ನವ ಬೆಂಗಳೂರು ನಿರ್ಮಾಣ ಕನಸು

ಸಿಲಿಕಾನ್ ಸಿಟಿಯ ಬ್ರಾ್ಯಂಡ್ ಮೌಲ್ಯ ಹೆಚ್ಚಿಸುವ ಜತೆಜತೆಗೆ ‘ನವ ಬೆಂಗಳೂರು’ ನಿರ್ವಣದ ಬಗ್ಗೆ ಬಜೆಟ್​ನಲ್ಲಿ ಉಲ್ಲೇಖಿಸಲಾಗಿದೆ. ಅದಕ್ಕಾಗಿ ಬಿಬಿಎಂಪಿಗೆ 8,015 ಕೋಟಿ ರೂ. ಅನುದಾನ ಘೋಷಿಸಲಾಗಿದೆ. ಆದರೆ, ಹಿಂದಿನ ಬಜೆಟ್​ಗಳಲ್ಲಿ ಘೋಷಿಸಿದ ಯೋಜನೆಗಳನ್ನೇ ಮತ್ತೆ ಘೋಷಿಸುವ ಮೂಲಕ ‘ಹೊಸ ಶೀಷೆಗೆ ಹಳೇ ಮದ್ಯ’ ತುಂಬುವ ಕೆಲಸ ಮಾಡಲಾಗಿದೆ.

ಹಲವು ಸಮಸ್ಯೆಗಳಿಂದ ಬಳಲುತ್ತಿರುವ ಬೆಂಗಳೂರನ್ನು ಹೊಸದಾಗಿ ನಿರ್ಮಾಣ ಮಾಡುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಜೆಟ್​ನಲ್ಲಿ ಘೋಷಿಸಿದ್ದಾರೆ. ಅದಕ್ಕೆ ತಕ್ಕಂತೆ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅನುದಾನ ನೀಡುವುದಾಗಿ ತಿಳಿಸಿದ್ದಾರೆ. ಆದರೆ, ಅನುದಾನವನ್ನು 2 ವರ್ಷಗಳಿಗೆ ವಿಂಗಡಿಸಲಾಗಿದೆ. 2019-20ರಲ್ಲಿ 2,300 ಕೋಟಿ ರೂ. ಹಾಗೂ 5,715 ಕೋಟಿ ರೂ.ಗಳನ್ನು 2020-21ಕ್ಕೆ ಅವಧಿಗೆ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಕಳೆದ ಬಾರಿಯಂತೆ ಈ ವರ್ಷವೂ ನಿರೀಕ್ಷಿತ ಅನುದಾನ ಸಿಕ್ಕಿಲ್ಲ.

ನವ ಬೆಂಗಳೂರು ನಿರ್ಮಾಣ: ಬಜೆಟ್​ನಲ್ಲಿ ಘೋಷಿಸಿದಂತೆ ನವ ಬೆಂಗಳೂರು ಕ್ರಿಯಾಯೋಜನೆ ಅಡಿಯಲ್ಲಿ ವೈಟ್​ಟಾಪಿಂಗ್ ರಸ್ತೆ, ಕೆರೆಗಳ ಅಭಿವೃದ್ಧಿ, ಗ್ರೇಡ್ ಸಪರೇಟರ್​ಗಳ ನಿರ್ವಣ, ಬಿಬಿಎಂಪಿಗೆ ಸೇರ್ಪಡೆಯಾಗಿರುವ 110 ಹಳ್ಳಿಗಳ ಅಭಿವೃದ್ಧಿ ಸೇರಿ ವಿವಿಧ 12 ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತದೆ.

ಎಲಿವೇಟೆಡ್ ಕಾರಿಡಾರ್​ಗೆ 1,000 ಕೋಟಿ ರೂ.

