Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಸಾಲಗಾರರಿಗೆ ವರ ತಗ್ಗದ ಕರಭಾರ

Friday, 13.07.2018, 3:05 AM       No Comments

ಬೆಂಗಳೂರು: ಸಾಲಮನ್ನಾ ಘೋಷಣೆಯಿಂದ ರೈತರನ್ನೂ ತೃಪ್ತಿಪಡಿಸಲಾಗದೆ, ಅತ್ತ ಕರಭಾರ ಹೆಚ್ಚಳದಿಂದಾಗಿ ಮಿತ್ರಪಕ್ಷ, ವಿಪಕ್ಷದ ಜತೆಗೆ ಜನತೆಯ ಆಕ್ಷೇಪಕ್ಕೂ ಗುರಿಯಾಗಿ ಇಕ್ಕಟ್ಟಿಗೆ ಸಿಲುಕಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅನ್ನದಾತರ ಮೇಲಿನ ಹೊರೆಯನ್ನು ಮತ್ತಷ್ಟು ತಗ್ಗಿಸುವ ತೀರ್ವನಕ್ಕೆ ಬಂದಿದ್ದಾರೆ. ಚಾಲ್ತಿಸಾಲ ಮನ್ನಾ ಮಾಡಬೇಕೆಂಬ ರೈತರ ಬೇಡಿಕೆಗೆ ಮಣಿದಿರುವ ಅವರು ಸಹಕಾರ ಸಂಘಗಳಲ್ಲಿ ರೈತರು ಪಡೆದ ಸಾಲದಲ್ಲಿ 1 ಲಕ್ಷ ರೂ. ಮನ್ನಾ ಮಾಡುವ ಘೋಷಣೆ ಹೊರಡಿಸಿದ್ದಾರೆ. ಇದರ ಜತೆಗೆ ಅನ್ನಭಾಗ್ಯದ 2 ಕೆಜಿ ಅಕ್ಕಿ ಕಡಿತ ನಿರ್ಧಾರ ಹಿಂಪಡೆದು ಮೈತ್ರಿ ಪಕ್ಷ ಕಾಂಗ್ರೆಸ್ಸನ್ನು ಸಮಾಧಾನ ಮಾಡುವ ಪ್ರಯತ್ನ ನಡೆಸಿದ್ದಾರೆ. ಆದರೆ, ತೈಲ, ಇಂಧನ ತೆರಿಗೆ ಏರಿಕೆ ಹಿಂಪಡೆಯಲು ನಿರಾಕರಿಸುವ ಮೂಲಕ ಸರ್ಕಾರದ ಮೇಲೆ ತಮ್ಮ ನಿಯಂತ್ರಣ ಇರುವುದನ್ನೂ ಪರೋಕ್ಷವಾಗಿ ಸಾಬೀತುಪಡಿಸಿದ್ದಾರೆ.

ವಿಧಾನಸಭೆಯಲ್ಲಿ ಗುರುವಾರ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸುವ ವೇಳೆ ಕುಮಾರಸ್ವಾಮಿ ಈ ನಿರ್ಧಾರವನ್ನು ಪ್ರಕಟಿಸಿದರು. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸಿಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಹೀಗಾಗಿ ಮುಖ್ಯಮಂತ್ರಿಗಳ ಧೋರಣೆಯನ್ನು ಕಾಂಗ್ರೆಸ್ ಹೇಗೆ ಪರಿಗಣಿಸಲಿದೆ ಎಂಬುದು ಸಮ್ಮಿಶ್ರ ಸರ್ಕಾರದ ಭವಿಷ್ಯವನ್ನು ಮತ್ತೊಮ್ಮೆ ಒರೆಗೆ ಹಚ್ಚಲಿದೆ.

