Thursday, 15th November 2018  

Vijayavani

ಸಚಿವ ಸ್ಥಾನಕ್ಕಾಗಿ ಬಳ್ಳಾರಿ ಶಾಸಕರ ಲಾಬಿ - ತುಕಾರಾಂ ಸೇರಿದಂತೆ ಐವರ ಪೈಪೋಟಿ        RSS ಬೈಠಕ್​​ನಲ್ಲಿ ರಾಮಮಂದಿರ ಪ್ರತಿಧ್ವನಿ-ಶಬರಿಮಲೆ ಹೋರಾಟದಿಂದ ಹಿಂದೆ ಸರಿಯಲ್ಲ-ಷಾ ಸಮ್ಮುಖದಲ್ಲಿ ನಿರ್ಧಾರ        KRS ಬಳಿ 125 ಅಡಿ ಎತ್ತರದ ಕಾವೇರಿ ಮಾತೆ ಸ್ಟ್ಯಾಚ್ಯೂ ನಿರ್ಧಾರ-ಡಿಕೆಶಿ ನೇತೃತ್ವದ ಸಮಿತಿಯ ತೀರ್ಮಾನ        ರವಿ ಕೊಲೆ ಹಿಂದೆ ಸೈಲೆಂಟ್ ಸುನಿಲನ ನೆರಳು - ತುಮಕೂರು ಡಾಬಾದಲ್ಲೇ ನಡೆದಿತ್ತು ಹಂತಕ ಮೀಟಿಂಗ್        ತಮಿಳುನಾಡಿನಲ್ಲಿ ಗಜ ಆರ್ಭಟ-ಸಮುದ್ರದಲ್ಲಿ ಅಲೆಗಳ ಅಬ್ಬರ-ಬೆಂಗಳೂರಿನ ಹಲವೆಡೆ ಮಳೆ ಸಾಧ್ಯತೆ        ದೀಪ್​-ವೀರ್​​ ಕಲ್ಯಾಣೋತ್ಸವ-ನಿನ್ನೆ ಕೊಂಕಣಿ, ಇಂದು ಸಿಂಧಿ ಸ್ಟೈಲ್​ ಕಲ್ಯಾಣ-ಇಟಲಿಯಲ್ಲಿ ಅದ್ದೂರಿ ವಿವಾಹ       
Breaking News

ಸಂಡೂರು ಗಣಿಗೆ ಜೀವ ಮಾತು ತಪ್ಪಿದ ಕುಮಾರ

Tuesday, 19.06.2018, 3:05 AM       No Comments

| ಕೆ.ಪ್ರಹ್ಲಾದ ಸಂಡೂರು (ಬಳ್ಳಾರಿ)

ಸಂಡೂರಿನ ಕುಮಾರಸ್ವಾಮಿ ದೇವಸ್ಥಾನದಲ್ಲಿ ನಿಂತು ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ಕೊಡುವ ಸಿದ್ದರಾಮಯ್ಯ ಸರ್ಕಾರದ ನಡೆ ವಿರುದ್ಧ ತೊಡೆ ತಟ್ಟಿ, ನಿರ್ಧಾರ ಹಿಂಪಡೆಯುವಂತೆ ಎಚ್ಚರಿಸಿದ್ದ ಎಚ್.ಡಿ.ಕುಮಾರಸ್ವಾಮಿ ನಾಲ್ಕೇ ತಿಂಗಳಲ್ಲಿ ಮಾತು ತಪ್ಪಿದ್ದಾರೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಒಂದೇ ವಾರದಲ್ಲಿ ಐತಿಹಾಸಿಕ ಹಾಗೂ ಪಾರಂಪರಿಕ ತಾಣವಾಗುವತ್ತ ಹೆಜ್ಜೆ ಇಟ್ಟಿರುವ ಪ್ರದೇಶಗಳಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವ ಮೂಲಕ ವಿವಾದ ಹುಟ್ಟಿಹಾಕಿದ್ದಾರೆ.