ನವ ಬೆಂಗಳೂರು ನಿರ್ಮಾಣ ಯೋಜನೆ ಹೊರತುಪಡಿಸಿ ಎಲಿವೇಟೆಡ್ ಕಾರಿಡಾರ್​ಗೆ ಹೆಚ್ಚಿನ ಹಣ ವ್ಯಯಿಸಲಾಗುತ್ತಿದೆ. ಈ ವರ್ಷವೂ ಯೋಜನೆಗೆ 1 ಸಾವಿರ ಕೋಟಿ ರೂ. ನೀಡುವುದಾಗಿ ಘೋಷಿಸಲಾಗಿದೆ. ಕಳೆದ ಕೆಲ ಬಜೆಟ್​ನಿಂದಲೂ ಘೋಷಣೆಯಾಗುತ್ತಿರುವ ವಾಹನ ನಿಲುಗಡೆ ನೀತಿಯನ್ನು ಮತ್ತೊಮ್ಮೆ ಘೋಷಿಸಲಾಗಿದೆ. 10 ಸಾವಿರ ವಾಹನಗಳ ನಿಲುಗಡೆಗೆ ಅವಕಾಶ ನೀಡಲು 87 ರಸ್ತೆಗಳಲ್ಲಿ ಸ್ಮಾರ್ಟ್ ವಾಹನ ನಿಲುಗಡೆ ವ್ಯವಸ್ಥೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿದೆ. ಆದರೆ, ಅದಕ್ಕೆ ಎಷ್ಟು ಹಣ ವ್ಯಯಿಸಲಾಗುತ್ತದೆ ಎಂಬ ಬಗ್ಗೆ ನಿಖರ ಮಾಹಿತಿ ನೀಡಿಲ್ಲ. ಹೆಬ್ಬಾಳ ಮತ್ತು ಕೆ.ಆರ್. ಪುರ ಮೇಲ್ಸೇತುವೆಗಳಲ್ಲಿ ಹೆಚ್ಚುವರಿ ಲೂಪ್ ನಿರ್ಮಾಣ ಮಾಡುವ ಯೋಜನೆಗಳು ಕೆಲ ವರ್ಷಗಳಿಂದ ಕೇಳಿಬರುತ್ತಲೇ ಇದೆ. ಅದನ್ನು ಪುನರಾವರ್ತಿಸಲಾಗಿದೆ. ಗೊರಗುಂಟೆಪಾಳ್ಯದಲ್ಲಿ ಹೊಸದಾಗಿ ಕೆಳರಸ್ತೆ ನಿರ್ಮಾಣ ಮಾಡುವುದಾಗಿ ಉಲ್ಲೇಖಿಸಲಾಗಿದೆ. ಈ 3 ಯೋಜನೆಗಳಿಗೆ ಒಟ್ಟು 195 ಕೋಟಿ ರೂ. ಖರ್ಚು ಮಾಡಲಾಗುತ್ತದೆ. 5 ಲಕ್ಷ ಬೀದಿ ದೀಪಗಳಿಗೆ ಎಲ್​ಇಡಿ ಬಲ್ಬ್ ಅಳವಡಿಸುವ ಯೋಜನೆಗೆ ಬಿಬಿಎಂಪಿ ಈಗಾಗಲೇ ಚಾಲನೆ ನೀಡಿದೆ. ಅದನ್ನು ಮತ್ತೊಮ್ಮೆ ಬಜೆಟ್​ನಲ್ಲಿ ಪ್ರಸ್ತಾಪಿಸಲಾಗಿದೆ.

ಪೆರಿಫೆರಲ್ ವರ್ತಲ ರಸ್ತೆಗೆ ಸಾವಿರ ಕೋಟಿ ರೂ. ಅನುದಾನ

ಸಂಚಾರದಟ್ಟಣೆಯಿಂದ ಬೇಸತ್ತಿರುವ ನಾಗರಿಕರಿಗೆ ರಿಲೀಫ್ ನೀಡಲು ಸರ್ಕಾರ ಹಲವು ಯೋಜನೆ ಕೈಗೆತ್ತಿಕೊಂಡಿದೆ. ಇದರ ಭಾಗವಾಗಿ ಇಡೀ ಬೆಂಗಳೂರನ್ನು ಹೊರವಲಯದಲ್ಲಿ ಸಂರ್ಪಸುವ ಪೆರಿಫೆರಲ್ ವರ್ತಲ ರಸ್ತೆ ನಿರ್ವಣಕ್ಕೆ 1 ಸಾವಿರ ಕೋಟಿ ರೂ. ನೀಡುವುದಾಗಿ ಸಿಎಂ ಘೋಷಿಸಿದ್ದಾರೆ. ಯೋಜನೆ ಒಟ್ಟು ವೆಚ್ಚ 17,200 ಕೋಟಿ ರೂ.ಗಳಾಗಿದ್ದು, ಪ್ರಸಕ್ತ ಸಾಲಿನಲ್ಲಿ ಸಾವಿರ ಕೋಟಿ ರೂ. ಬಿಡುಗಡೆಯಾಗಲಿದೆ.

ಘನತ್ಯಾಜ್ಯ ನಿರ್ವಹಣೆಗೆ ಒಂದೇ ಯೋಜನೆ

ತ್ಯಾಜ್ಯ ನಿರ್ವಹಣೆಗೆ ಪ್ರಮುಖ ಯೋಜನೆ ಘೋಷಿಸಿಲ್ಲ. ಕೆಪಿಸಿಎಲ್ ವತಿಯಿಂದ ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ 400 ಮೆಟ್ರಿಕ್ ಟನ್ ಸಾಮರ್ಥ್ಯದ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆ ಬಗ್ಗೆಯಷ್ಟೇ ಬಜೆಟ್​ನಲ್ಲಿ ತಿಳಿಸಲಾಗಿದೆ.

