನ ಇರಲಿದೆ ಎಂಬ ಮನೋಭಾವವಿದೆ. ಹಾಗಾಗಿ ಈ ಮನೋಭಾವವನ್ನು ಸರಿಪಡಿಸುವ ಜವಾಬ್ದಾರಿ ನನ್ನ ಮೇಲಿದೆ. ನಮ್ಮ ಸರ್ಕಾರ ಕೆಲವು ಜಿಲ್ಲೆಗಳಿಗೆ ಮಾತ್ರ ಅನುದಾನ ಬಿಡುಗಡೆ ಮಾಡುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಆದರೆ ರಾಜ್ಯದ ಸಮಗ್ರ ಅಭಿವೃದ್ಧಿ ಮಾಡುವ ಜವಾಬ್ದಾರಿ ನನ್ನ ಮೇಲಿದೆ. ಅದನ್ನು ನಿಭಾಯಿಸುತ್ತೇನೆ ಎಂದು ಎಚ್​ಡಿಕೆ ತಿಳಿಸಿದರು.

ಲೋಕಸಭೆ ಚುನಾವಣೆಯಲ್ಲಿ ಸೋಲಿನ ಭಯದಿಂದ ಪ್ರಧಾನಿ ನರೇಂದ್ರ ಮೋದಿ ಅವರು 12 ಕೋಟಿ ರೈತರಿಗೆ ವರ್ಷಕ್ಕೆ 6 ಸಾವಿರ ರೂ. ಕೊಡುವುದಾಗಿ ಘೋಷಿಸಿದ್ದಾರೆ. ಆದರೆ ಇದು ಚುನಾವಣೆಗೋಸ್ಕರ ಮಾಡಿರುವ ಘೋಷಣೆ. ಕೇಂದ್ರ ಸರ್ಕಾರ ರಾಜ್ಯದ ಪಾಲಿನ ನರೇಗಾ ಯೋಜನೆಯ 2100 ಕೋಟಿ ರೂ. ಬಿಡುಗಡೆ ಮಾಡಬೇಕಿದೆ ಎಂದು ಕೇಂದ್ರದ ವಿರುದ್ಧ ಕಿಡಿ ಕಾರಿದರು.

ನಾನು ದೂರದಲ್ಲಿದ್ದರೂ ನಿಮ್ಮ ಹೃದಯಲ್ಲಿ ಇದ್ದೇನೆ. ರಾಮನಗರ ಜಿಲ್ಲೆಯ 400 ಕೆರೆಗಳನ್ನು ತುಂಬಿಸಲು ಯೋಜನೆ ಕೈಗೆತ್ತಿಕೊಂಡುದ್ದೇವೆ. ಪ್ರತಿ ಮನೆಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ನೀವು ನಮ್ಮನ್ನು ಬೆಳೆಸಿದ್ದೀರಿ. ನಾವು ಎಂದಿಗೂ ನಿಮ್ಮ ನಂಬಿಕೆ ದ್ರೋಹ ಮಾಡುವುದಿಲ್ಲ. ರಾಜ್ಯದಲ್ಲಿ ನೂರಾರು ಸಮಸ್ಯೆಗಳಿವೆ. ಒಂದೇ ರಾತ್ರಿಯಲ್ಲಿ ಎಲ್ಲವನ್ನೂ ಸರಿಪಡಿಸಲು ಸಾಧ್ಯವಿಲ್ಲ. ಎಲ್ಲಾ ಸಮಸ್ಯೆಗೂ ಶಾಶ್ವತ ಪರಿಹಾರ ಕೊಡಿಸಬೇಕು ಎಂಬುದೇ ನಮ್ಮ ಗುರಿ ಎಂದು ಸಿಎಂ ತಿಳಿಸಿದರು.