ಸಿಎಂ ಹೇಳಿದ್ದೇನು?: ಸರಿಸುಮಾರು 128 ನಿಮಿಷಗಳ ಕಾಲ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದ ಕುಮಾರಸ್ವಾಮಿ, ರಾಜ್ಯದ ರೈತರು, ಸಾರ್ವಜನಿಕರು, ಪ್ರತಿಪಕ್ಷಗಳ ಆಶಯಕ್ಕೆ ತಕ್ಕಂತೆ ರೈತರ ಸಾಲ ಮನ್ನಾ ಮಾಡುವ ಜತೆಗೆ ಸಮಗ್ರ ಅಭಿವೃದ್ಧಿಯ ಯೋಜನೆಗಳಿಗೆ ಸಂಪನ್ಮೂಲ ಕ್ರೋಡೀಕರಣ ಮಾಡಬೇಕಾದ ಅನಿವಾರ್ಯತೆ ಪ್ರತಿಪಾದಿಸಿದರು. ಈ ಸವಾಲುಗಳ ಜತೆಗೆ ಆರ್ಥಿಕ ಶಿಸ್ತನ್ನೂ ಗಮನದಲ್ಲಿಟ್ಟುಕೊಂಡು ಹಂತಹಂತವಾಗಿ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯದ ಎಲ್ಲ ಬ್ಯಾಂಕ್​ಗಳಲ್ಲಿನ ಸುಸ್ತಿ ಸಾಲದ ಮೊತ್ತ 34 ಸಾವಿರ ಕೋಟಿ ರೂ. ಮನ್ನಾ ಮಾಡುವುದಾಗಿ ಬಜೆಟ್​ನಲ್ಲಿ ಪ್ರಸ್ತಾವ ಮಾಡಿದ್ದೆ. ಆದರೆ ಮಿತ್ರಪಕ್ಷ ಕಾಂಗ್ರೆಸ್​ನ ಶಾಸಕರು, ನಮ್ಮ ಮತ್ತು ವಿರೋಧ ಪಕ್ಷದ ಶಾಸಕರೂ ಸೇರಿದಂತೆ ಸಾರ್ವಜನಿಕ ವಲಯದಿಂದ ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂಬ ಒತ್ತಡ ಬಂದಿದೆ. ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿರುವ 48,910 ಕೋಟಿ ರೂ.ಗಳ ಬೆಳೆಸಾಲದ ಪೈಕಿ 22,095 ಕೋಟಿ ರೂ.ಗಳ ಸುಸ್ತಿ ಸಾಲ ಬಾಕಿ ಇದೆ. ಇದರೊಂದಿಗೆ ಈಗಾಗಲೇ ಸಾಲ ಪಾವತಿ ಮಾಡಿರುವ ರೈತರಿಗೆ 25 ಸಾವಿರ ರೂ.ಗಳ ಪ್ರೋತ್ಸಾಹಧನ ಕೊಟ್ಟಲ್ಲಿ 7,183 ಕೋಟಿ ರೂ. ವೆಚ್ಚವಾಗುತ್ತದೆ. ಹೀಗಾಗಿ 29 ಸಾವಿರ ಕೋಟಿ ರೂ.ಗಳ ಜತೆಗೆ ಹಿಂದಿನ ಕಾಂಗ್ರೆಸ್ ಸರ್ಕಾರದ ಸಾಲ ಮನ್ನಾ ಯೋಜನೆಯ ಬಾಕಿ ಮೊತ್ತ 4 ಸಾವಿರ ಕೋಟಿ ರೂ. ಸೇರಿಸಿದರೆ ಒಟ್ಟು 34 ಸಾವಿರ ಕೋಟಿ ರೂ.ಗಳ ಸಾಲ ಮನ್ನಾ ಮಾಡಬೇಕಾಗಿದೆ. ಇದರೊಂದಿಗೆ ಸಹಕಾರ ಬ್ಯಾಂಕ್​ಗಳ 10,700 ಕೋಟಿ ರೂ.ಗಳ ಚಾಲ್ತಿ ಬೆಳೆ ಸಾಲವನ್ನೂ ಮನ್ನಾ ಮಾಡಲು ಸರ್ಕಾರ ತೀರ್ವನಿಸಿದೆ ಎಂದು ವಿವರಿಸಿದರು.