ಹೊರಬಿತ್ತು ಆದೇಶ: ವಿಧಾನಸಭೆ ಚುನಾವಣೆಗೆ ಮುನ್ನ ಪ್ರಚಾರಕ್ಕಾಗಿ ಫೆ.26ರಂದು ಸಂಡೂರಿಗೆ ಆಗಮಿಸಿದ್ದ ಎಚ್​ಡಿಕೆ, ಪ್ರಖ್ಯಾತ ಕುಮಾರಸ್ವಾಮಿ ದೇಗುಲಕ್ಕೆ ಭೇಟಿ ನೀಡಿ, ದೇವಸ್ಥಾನದ ಸುತ್ತ ಗಣಿಗಾರಿಕೆಗೆ ಅವಕಾಶ ನೀಡಬಾರದೆಂದು ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದರು.

ವಿಪರ್ಯಾಸವೆಂದರೆ ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಒಂದೇ ವಾರದಲ್ಲಿ (ಮೇ 31ಕ್ಕೆ) ಗಣಿಗಾರಿಕೆಗೆ ಅವಕಾಶ ನೀಡಿರುವ ಆದೇಶ ಹೊರಬಿದ್ದಿದೆ. ಸ್ವಾಮಿಮಲೆ ಅರಣ್ಯ ಪ್ರದೇಶ ವ್ಯಾಪ್ತಿಯ 21 ಹೆಕ್ಟೇರ್ ಪ್ರದೇಶವನ್ನು ಸರ್ಕಾರ ಮೇ 31ರಂದು ಜಿಂದಾಲ್ ಒಡೆತನದ ನಂದಿ ಮೈನಿಂಗ್ ಕಂಪನಿಗೆ ಅದಿರು ಉತ್ಪಾದನೆ ಮಾಡಲು ಮರು ಗಣಿಗುತ್ತಿಗೆ ನೀಡಿದೆ. ಗಣಿಪ್ರದೇಶವನ್ನು ಈ ಹಿಂದೆ ಎಚ್.ಟಿ.ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಸಿಇಸಿ ನೀಡಿದ ವರದಿಯಂತೆ ಸುಪ್ರೀಂಕೋರ್ಟ್ ಆದೇಶದಂತೆ ಸದರಿ ಗಣಿ ಪ್ರದೇಶವನ್ನು ಸಿ ಕೆಟಗರಿಗೆ ತಳ್ಳಲಾಗಿತ್ತು.

ಲಾಬಿಗೆ ಮಣೆ

1978ರ ಪುರಾತತ್ವ ಕಾಯ್ದೆ ಅನ್ವಯ ಐತಿಹಾಸಿಕ ಮತ್ತು ಪಾರಂಪರಿಕ ತಾಣಗಳ ಸುತ್ತಮುತ್ತಲಿನ ಎರಡು ಕಿಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸುವಂತಿಲ್ಲ. ಪ್ರಭಾವಿ ಉದ್ಯಮಿಗಳಿಗೆ ಗಣಿಗಾರಿಕೆಗೆ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ 1978ರ ಪುರಾತತ್ವ ಕಾಯ್ದೆಯನ್ನು 2015ರ ಡಿಸೆಂಬರ್​ನಲ್ಲಿ ಹಿಂಪಡೆದು ಎರಡು ಕಿಮೀ ವ್ಯಾಪ್ತಿಯನ್ನು ಕೇವಲ 300ಮೀಟರ್​ಗೆ ಇಳಿಸಿತ್ತು. ತಾಲೂಕು ಸೇರಿ ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ವಿರುದ್ಧ ತೊಡೆತಟ್ಟಿದ ಕಾಂಗ್ರೆಸ್, ಬಳ್ಳಾರಿವರೆಗೆ ಪಾದಯಾತ್ರೆ ಮಾಡುವ ಮೂಲಕ ಸಿದ್ದರಾಮಯ್ಯ ಸಿಎಂ ಆಗಿದ್ದರು. ಆದರೆ, ಅವರೇ ಗಣಿಲಾಬಿಗೆ ಮಣಿದವರಂತೆ ಕಾಯ್ದೆಗೆ ತಿದ್ದುಪಡಿ ಮಾಡಿದ್ದು ವ್ಯಾಪಕ ಟೇಕೆಗೆ ಗುರಿಯಾಗಿತ್ತು.