ನಡಿಗೆಪಥ ನಿರ್ಮಾಣ

ಬೆಂಗಳೂರಿನ ಚಲನಶೀಲತೆ ಯೋಜನೆ (ಮೊಬಿಲಿಟಿ)ಯನ್ನು ಹೊಸದಾಗಿ ಘೋಷಿಸಲಾಗಿದೆ. ಅದರಂತೆ ಸಾರ್ವಜನಿಕ ಸಾರಿಗೆ ಮತ್ತು ಸುಸ್ಥಿರತೆಗೆ ಆದ್ಯತೆ ನೀಡಲಾಗಿದೆ. ಬಸ್ ಸಂಚಾರದಲ್ಲಿ ಹೆಚ್ಚಳ, 50 ಕಿ.ಮೀ. ನಡಿಗೆಪಥ ನಿರ್ಮಾಣ ಸೇರಿ ಇನ್ನಿತರ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ಯೋಜನೆ ಅನುಷ್ಠಾನಕ್ಕಾಗಿ 50 ಕೋಟಿ ರೂ. ಅನುದಾನ ನೀಡಲಾಗುತ್ತಿದೆ.

ಪಾದಚಾರಿ ರಸ್ತೆ ನಿರ್ಮಾಣ

ವಾಹನ ಸಂಚಾರ ರಸ್ತೆಗಳನ್ನು ಪಾದಚಾರಿ ರಸ್ತೆಗಳನ್ನಾಗಿ ಪರಿವರ್ತಿಸುವ ಕುರಿತು ಬಜೆಟ್​ನಲ್ಲಿ ಪ್ರಸ್ತಾಪಿಸಲಾಗಿದೆ. ಪ್ರಮುಖವಾಗಿ ಪಾದಚಾರಿಗಳ ಸಂಖ್ಯೆ ಹೆಚ್ಚಿರುವ ಮತ್ತು ರಸ್ತೆ ಕಿರಿದಾಗಿರುವ ಕಮರ್ಷಿಯಲ್ ಸ್ಟ್ರೀಟ್, ಬ್ರಿಗೇಡ್ ರಸ್ತೆಗಳನ್ನು ಪಾದಚಾರಿ ರಸ್ತೆಗಳನ್ನಾಗಿ ಪರಿವರ್ತಿಸಲು ಬಿಬಿಎಂಪಿ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಲಾಗಿದೆ.

ಪ್ರಮುಖ ಸಮಸ್ಯೆಗಳಿಗೆ ಪರಿಹಾರವಿಲ್ಲ

ರಾಜ್ಯ ಬಜೆಟ್​ನಲ್ಲಿ ನವ ನಗರ ನಿರ್ವಣದ ಬಗ್ಗೆ ಘೋಷಿಸಿದ್ದು ಬಿಟ್ಟರೆ ಅದಕ್ಕೆ ತಕ್ಕಂತೆ ಯೋಜನೆಗಳನ್ನು ಮಾತ್ರ ತಿಳಿಸಿಲ್ಲ. ಹಳೆಯ ಯೋಜನೆಗಳಿಗೆ ಮತ್ತೆ ಅನುದಾನ ನೀಡಲಾಗಿದೆ. ಅದನ್ನು ಹೊರತುಪಡಿಸಿ ಬೆಂಗಳೂರಿನ ಪ್ರಮುಖ ಸಮಸ್ಯೆಗಳತ್ತ ಬಜೆಟ್​ನಲ್ಲಿ ಗಮನಹರಿಸಿಲ್ಲ. ತ್ಯಾಜ್ಯ ಸಮಸ್ಯೆ, ರಸ್ತೆ ಗುಂಡಿ ನಿವಾರಣೆ, ಅಕ್ರಮ ಜಾಹೀರಾತು ತಡೆ, ಬೆಂಗಳೂರಿನ ಹಸಿರು ನಾಶ ತಡೆಯುವುದು ಸೇರಿ ಇನ್ನಿತರ ಪ್ರಮುಖ ಸಮಸ್ಯೆಗಳ ಬಗ್ಗೆ ಉಲ್ಲೇಖಿಸಿಲ್ಲ. ಹೀಗಾಗಿ ಬೆಂಗಳೂರಿನ ಮಟ್ಟಿಗೆ ನಿರಾಶಾದಾಯಕ ಬಜೆಟ್ ಎಂಬ ಅಭಿಪ್ರಾಯ ವ್ಯಕ್ತವಾಗುವಂತಾಗಿದೆ.

