ನಮ್ಮ ದೇಶದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂದು ನೋವಿನಿಂದ ಹೇಳುತ್ತಿದ್ದೇನೆ: ಎಚ್‌ಡಿಕೆ

ಮಂಡ್ಯ: ಪ್ರಕಾಶ್ ವ್ಯಕ್ತಿತ್ವ ಜನರಿಗೆ ಗೊತ್ತಿದೆ. ನಮ್ಮ‌ ಪಕ್ಷದ ಕಾರ್ಯಕರ್ತ ಎನ್ನುವುದಕ್ಕಿಂತ ಪ್ರಕಾಶ್ ಜನಪರ ಕಾಳಜಿವುಳ್ಳ ವ್ಯಕ್ತಿಯಾಗಿದ್ದರು. ಇಂತಹ ವ್ಯಕ್ತಿಯನ್ನು ಕಳೆದುಕೊಂಡು ನನಗೆ ನೋವಾಗಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆಪ್ತ ಪ್ರಕಾಶ್ ಅಗಲಿಕೆಗೆ ಕಣ್ಣೀರಿಟ್ಟರು.

ಎರಡು ವರ್ಷಗಳ ಹಿಂದೆ ಈ ಗ್ರಾಮದಲ್ಲಿ ಜೋಡಿ ಹತ್ಯೆಯಾದಾಗ ನಾನು ಈ ಗ್ರಾಮಕ್ಕೆ ಬಂದಿದ್ದೆ. ಆಗ ಪ್ರಕಾಶ್ ಕೊಲೆಯಾದ ವ್ಯಕ್ತಿಗಳ ಕುಟುಂಬದ ಪರ ನಿಂತಿದ್ದ. ಅದೇ ಕಾರಣ ಇವತ್ತು ಪ್ರಕಾಶ್ ಕೊಲೆಯಾಗಲು ಕಾರಣ ಎನಿಸುತ್ತಿದೆ. ಅವತ್ತು ಕೊಲೆ ಮಾಡಿದವರೆ ಇಂದು ಪ್ರಕಾಶ್ ಹತ್ಯೆ ಮಾಡಿದ್ದಾರೆ ಎನ್ನುವ ಮಾಹಿತಿ ಇದೆ ಎಂದರು.

ನಿನ್ನೆ ನಾನು ವಿಜಯಪುರದಲ್ಲಿದ್ದಾಗ ಪ್ರಕಾಶ್ ಸಾವಿನ ಸುದ್ದಿ ಬಂತು. ಆಗ ಮನಸ್ಸಿಗೆ ಆಘಾತವಾಗಿ ಉದ್ವೇಗದಿಂದ ಹಂತಕರನ್ನು ಶೂಟೌಟ್ ಮಾಡಿ ಎಂದಿದ್ದೆ. ನಾನು ಮುಖ್ಯಮಂತ್ರಿಯಾಗಿ ಆ ಮಾತು ಹೇಳಲಿಲ್ಲ. ಪ್ರಜೆಯಾಗಿ ನೋವಿನಿಂದ ಆ ಮಾತು ಹೇಳಿದೆ. ನಮ್ಮ ದೇಶದಲ್ಲಿ ಕಾನೂನು ಸುವ್ಯವಸ್ಥೆ ಸರಿಯಲ್ಲ.ಯಾಕೆಂದರೆ ಕೊಲೆ ಮಾಡುವ ಹಂತಕರು ಬೇಲ್ ಮೇಲೆ ಹೊರಗಡೆ ಬರುತ್ತಾರೆ. ಈ ರೀತಿಯ ವ್ಯವಸ್ಥೆ ನಮ್ಮ ಕಾನೂನಲ್ಲಿದೆ ಎಂದು ಹೇಳಿದರು.

ಮಾಧ್ಯಮದವರಿಂದ ವೈಭವೀಕರಣ

ಶೂಟೌಟ್ ಹೇಳಿಕೆಯನ್ನು ಮಾಧ್ಯಮದವರು ವೈಭವೀಕರಿಸುತ್ತಿದ್ದಾರೆ. ಬಿಜೆಪಿ ಅವರು ನಮ್ಮ‌ ಕಾರ್ಯಕರ್ತರು ಸತ್ತರೆ ಈ ಕಾಳಜಿ‌ ಇರಲ್ಲ ಎನ್ನುತ್ತಿದ್ದಾರೆ. ಆದರೆ, ನನಗೆ ಯಾರ ಹತ್ಯೆಯಾದಾಗಲು ಮನಸ್ಸು ತಡೆಯಲ್ಲ. ನನ್ನ ಆಡಳಿತ ಅವಧಿಯಲ್ಲಿ ಈ ರೀತಿಯ ಘಟನೆಗಳು ಮರುಕಳಿಸಬಾರದು. ಪ್ರಕಾಶ್ ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ಆ ದೇವರು ನೀಡಲಿ ಎಂದು ತಿಳಿಸಿದರು.

ಪ್ರಕಾಶ್ ಹತ್ಯೆಯ ಸೂಚನೆಯನ್ನು ಗ್ರಾಮಸ್ಥರು ಅಧಿಕಾರಿಗಳಿಗೆ ನೀಡಿದರು. ಆದರೆ, ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಿಲ್ಲ ಎನ್ನುವ ಮಾಹಿತಿ ಇದೆ. ಅಂತಹ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಆದೇಶಿಸಿದ್ದೇನೆ. ಪ್ರಕರಣ ಸಂಬಂಧ ಓರ್ವನನ್ನು ಬಂಧಿಸಲಾಗಿದೆ. ಉಳಿದವರ ಪತ್ತೆಗೆ ಪೋಲಿಸರು ಬಲೆ ಬೀಸಿದ್ದಾರೆ ಎಂದರು.
ಸಾವಿನ ಮನೆಯಲ್ಲೂ ಸಿಎಂಗೆ ಜೈಕಾರ

ಪ್ರಕಾಶ್ ಅಂತಿಮ ದರ್ಶನ ಪಡೆದು ಕುಮಾರಸ್ವಾಮಿ ಅವರು ಹೊರಡುವಾಗ ಜೈಕಾರ ಕೂಗಿದ ಜನತೆ ಕೈ ಬೀಸಿದರು. ಜೈಕಾರ ಹಾಕುವ ವೇಳೆ ಸಿಎಂ ತಲೆ ತಗ್ಗಿಸಿ ನಡೆದರು.

One Reply to “ನಮ್ಮ ದೇಶದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂದು ನೋವಿನಿಂದ ಹೇಳುತ್ತಿದ್ದೇನೆ: ಎಚ್‌ಡಿಕೆ”

  1. ನಮ್ಮ ದೇಶದಲ್ಲಿ ಅಲ್ಲಾ, ನನ್ನ ರಾಜ್ಜದಲ್ಲಿ ಅಂತ ಹೇಳು!

Comments are closed.