ಸಾಲ ಮನ್ನಾ ಕುರಿತಂತೆ ನಾನಾ ಬ್ಯಾಂಕ್​ಗಳ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮೂರು ಸುತ್ತಿನ ಮಾತುಕತೆ ನಡೆಸಿದ್ದೇನೆ. ಭಾರತೀಯ ಸ್ಟೇಟ್ ಬ್ಯಾಂಕ್ ಈಗಾಗಲೇ ಘೋಷಿಸಿರುವ ಭಾಗಶಃ ಸಾಲ ಮನ್ನಾ ಯೋಜನೆ ಆಧರಿಸಿ, ಎಲ್ಲ ರಾಷ್ಟ್ರೀಕೃತ ಬ್ಯಾಂಕ್​ಗಳ ಸುಸ್ತಿ ಸಾಲದ ವಿವರ ಪಡೆದಿದ್ದೇನೆ. ರಾಷ್ಟ್ರೀಕೃತ ಬ್ಯಾಂಕ್​ಗಳ ಸುಸ್ತಿಸಾಲದ ಮೊತ್ತ 29 ಸಾವಿರ ಕೋಟಿ ರೂ.ಗಳನ್ನು ತಲಾ 6,500 ಕೋಟಿ ರೂ.ಗಳಂತೆ ನಾಲ್ಕು ವಾರ್ಷಿಕ ಕಂತುಗಳಲ್ಲಿ ಭರಿಸಲು ಬ್ಯಾಂಕ್​ಗಳ ಒಪ್ಪಿಗೆ ಪಡೆಯಲಾಗಿದೆ. ಅಲ್ಲದೆ ಸಾಲ ಮನ್ನಾ ಮಾಡಿದ ಬಗ್ಗೆ ಒಂದು ತಿಂಗಳ ಒಳಗಾಗಿ ಋಣಮುಕ್ತ ಪ್ರಮಾಣಪತ್ರಗಳನ್ನು ರೈತರಿಗೆ ನೀಡಲಾಗುವುದು ಎಂದು ಪ್ರಕಟಿಸಿದರು.

ಸಭಾತ್ಯಾಗ

ಯಡಿಯೂರಪ್ಪ ಎತ್ತಿದ ಹಲವು ಪ್ರಶ್ನೆಗಳಿಗೆ ಸಿಎಂ ಕುಮಾರಸ್ವಾಮಿ ಉತ್ತರ ನೀಡಲಿಲ್ಲವಾದ್ದರಿಂದ ಅಸಮಾಧಾನಗೊಂಡ ಬಿಜೆಪಿ ಸದಸ್ಯರು, ‘ಸರ್ಕಾರ ರೈತರಿಗೆ ನೀಡಿದ ಮಾತಿಗೆ ತಪ್ಪಿದೆ’ ಎಂದು ಹೇಳಿ ಸಭಾತ್ಯಾಗ ಮಾಡಿದರು. ನಂತರ ಧನ ವಿನಿಯೋಗ ಮಸೂದೆಗೆ ಅಂಗೀಕಾರ ನೀಡಲಾಯಿತು.