ತಜ್ಞರ ಪರಿಶೀಲನೆ

ದೇವಸ್ಥಾನದ ಸುತ್ತಮುತ್ತ ಎರಡು ಕಿಮೀ ವ್ಯಾಪ್ತಿ ಗಣಿಗಾರಿಕೆ ನಿಷೇಧಿಸಿ ಕುಮಾರಸ್ವಾಮಿ ಬೆಟ್ಟವನ್ನು ರಾಷ್ಟ್ರೀಯ ಪಾರಂಪರಿಕ ತಾಣವೆಂದು ಘೊಷಿಸಲು ಒತ್ತಾಯಿಸಿ ವ್ಯಾಪಕ ಹೋರಾಟಗಳು ನಡೆದವು. ಇದರ ಪರಿಣಾಮ ಸರ್ಕಾರದ ಸೂಚನೆ ಮೇರೆಗೆ 2017ರ ಸೆ.7ರಂದು ಭಾರತೀಯ ಪುರಾತತ್ವ ಇಲಾಖೆ ದಕ್ಷಿಣ ವಲಯ ನಿರ್ದೇಶಕಿ ಸತ್ಯಭಾಮ ಬದ್ರಿನಾಥ ನೇತೃತ್ವದ ತಜ್ಞರ ತಂಡ ಮತ್ತು 2017ರ ಅ.3ರಂದು ರಾಜ್ಯ ಪುರಾತತ್ವ ಇಲಾಖೆ ಆಯುಕ್ತೆ ಡಾ.ಮಂಜುಳಾ ನೇತೃತ್ವದ ಅಧಿಕಾರಿಗಳ ತಂಡ ಆಗಮಿಸಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವುದಾಗಿ ಹೇಳಿತ್ತು.

ಸಂಡೂರು ತಾಲೂಕಿನ ಸ್ವಾಮಿಮಲೆ ಅರಣ್ಯ ಪ್ರದೇಶದಲ್ಲಿನ ಸಿ ಕೆಟಗರಿಗೆ ಸೇರಿದ್ದ ಹೊತೂರ್ ಟ್ರೇಡರ್ಸ್​ನ (ಎಚ್.ಟಿ)21.6 ಹೆಕ್ಟೇರ್ ಪ್ರದೇಶವನ್ನು ಜೆಎಸ್​ಡಬ್ಲ್ಯು (ನಂದಿ ಮೈನಿಂಗ್ ಕಂಪನಿ)ಗೆ ಸಿಇಸಿ ಮಾನಿಟರಿಂಗ್ ಕಮಿಟಿ ನಿರ್ದೇಶನದ ಮೇರೆಗೆ ಇಲಾಖೆಯಿಂದ ಗಣಿಗುತ್ತಿಗೆ ನೀಡಲಾಗಿದೆ.

| ಮಹಾವೀರ್ ಉಪನಿರ್ದೇಶಕ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಹೊಸಪೇಟೆ

ಅಧಿಕಾರಕ್ಕೆ ಬಂದರೆ ತಕ್ಷಣವೇ ದೇವಸ್ಥಾನದ ಸುತ್ತಮುತ್ತ ಗಣಿಗಾರಿಕೆಗೆ ನೀಡಿರುವ ಅವಕಾಶ ರದ್ದುಪಡಿಸಲಾಗುವುದು, ಯಾವುದೇ ಕಾರಣಕ್ಕೂ ಅಲ್ಲಿ ಗಣಿಗಾರಿಕೆ ನಡೆಸಲು ಬಿಡುವುದಿಲ್ಲ ಎಂದು ಹೇಳಿದ್ದ ಮಾತಿಗೆ ಬದ್ಧರಾಗಿ ಸಿಎಂ ಕುಮಾರಸ್ವಾಮಿ ನಡೆದುಕೊಳ್ಳಬೇಕು.

| ಟಿ.ಎಂ.ಶಿವಕುಮಾರ್ ಜನಸಂಗ್ರಾಮ ಪರಿಷತ್ ಉಪಾಧ್ಯಕ್ಷ

Leave a Reply

Your email address will not be published. Required fields are marked *

Back To Top