ನಿರೀಕ್ಷಿಸಿದಷ್ಟು ಅನುದಾನ ಸಿಕ್ಕಿಲ್ಲ

ರಾಜ್ಯ ಬಜೆಟ್ ಮಂಡನೆಗೂ ಮುನ್ನ ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೆ ಕೈಗೊಳ್ಳಲಾಗಿರುವ ವೈಟ್​ಟಾಪಿಂಗ್ ರಸ್ತೆ ನಿರ್ವಣ, ರಾಜಕಾಲುವೆ ದುರಸ್ತಿ, ತ್ಯಾಜ್ಯ ನಿರ್ವಹಣೆ ಸೇರಿ ಇನ್ನಿತರ ಪ್ರಮುಖ ಯೋಜನೆಗಳಿಗಾಗಿ 2019-20 ಮತ್ತು 2020-21ನೇ ಸಾಲಿಗೆ ಒಟ್ಟು 6,967 ಕೋಟಿ ರೂ. ನೀಡುವಂತೆ ಬಜೆಟ್ ಸಭೆ ವೇಳೆ ಮುಖ್ಯಮಂತ್ರಿಗೆ ಬಿಬಿಎಂಪಿಯಿಂದ ಪ್ರಸ್ತಾವನೆ ಸಲ್ಲಿಸಲಾಗಿತ್ತು. 2019-20ನೇ ಆರ್ಥಿಕ ವರ್ಷದಲ್ಲಿ 4,611 ಕೋಟಿ ರೂ. ಅನುದಾನ ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ, ಬಜೆಟ್​ನಲ್ಲಿ ಬಿಬಿಎಂಪಿ ಮನವಿಗೆ ಪುರಸ್ಕಾರ ಸಿಕ್ಕಿಲ್ಲ.

ಉಪನಗರ ರೈಲಿಗೆ ನಿಗಮ

ಉಪನಗರ ರೈಲು ಯೋಜನೆಗೆ ಬಜೆಟ್​ನಲ್ಲಿ ಒತ್ತು ನೀಡಲಾಗಿದೆ. ಒಟ್ಟು 23,093 ಕೋಟಿ ರೂ. ಅಂದಾಜು ವೆಚ್ಚದ ಉಪನಗರ ರೈಲು ಸೇವೆ ಯೋಜನೆ ಅನುಷ್ಠಾನಕ್ಕೆ ವೇಗ ನೀಡಲಾಗುತ್ತಿದೆ. ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ವಿಶೇಷ ಉದ್ದೇಶಿತ ವಾಹಕ (ಎಸ್​ಪಿವಿ) ರಚಿಸಲಾಗುತ್ತದೆ ಮತ್ತು ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿ ನಿಗಮ ಸ್ಥಾಪಿಸುವುದಾಗಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.

ನಿವೇಶನ ಹಂಚಿಕೆ ಪ್ರಸ್ತಾಪವಿಲ್ಲ

ಕೆಂಪೇಗೌಡ ಬಡಾವಣೆಯಲ್ಲಿ ಮತ್ತೆ 5 ಸಾವಿರ ನಿವೇಶನ ಹಂಚಿಕೆ ಮಾಡುವ ಬಗ್ಗೆ ಬಜೆಟ್​ನಲ್ಲಿ ಸಿಎಂ ಘೋಷಣೆ ಮಾಡುತ್ತಾರೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದರು. ಆದರೆ, ನಿವೇಶನ ಹಂಚಿಕೆ ಬಗ್ಗೆ ಯಾವುದೇ ವಿಷಯ ಪ್ರಸ್ತಾಪವಾಗಿಲ್ಲ. ಬಜೆಟ್​ನಲ್ಲಿ ಹೊಸ ಬಡಾವಣೆಗಳ ನಿರ್ವಣದ ಬಗ್ಗೆ ಘೋಷಣೆ ಮಾಡುತ್ತಾರೆ ಎಂದು ನಗರದ ನಾಗರಿಕರು ನಿರೀಕ್ಷೆ ಹೊಂದಿದ್ದರು, ಅದೀಗ ಹುಸಿಯಾಗಿದೆ. ಆಟೋ ಮತ್ತು ಟ್ಯಾಕ್ಸಿ ಚಾಲಕರಿಗಾಗಿ ಬಜೆಟ್​ನಲ್ಲಿ ಸಾರಥಿಯ ಸೂರು ಯೋಜನೆ ಘೋಷಿಸಲಾಗಿದೆ. ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಬಾಡಿಗೆ ಆಧಾರದಲ್ಲಿ ವಸತಿ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ. ಅದಕ್ಕಾಗಿ 50 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.

ಮಳೆನೀರು ಕಾಲುವೆ ದುರಸ್ತಿ

ಭಾರಿ ಮಳೆ ಸುರಿದಾದ ತಗ್ಗು ಪ್ರದೇಶಗಳಿಗೆ ನೀರು ಹರಿದು ಅವಘಡಗಳಾಗುವುದನ್ನು ತಡೆಗಟ್ಟಲು 3 ವರ್ಷದೊಳಗೆ ಪೂರ್ಣ ಪ್ರಮಾಣದಲ್ಲಿ ಬೃಹತ್ ಮಳೆ ನೀರು ಕಾಲುವೆಗಳನ್ನು ಬಾಹ್ಯ ಅನುದಾನ ಆಧಾರಿತ ಯೋಜನೆಯಡಿಯಲ್ಲಿ ಮರುನಿರ್ವಿುಸಲು ಉದ್ದೇಶಿಸಲಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಹೆಚ್ಚಾಗಿ ವಾಸಿಸುತ್ತಿರುವ ಅಧಿಸೂಚಿತ ಕೊಳೆಗೇರಿ ಪ್ರದೇಶಗಳಲ್ಲಿ 300 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಈ ವೆಚ್ಚವನ್ನು ಬಿಬಿಎಂಪಿ ವಿಶೇಷ ಘಟಕ ಯೋಜನೆ ಅಥವಾ ಗಿರಿಜನ ಉಪ ಯೋಜನೆ ಅನುದಾನದಿಂದ ಬಳಸಿಕೊಳ್ಳಲಾಗುತ್ತದೆ.