ಅಕ್ಕಿ ಹೆಚ್ಚಳ

ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಪ್ರಮಾಣವನ್ನು 7 ಕೆಜಿಯಿಂದ 5 ಕೆಜಿಗೆ ಕಡಿತ ಮಾಡಿರುವ ಪ್ರಸ್ತಾವಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ನನಗೆ ಸಲಹೆ ಕೊಟ್ಟಿದ್ದಾರೆ. 5 ಕೆಜಿ ಅಕ್ಕಿ ವಿತರಣೆಗೆ 5,158 ಕೋಟಿ ರೂ. ಬೇಕಾಗುತ್ತದೆ. ಕಳೆದ ಫೆಬ್ರವರಿಯಲ್ಲಿ ಬಜೆಟ್ ಮಂಡನೆ ವೇಳೆ 3,097 ಕೋಟಿ ರೂ.ಗಳನ್ನಷ್ಟೇ ತೆಗೆದಿರಿಸಲಾಗಿದೆ. ಆದರೆ ಎಲ್ಲ ಶಾಸಕರ ಭಾವನೆಗಳಿಗೆ ಸ್ಪಂದಿಸಿ ಅಕ್ಕಿಯನ್ನು 7 ಕೆಜಿಗೆ ಹೆಚ್ಚಿಸಲು ತೀರ್ವನಿಸಲಾಗಿದೆ. 5 ಕೆಜಿ ಅಕ್ಕಿ ವಿತರಣೆಗೆ ಕೇಂದ್ರ ಸರ್ಕಾರದಿಂದ ಕೆಜಿಗೆ 3 ರೂ.ಗಳಂತೆ ಖರೀದಿಸಲಾಗುತ್ತಿದೆ. ಆದರೆ ಹೆಚ್ಚುವರಿ 2 ಕೆಜಿ ಅಕ್ಕಿಗೆ ಮುಕ್ತ ಮಾರುಕಟ್ಟೆಯಿಂದ 29 ರೂ.ಗಳಿಗೆ ಕೆಜಿಯಂತೆ ಖರೀದಿಸಬೇಕಾಗಿರುವುದರಿಂದ ಸರ್ಕಾರಕ್ಕೆ 2,500 ಕೋಟಿ ರೂ.ಗಳ ಭಾರವಾಗಲಿದೆ. ಅದನ್ನು ಭರಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.

ಇಂದೂ ಇದೆ ಕಲಾಪ

ಬೆಂಗಳೂರು: ಬಜೆಟ್ ಮೇಲಿನ ಚರ್ಚೆ, ವಿಧೇಯಕ ಮಂಡನೆ ಹಿನ್ನೆಲೆಯಲ್ಲಿ ಸದಸ್ಯರ ಒತ್ತಾಯದ ಮೇರೆಗೆ ವಿಧಾನಸಭೆಯ ಅಧಿವೇಶನವನ್ನು ಒಂದು ದಿನ ಮುಂದುವರಿಸಲು ನಿರ್ಧರಿಸಲಾಗಿದ್ದು, ಶುಕ್ರವಾರವೂ (ಜು.13) ನಡೆಯಲಿದೆ. ಕಲಾಪ ಸಲಹಾ ಸಮಿತಿ ಸಭೆ ನಂತರ ವಿಧಾನಸಭೆಯಲ್ಲಿ ಸಭಾಧ್ಯಕ್ಷ ರಮೇಶ್​ಕುಮಾರ್ ಈ ನಿರ್ಧಾರ ಪ್ರಕಟಿಸಿದರು.

ಯಾರ ಮೇಲುಗೈ?

# ಸಾಲಮನ್ನಾ ಜತೆಗೆ ಅನ್ನಭಾಗ್ಯ ಅಕ್ಕಿ ಹೆಚ್ಚಳ ಘೋಷಣೆ ಶ್ರೇಯವನ್ನು ಮಿತ್ರಪಕ್ಷಗಳಾದ ಜೆಡಿಎಸ್, ಕಾಂಗ್ರೆಸ್ ಎರಡೂ ಸಮನಾಗಿ ಹಂಚಿಕೊಳ್ಳಬಹುದು.

# ಮೇಲ್ನೋಟಕ್ಕೆ ಈ ಘೋಷಣೆ ತನ್ನ ಒತ್ತಡದಿಂದಾದ ಪರಿಣಾಮ ಎಂದು ಕಾಂಗ್ರೆಸ್ ಹೇಳಿಕೊಳ್ಳಬಹುದು. ಜೆಡಿಎಸ್ ಕೂಡ ಇದೇ ವಾದ ಮುಂದಿಡಬಹುದು.

# ಸಾಲಮನ್ನಾ, ಅಕ್ಕಿ ಹೆಚ್ಚಳ ಬೇಡಿಕೆ ಈಡೇರಿಸಿದ್ದರೂ, ತೈಲ, ವಿದ್ಯುತ್ ತೆರಿಗೆ ಇಳಿಸದಿರುವುದರಿಂದ ಸರ್ಕಾರದ ಮೇಲೆ ಜೆಡಿಎಸ್ ನಿಯಂತ್ರಣವಿದೆ ಎಂಬುದನ್ನು ಸಿಎಂ ಪರೋಕ್ಷವಾಗಿ ಕಾಂಗ್ರೆಸ್​ಗೆ ತಿಳಿಸಿದ್ದಾರೆ.

