ಮೃತ ಪ್ರೊಬೆಷನರಿ ಎಸ್​ಐ ಕುಟುಂಬಸ್ಥರ ನೋವಿಗೆ ಮಿಡಿದ ಸಹ ಪ್ರಶಿಕ್ಷಣಾರ್ಥಿಗಳು: ಸಿಎಂ ಶ್ಲಾಘನೆ

ಬೆಂಗಳೂರು: ಕಲಬುರಗಿಯಲ್ಲಿ ಮೃತಪಟ್ಟಿದ್ದ ಪ್ರೊಬೆಷನರಿ ಎಸ್​ಐ ಬಸವರಾಜ ಶಂಕರಪ್ಪ ಮಂಚನೂರು ಅವರ ಕುಟುಂಬಸ್ಥರ ನೋವಿಗೆ ಸ್ಪಂದಿಸಿ ಆರ್ಥಿಕ ಸಹಾಯ ಮಾಡಲು ಮುಂದಾಗಿರುವ ಸಹ ಪ್ರಶಿಕ್ಷಾರ್ಥಿಗಳ ನಿರ್ಧಾರವನ್ನು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಶ್ಲಾಘಿಸಿದ್ದಾರೆ.

ಕಲಬುರಗಿಯ ನಾಗನಹಳ್ಳಿಯಲ್ಲಿರುವ ಪೊಲೀಸ್​ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದ ಬಸವರಾಜ ಅವರ ಮೃತದೇಹ ಭಾನುವಾರ ನಗರದ ರಾಮಮಂದಿರ ಬಳಿ ಪತ್ತೆಯಾಗಿತ್ತು. ತಕ್ಷಣ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ 590 ಪ್ರಶಿಕ್ಷಣಾರ್ಥಿಗಳು ಬಸವರಾಜ ಅವರ ಕುಟುಂಬಸ್ಥರಿಗೆ ನೆರವಾಗಲು ನಿರ್ಧರಿಸಿ ತಲಾ 10 ಸಾವಿರದಂತೆ ಒಟ್ಟು 59 ಲಕ್ಷ ರೂ. ನೀಡುವುದಾಗಿ ತಿಳಿಸಿದ್ದರು.

ಸಹ ಪ್ರಶಿಕ್ಷಣಾರ್ಥಿಗಳ ಈ ನಿರ್ಧಾರವನ್ನು ಸಿಎಂ ಶ್ಲಾಘಿಸಿ ಟ್ವೀಟ್​ ಮಾಡಿದ್ದು, ರಾಜ್ಯ ಸರ್ಕಾರ ನಿಯಮಾನುಸಾರ ಬಸವರಾಜ ಅವರ ಕುಟುಂಬಸ್ಥರಿಗೆ ನೀಡಬೇಕಾದ ಪರಿಹಾರವನ್ನು ತ್ವರಿತವಾಗಿ ಬಿಡುಗಡೆ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.