ಗೊರಗುಂಟೆಪಾಳ್ಯದಲ್ಲಿ ಕೆಳರಸ್ತೆ

ನಗರದಲ್ಲಿ ನಿತ್ಯವೂ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿವಾರಣೆ ಮಾಡಿ ಪ್ರಯಾಣಿಕರಿಗೆ ಸುಗಮ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಲು ಗೊರಗುಂಟೆಪಾಳ್ಯದಲ್ಲಿ ಅಂಡರ್​ಪಾಸ್ ನಿರ್ವಿುಸಲು ಸರ್ಕಾರ ಮುಂದಾಗಿದೆ.ಇದರ ಜತೆಗೆ ಕೆ.ಆರ್. ಪುರ ಜಂಕ್ಷನ್ ಹಾಗೂ ಹೆಬ್ಚಾಳ ಮೇಲುರಸ್ತೆಯಲ್ಲಿ ಹೆಚ್ಚುವರಿ ಪಥ (ಲೂಪ್) ನಿರ್ವಿುಸಲು ಹಣ ಮೀಸಲಿಟ್ಟಿದೆ. ಈ ಮೂರು ಯೋಜನೆಗಳಿಗೆ 195 ಕೋಟಿ ರೂ.ಗಳನ್ನು ಬಜೆಟ್​ನಲ್ಲಿ ಸಿಎಂ ಕುಮಾರಸ್ವಾಮಿ ಮೀಸಲಿಟ್ಟಿದ್ದಾರೆ.

ಹದಿನೆಂಟು ಸಚಿವರು, ಎಪ್ಪತ್ತೆರಡು ಬಜೆಟ್

ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಎರಡನೇ ಆಯವ್ಯಯ ಸೇರಿದಂತೆ ರಾಜ್ಯದಲ್ಲಿ ಇದುವರೆಗೆ 72 ಮುಂಗಡಪತ್ರಗಳು ಮಂಡನೆಯಾಗಿವೆ. ಈವರೆಗೆ 18 ಮಂದಿ ಹಣಕಾಸು ಸಚಿವರು ರಾಜ್ಯದ ಬಜೆಟ್ ಮಂಡಿಸಿದ್ದಾರೆ. ಅತಿ ಹೆಚ್ಚು ಬಜೆಟ್ ಮಂಡಿಸಿದ ಕೀರ್ತಿ ರಾಮಕೃಷ್ಣ ಹೆಗಡೆ ಹಾಗೂ ಸಿದ್ದರಾಮಯ್ಯ ಅವರದಾಗಿದೆ. ಈ ಇಬ್ಬರೂ ತಲಾ 13 ಬಜೆಟ್ ಮಂಡಿಸಿದ್ದರೆ, ಎಂ.ವೈ. ಘೋರ್ಪಡೆ ಏಳು, ಬಿ.ಎಸ್. ಯಡಿಯೂರಪ್ಪ ಆರು, ಟಿ. ಮರಿಯಪ್ಪ ಹಾಗೂ ಎಂ. ವೀರಪ್ಪ ಮೊಯಿಲಿ ತಲಾ 5, ಕೆಂಗಲ್ ಹನುಮಂತಯ್ಯ ಹಾಗೂ ಎಸ್.ಎಂ. ಕೃಷ್ಣ ತಲಾ 4, ಬಿ.ಡಿ. ಜತ್ತಿ ಮೂರು, ಎಸ್.ಎಂ. ಯಾಹ್ಯಾ, ಎಸ್. ಬಂಗಾರಪ್ಪ ಹಾಗೂ ಕುಮಾರಸ್ವಾಮಿ ತಲಾ ಎರಡು, ಎ.ಜಿ. ರಾಮಚಂದ್ರರಾವ್, ಎಸ್.ಆರ್. ಕಂಠಿ, ಎಸ್.ಆರ್. ಬೊಮ್ಮಾಯಿ, ಎಂ. ರಾಜಶೇಖರಮೂರ್ತಿ, ಡಿ.ವಿ. ಸದಾನಂದಗೌಡ ಹಾಗೂ ಜಗದೀಶ ಶೆಟ್ಟರ್ ತಲಾ ಒಂದು ಆಯವ್ಯಯ ಮಂಡಿಸಿದ್ದಾರೆ. ಹಣಕಾಸು ಸಚಿವರಾಗಿದ್ದರೂ ಪಿ.ಜಿ.ಆರ್. ಸಿಂಧ್ಯಾ ಅವರಿಗೆ ಬಜೆಟ್ ಮಂಡಿಸಲು ಅವಕಾಶ ಸಿಗಲಿಲ್ಲ.