22.33 ಲಕ್ಷ ರೈತರಿಗೆ ಅನುಕೂಲ

ಈಗಾಗಲೇ ಘೋಷಣೆ ಮಾಡಿರುವ ರಾಷ್ಟ್ರೀಕೃತ ಮತ್ತು ಸಹಕಾರ ಬ್ಯಾಂಕ್​ಗಳ ಸುಸ್ತಿ ಬೆಳೆ ಸಾಲದ ಮನ್ನಾ ಜತೆಗೆ ಸಹಕಾರ ಬ್ಯಾಂಕ್​ಗಳಲ್ಲಿ ಜುಲೈ 10ರವರೆಗೆ ಪಡೆದ ಚಾಲ್ತಿ ಸಾಲದಲ್ಲಿ 1 ಲಕ್ಷ ರೂ.ವರೆಗೆ ಮನ್ನಾ ಹಾಗೂ ಸಾಲ ಮರುಪಾವತಿಸಿದ ರೈತರಿಗೆ ಘೋಷಿಸಿದ್ದ 25 ಸಾವಿರ ರೂ.ಗಳ ಪ್ರೋತ್ಸಾಹ ಧನವನ್ನು 1 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ಇದರಿಂದ ಸಾಲ ಮನ್ನಾ ಮೊತ್ತ ಒಟ್ಟು 10,700 ರೂ. ಆಗಲಿದ್ದು, 22.23 ಲಕ್ಷ ರೈತರಿಗೆ ಅನುಕೂಲ ಆಗಲಿದೆ.

ಜನರ ನಿರೀಕ್ಷೆ ಏನಿತ್ತು?

# 25 ಸಾವಿರ ರೂ.ಸೊಸೈಟಿ ಸಾಲ ಮನ್ನಾ

# ಅನ್ನಭಾಗ್ಯದ ಅಕ್ಕಿ ಮತ್ತೆ 7 ಕೆಜಿಗೆ ಹೆಚ್ಚಳ

# ವಿದ್ಯುತ್, ಪೆಟ್ರೋಲಿಯಂ ತೆರಿಗೆ ಹೆಚ್ಚಳ ವಾಪಸ್

ತೆರಿಗೆ ಏರಿಕೆ ಸಮರ್ಥನೆ

ವಿದ್ಯುತ್ ತೆರಿಗೆಯನ್ನು ಶೇ.6ರಿಂದ ಶೇ.9ಕ್ಕೆ ಹೆಚ್ಚಿಸುವ ಬಜೆಟ್ ಪ್ರಸ್ತಾವವನ್ನು ಬಲವಾಗಿ ಸಮರ್ಥಿಸಿಕೊಂಡ ಸಿಎಂ ಕುಮಾರಸ್ವಾಮಿ, ವಿದ್ಯುತ್ ಶುಲ್ಕ ಹೆಚ್ಚಳದಿಂದ ಪ್ರತಿ ತಿಂಗಳು ಒಬ್ಬ ಗ್ರಾಹಕರಿಗೆ 10 ರೂ. ಭಾರ ಆಗುತ್ತದೆ. ಇದರಿಂದ ಆಕರವಾಗುವ ಹೆಚ್ಚುವರಿ ತೆರಿಗೆ 188 ಕೋಟಿ ರೂಪಾಯಿ. ಇನ್ನು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೇರಿರುವ ಹೆಚ್ಚುವರಿ ತೆರಿಗೆಯಿಂದ ಗ್ರಾಹಕರಿಗೆ ಅಷ್ಟೇನೂ ಹೊರೆ ಆಗಲಾರದು. ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಈಗಲೂ ಕಡಿಮೆ ದರದಲ್ಲೇ ಇಂಧನ ಲಭ್ಯವಾಗುತ್ತಿದೆ. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಇಂಧನ ದರ ಕಡಿಮೆಯಿದೆ ಎಂದು ವಿವರಣೆ ನೀಡಿದರು.

