ನಿನ್ನೆ ನೀಡಿದ್ದ ಸಿ.ಡಿ. ಬಗ್ಗೆ ತನಿಖೆ ಮಾಡಿಕೊಳ್ಳಿ, ನಾನು ಓಡಿ ಹೋಗುವುದಿಲ್ಲ: ಸಿಎಂ ಕುಮಾರಸ್ವಾಮಿ

ಬೆಂಗಳೂರು: ನನ್ನ ಪಕ್ಷದ ವ್ಯಕ್ತಿಯೋರ್ವನಿಗೆ ಎಂಎಲ್​ಸಿ ಮಾಡಲು 25 ಕೋಟಿ ರೂಪಾಯಿ ಕೇಳಿದೆ ಎಂಬ ಆರೋಪದ ಸಿ.ಡಿ. ನಿನ್ನೆ ನೀಡಿದ್ದಾರೆ. ಅದು 2014ರಲ್ಲಿ ನಡೆದ ಘಟನೆ. ಬೇಕಾದರೆ ತನಿಖೆ ಮಾಡಿಸಿಕೊಳ್ಳಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಸದನದಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ನಿಮ್ಮ ಬಿಜೆಪಿಯದ್ದೇ ಇದೆಯಲ್ಲ. ನಾನು ಓಡಿ ಹೋಗುವುದಿಲ್ಲ. ಚರ್ಚೆಗೆ ಸಿದ್ಧನಿದ್ದೇನೆ. ನಮ್ಮದು ಪ್ರಾದೇಶಿಕ ಪಕ್ಷ. ಕಾನೂನು ಬದ್ಧವಾಗಿ ತೆರಿಗೆ ಕಟ್ಟುತ್ತೇವೆ. ನೀವು ಯಾವ ರೀತಿ ತೆರಿಗೆ ಕಟ್ಟುತ್ತೀರಿ ಎಂಬುದೂ ನನಗೆ ಗೊತ್ತಿದೆ. ಈ ಪ್ರಕರಣವನ್ನು ಆಗಲೇ ನೀವೇಕೆ ತನಿಖೆ ಮಾಡಿಸಲಿಲ್ಲ ಎಂಬುದೂ ನನಗೆ ಗೊತ್ತಿದೆ ಎಂದರು.

ನನ್ನ ಹಿಂದಿನ ಪ್ರಕರಣಗಳ ಪ್ರಸ್ತಾಪ ಇಲ್ಲಿ ಅಪ್ರಸ್ತುತ. ಭೋಪಯ್ಯನವರ ಅವಧಿಯಲ್ಲಿ ನಡೆದ ಪ್ರಕರಣವನ್ನೂ ಇಲ್ಲಿ ಹೇಳುವುದು ಅನಗತ್ಯ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಶಾಸಕರ ಪುತ್ರನನ್ನು ನಾನು ಯಾರ ಬಳಿಯೂ ಕಳಿಸಿಲ್ಲ. ಅವರೇ 25 ಬಾರಿ ಅವನಿಗೆ ಫೋನ್​ ಮಾಡಿ ಒತ್ತಡ ಹಾಕಿದ್ದಾರೆ. ಆತನೇ ನನಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ. ಹೋಗಿ ಬಾ ಎಂದು ಹೇಳಿದೆ. ಸಂಕ್ರಾಂತಿ ಡೆಡ್​ಲೈನ್​, ಯುಗಾದಿ ಡೆಡ್​ಲೈನ್​ ಎಲ್ಲ ಕೊಟ್ಟವರು ಯಾರು? ಆಪರೇಷನ್​ ಕಮಲ ಆರಂಭಿಸಿದವರು ಯಾರು ಎಂದು ಕೇಳಿದರು.

ಮುಂಬೈನಲ್ಲಿ ನನ್ನ ಪಕ್ಷದ ಶಾಸಕರೂ ಒಬ್ಬರಿದ್ದಾರೆ. ಅವರನ್ನು ಯಾವ ರೀತಿ ಕೂಡಿ ಹಾಕಲಾಗಿದೆ ಎಂಬುದು ಗೊತ್ತು ಎಂದರು.

ಮುಖ್ಯಮಂತ್ರಿ ಈ ಮಾತನ್ನು ಹೇಳುತ್ತಿದ್ದಂತೆ ಸದನದಲ್ಲಿ ಪ್ರತಿಪಕ್ಷದ ಗದ್ದಲ ಹೆಚ್ಚಾಯಿತು. ಕಲಾಪವನ್ನು 15 ನಿಮಿಷ ಮುಂದೂಡಲಾಯಿತು.