ಮೆಟ್ರೋ ರೈಲು, ಉಪನಗರ ರೈಲು ಯೋಜನೆ ಅನುಷ್ಠಾನ ಸಂಬಂಧ ರಾಜ್ಯ ಸರ್ಕಾರ ಘೋಷಿಸಿರುವ ಯೋಜನೆಗಳು ಸ್ವಾಗತಾರ್ಹ. ಆದರೆ, ಪರಿಸರಕ್ಕೆ ಹಾನಿಯುಂಟು ಮಾಡುವ ಮತ್ತು ವಾಹನಗಳ ಸಂಖ್ಯೆ ಹೆಚ್ಚುವ ಎಲಿವೇಟೆಡ್ ಕಾರಿಡಾರ್​ನ ಅವಶ್ಯಕತೆ ಇರಲಿಲ್ಲ. ಅದರ ಬದಲು ಬಿಎಂಟಿಸಿ ಬಸ್, ಮೆಟ್ರೋ ರೈಲು ಯೋಜನೆಗೆ ಇನ್ನಷ್ಟು ಒತ್ತು ನೀಡಬಹುದಿತ್ತು.

| ಕಾತ್ಯಾಯಿನಿ ಚಾಮರಾಜ್, ಸಿವಿಕ್ ಸಂಸ್ಥೆ

 

ಬಹುಮಾದರಿ ಪ್ರಯಾಣ ಹಬ್

ಒಂದೇ ಕಡೆ ಮೆಟ್ರೋ, ಬಿಎಂಟಿಸಿ, ಟ್ಯಾಕ್ಸಿ ಸೇರಿ ಇನ್ನಿತರ ಸಾರಿಗೆ ವ್ಯವಸ್ಥೆ ದೊರಕುವಂತೆ ಮಾಡಲು ಬಹುಮಾದರಿ ಪ್ರಯಾಣ ಹಬ್ ನಿರ್ಮಾಣ ಘೋಷಿಸಲಾಗಿದೆ. ಹೆಬ್ಬಾಳ, ಬೈಯಪ್ಪನಹಳ್ಳಿ, ಕೆ.ಆರ್. ಪುರ, ಕಾಡುಗುಡಿ, ಚಲ್ಲಘಟ್ಟ ಮತ್ತು ಪೀಣ್ಯದಲ್ಲಿ ಹಬ್ ನಿರ್ವಿುಸಲಾಗುತ್ತಿದ್ದು, ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸುವುದಾಗಿ ತಿಳಿಸಲಾಗಿದೆ. ಯಶವಂತಪುರ, ಬನಶಂಕರಿ, ವಿಜಯನಗರ, ಪೀಣ್ಯ ಇನ್ನಿತರ ಕಡೆ ಮೆಟ್ರೋ ರೈಲು ಮತ್ತು ಬಿಎಂಟಿಸಿ ನಿರ್ವಣದ ಟಿಟಿಎಂಸಿಗಳ ಅಂತರ್ ಸಂಪರ್ಕಕ್ಕೆ ಮೂಲಸೌಕರ್ಯ ಅಭಿವೃದ್ಧಿಗೊಳಿಸಲಾಗುತ್ತದೆ.

ಬಿಡಿಎಗೆ 5 ಕೋಟಿ: ವಿವಿಧ ಯೋಜನೆ ಅನುಷ್ಠಾನ ಮತ್ತು ನಿರ್ವಹಣೆಗಾಗಿ ಬಿಡಿಎಗೆ 5 ಕೋಟಿ ರೂ. ಅನುದಾನವನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.