-ಠಿ;10,700 ಕೋಟಿ ಬೇಕು

ಸಹಕಾರ ಬ್ಯಾಂಕ್​ಗಳಲ್ಲಿನ ಚಾಲ್ತಿ ಸಾಲ ಮನ್ನಾ ಮಾಡುವುದರಿಂದ 10,700 ಕೋಟಿ ರೂ. ವೆಚ್ಚವಾಗುತ್ತದೆ ಎಂದು ಮುಖ್ಯಮಂತ್ರಿಗಳೇ ಸದನದ ಗಮನಕ್ಕೆ ತಂದರು. ಮೈತ್ರಿಪಕ್ಷ ಕಾಂಗ್ರೆಸ್​ನ ಬೇಡಿಕೆಗೆ ಅರ್ಧದಷ್ಟು ಮಾನ್ಯತೆ ಕೊಟ್ಟ ಮುಖ್ಯಮಂತ್ರಿಗಳು ಪ್ರತಿಪಕ್ಷ ಬಿಜೆಪಿ ಆಗ್ರಹಿಸಿದ್ದ ರೈತರ ಸಂಪೂರ್ಣ ಸಾಲಮನ್ನಾ ಬೇಡಿಕೆಯನ್ನು ಸಹಕಾರ ಬ್ಯಾಂಕ್​ಗಳಿಗೆ ಸೀಮಿತಗೊಳಿಸಿದ್ದಾರೆ.

ಬಿಎಸ್​ವೈ ಆಕ್ಷೇಪ

ಕುಮಾರಸ್ವಾಮಿ ಉತ್ತರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ‘ನೀವೇ ಘೋಷಿಸಿದಂತೆ 2 ಲಕ್ಷ ರೂ.ಗಳವರೆಗಿನ ಎಲ್ಲ ಬ್ಯಾಂಕ್​ಗಳ ಎಲ್ಲ ರೀತಿಯ ಸಾಲವನ್ನು ಮನ್ನಾ ಮಾಡಬೇಕಾಗಿತ್ತು. ಇದೀಗ ಸಹಕಾರ ಬ್ಯಾಂಕ್​ಗಳಲ್ಲಿನ 1 ಲಕ್ಷ ರೂ.ಗಳವರೆಗಿನ ಸಾಲ ಮನ್ನಾ ಮಾಡುವುದಾಗಿ ಹೇಳುತ್ತಿದ್ದೀರಿ. ಇದರ ಮೊತ್ತವೆಷ್ಟು ಹಾಗೂ ಎಷ್ಟು ರೈತರಿಗೆ ಇದರಿಂದ ಅನುಕೂಲವಾಗುತ್ತದೆ ಎಂಬುದಕ್ಕೆ ಉತ್ತರ ಕೊಡಿ’ ಎಂದು ಆಗ್ರಹಿಸಿದರು. ನಾಲ್ಕು ಕಂತುಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್​ಗಳಿಗೆ ಸಾಲದ ಮೊತ್ತ ಭರಿಸಿದರೆ ಒಂದೇ ತಿಂಗಳಲ್ಲಿ ಋಣಮುಕ್ತ ಪ್ರಮಾಣಪತ್ರಗಳನ್ನು ಬ್ಯಾಕ್​ಗಳು ಹೇಗೆ ಕೊಡುತ್ತವೆ? ಅಲ್ಲದೆ ನಾಲ್ಕು ಕಂತುಗಳಲ್ಲಿ ಭರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಒಪ್ಪಿಗೆ ನೀಡುತ್ತದೆಯೇ ಎಂಬುದನ್ನೂ ತಿಳಿಸಿ. ಜತೆಗೆ ಸಿಬಿಲ್ ಒಪ್ಪಿಗೆ ಇಲ್ಲದೆ ಹೊಸ ಸಾಲ ರೈತರಿಗೆ ಹೇಗೆ ಸಿಗುತ್ತದೆ ಎಂದು ಪ್ರಶ್ನಿಸಿದರು.

Leave a Reply

Your email address will not be published. Required fields are marked *

Back To Top