ಮೆಟ್ರೋ ರೈಲು ಯೋಜನೆಗಿಲ್ಲ ಕುಮಾರ ಕೃಪೆ

ಮೆಟ್ರೋ ರೈಲು ಯೋಜನೆ ಕುರಿತಂತೆ ಬಜೆಟ್​ನಲ್ಲಿ ನಿರ್ಲಕ್ಷ್ಯ ಮುಂದುವರಿದಿದೆ. ವಿಮಾನ ನಿಲ್ದಾಣ ಸಂರ್ಪಸುವ ಮೆಟ್ರೋ ರೈಲು ಮಾರ್ಗವನ್ನು 16,579 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸುವುದಾಗಿ ಕುಮಾರಸ್ವಾಮಿ ಘೋಷಿಸಿದ್ದಾರೆ. ಕೇಂದ್ರ ರೇಷ್ಮೆ ಮಂಡಳಿಯಿಂದ ಕೆ.ಆರ್. ಪುರ, ಹೆಬ್ಬಾಳ ಮಾರ್ಗವಾಗಿ ಹೊರ ವರ್ತಲ ರಸ್ತೆ ಮೂಲಕ ವಿಮಾನ ನಿಲ್ದಾಣ ಸಂರ್ಪಸುವ ಮಾರ್ಗ ನಿರ್ಮಾಣ ಮಾಡುವುದಾಗಿ ತಿಳಿಸಲಾಗಿದೆ ಹೊರತು ಎಷ್ಟು ಅನುದಾನ ನೀಡಲಾಗಿದೆ ಎಂಬುದನ್ನು ಪ್ರಸ್ತಾಪಿಸಿಲ್ಲ. ಮೆಟ್ರೋ ಮತ್ತು ಬಿಎಂಟಿಸಿ ಬಸ್ ಸೇವೆಗಳೆರಡರಲ್ಲೂ ಬಳಸಬಹುದಾದ ಚಾಲನೆ ಕಾರ್ಡ್ ಯೋಜನೆ, 10 ಮೆಟ್ರೋ ನಿಲ್ದಾಣಗಳಿಗೆ ಬಿಎಂಟಿಸಿ ಬಸ್ ಸೇವೆ, ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳಿಗೆ ವಿದ್ಯುತ್ ಚಾರ್ಜಿಂಗ್ ವ್ಯವಸ್ಥೆ, ಯಶವಂತಪುರ ರೈಲು ಮತ್ತು ಮೆಟ್ರೋ ನಿಲ್ದಾಣಗಳ ನಡುವೆ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಮಾಡುವುದಾಗಿ ಘೋಷಿಸಲಾಗಿದೆ.

ಕಾವೇರಿಗೆ 500 ಕೋಟಿ ರೂ.

ನಗರದಲ್ಲಿ ನೀರು ಸರಬರಾಜು ಯೋಜನೆಗೆ ಪ್ರಸಕ್ತ ಬಜೆಟ್​ನಲ್ಲಿ ಒತ್ತು ನೀಡಲಾಗಿದೆ. ಜೈಕಾ ನೆರವಿನೊಂದಿಗೆ 5,550 ಕೋಟಿ ರೂ. ವೆಚ್ಚದಲ್ಲಿ ಕಾವೇರಿ ನೀರು ಸರಬರಾಜು ಯೋಜನೆ ಜಾರಿಗೆ ತರಲು ಕಳೆದ ಸಾಲಿನಲ್ಲಿ ನಿರ್ಧರಿಸಲಾಗಿತ್ತು. ಈ ಯೋಜನೆಯ 5ನೇ ಹಂತದ ಅನುಷ್ಠಾನಕ್ಕಾಗಿ ಪ್ರಸಕ್ತ ಬಜೆಟ್​ನಲ್ಲಿ 500 ಕೋಟಿ ರೂ. ಮೀಸಲಿಡಲಾಗಿದೆ. ಚರಂಡಿಗಳಿಗೆ ತ್ಯಾಜ್ಯ ನೀರು ಸೇರುವುದನ್ನು ತಡೆಗಟ್ಟಲು ಸರ್ಕಾರ ಈ ಹಿಂದೆ ಹಲವಾರು ಕ್ರಮ ಕೈಗೊಂಡಿತ್ತು. ಆದರೆ, ಯಶಸ್ವಿಯಾಗಿರಲಿಲ್ಲ. ಮಳೆನೀರು ಹರಿಯುವ ಚರಂಡಿಗೆ ತ್ಯಾಜ್ಯ ನೀರು ಸೇರುವ 914 ಸ್ಥಳಗಳನ್ನು ಜಲಮಂಡಳಿ ಗುರುತಿಸಿದೆ. ಇನ್ನೆರಡು ವರ್ಷದಲ್ಲಿ 76.55 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗುತ್ತದೆ.

ಅರ್ಕಾವತಿ, ಪಿನಾಕಿನಿಗೆ ನೀರು

ಬೆಂಗಳೂರಿನಲ್ಲಿರುವ ಜಲಸಂಪನ್ಮೂಲಗಳನ್ನು ಉಪಯೋಗಿಸಿ ಅರ್ಕಾವತಿ ಮತು ್ತ ದಕ್ಷಿಣ ಪಿನಾಕಿನಿ ನದಿಗಳಲ್ಲಿ ಮತ್ತೆ ನೀರು ಹರಿಸಲು ಸರ್ಕಾರ ಮುಂದಾಗಿದೆ. ಹೆಚ್ಚು ನೀರನ್ನು ಕೊಯ್ಲು ಮಾಡುವ ಸಮಗ್ರ ಯೋಜನೆ ಜಾರಿಗೆ ತಂದು ಜಲಾನಯನ ಪ್ರದೇಶದಲ್ಲಿ ಬರುವ ಎಲ್ಲ ಕೆರೆ ಹಾಗೂ ನೀರು ನಿಲ್ಲುವ ತಾಣಗಳನ್ನು ರಕ್ಷಿಸಿ ಪುನಶ್ಚೇತನಗೊಳಿಸಲಾಗುತ್ತದೆ. ಮನೆಗಳು ಹಾಗೂ ಅಪಾರ್ಟ್​ವೆುಂಟ್​ಗಳಿಂದ ತ್ಯಾಜ್ಯ ನೀರನ್ನು ಕೊಳಾಯಿ ಮೂಲಕ ಸಂಗ್ರಹಿಸಿ ಶುದ್ಧೀಕರಿಸಿ ಮರು ಬಳಕೆಗೆ ಉಪಯೋಗಿಸಲಾಗುತ್ತದೆ. ಅರ್ಕಾವತಿ ಮತ್ತು ದಕ್ಷಿಣ ಪಿನಾಕಿನಿ ನದಿಗಳ ಪಕ್ಕದಲ್ಲಿರುವ ಸಾರ್ವಜನಿಕ ಸ್ಥಳಗಳನ್ನು ಶುಚಿಯಾಡಲು 50 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ.

ಕೆಂಪೇಗೌಡ ಲೇಔಟ್​ವರೆಗೂ ಮೆಟ್ರೋ

ಕೆಂಗೇರಿವರೆಗೂ ನಿರ್ವಣಗೊಳ್ಳುತ್ತಿರುವ ಮೆಟ್ರೋ ಮಾರ್ಗವನ್ನು ಕೆಂಪೇಗೌಡ ಲೇಔಟ್​ವರೆಗೂ ವಿಸ್ತರಿಸಲು ಸರ್ಕಾರ ಮುಂದಾಗಿದೆ. ಚಲ್ಲಘಟ್ಟದ ಬಳಿ ನಿರ್ವಣಗೊಂಡಿರುವ ಕೆಂಪೇಗೌಡ ಬಡಾವಣೆವರೆಗೂ ಮೆಟ್ರೋ ಮಾರ್ಗ ವಿಸ್ತರಿಸಲು ಬಜೆಟ್​ನಲ್ಲಿ ಘೋಷಣೆ ಮಾಡಲಾಗಿದೆ. ಇದರಿಂದ ನಗರ ಮತ್ತಷ್ಟು ವಿಸ್ತರಣೆಗೊಳ್ಳುವುದರ ಜತೆಗೆ ಹೊರಗಿನ ಪ್ರದೇಶಗಳಿಂದ ನಗರ ಪ್ರವೇಶ ಮಾಡುವ ವಾಹನಗಳಿಂದಾಗುವ ಸಂಚಾರದಟ್ಟಣೆ ನಿಯಂತ್ರಣವಾಗಲಿದೆ. ಬಿಡದಿ ಹಾಗೂ ರಾಮನಗರದಿಂದ ಬೆಂಗಳೂರಿಗೆ ಬರುವ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಮೆಟ್ರೋ ಮಾರ್ಗವನ್ನು ಚಲ್ಲಘಟ್ಟದವರೆಗೂ ವಿಸ್ತರಿಸಲಾಗುತ್ತಿದೆ. ಚಲ್ಲಘಟ್ಟದಲ್ಲಿ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣವನ್ನು ನಿರ್ವಿುಸಲು ಬಿಎಂಆರ್​ಸಿಎಲ್ ಉದ್ದೇಶಿಸಿದೆ.

ಸಮಾನ ಶಿಕ್ಷಣದ ಆಶಯವಿಲ್ಲ

| ಪ್ರೊ.ಜಿ.ಎಸ್. ಜಯದೇವ,  ನಿವೃತ್ತ ಪ್ರಾಧ್ಯಾಪಕ

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಮಂಡಿಸಿದ ಬಜೆಟ್​ನಲ್ಲಿ ಸಮಾನ ಶಿಕ್ಷಣದ ಆಶಯವಿಲ್ಲ. ಸರ್ಕಾರಿ ಶಾಲೆಗಳಿಗೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವ ಗಂಭೀರ ಸಮಸ್ಯೆಯನ್ನು ಪರಿಹರಿಸುವ ಕುರಿತು ಬಜೆಟ್​ನಲ್ಲಿ ಯಾವುದೇ ಪರಿಹಾರ ಸೂಚಿಸಿಲ್ಲ. ವಿಶೇಷ ಅನುದಾನ ಮೀಸಲಿಟ್ಟು ಸರ್ಕಾರಿ ದುರ್ಬಲ ಶಾಲೆಗಳ ಸಬಲೀಕರಣಕ್ಕೆ ಕ್ರಮ ಕೈಗೊಳ್ಳುವ ಅಗತ್ಯವಿತ್ತು. ಆದರೆ ಅದನ್ನು ಕೈಗೊಂಡಿಲ್ಲ. ಅದರ ಬದಲು ಕೇಂದ್ರೀಯ ವಿದ್ಯಾಲಯಗಳ ಮಾದರಿಯ ಶಾಲೆಗಳನ್ನು ತೆರೆಯಲು ಮುಂದಾಗಿದ್ದಾರೆ.

ಇಂಥ ಶಾಲೆಗಳನ್ನು ತೆರೆಯುವ ಕ್ರಮದಲ್ಲಿ ಸಮಾನ ಶಿಕ್ಷಣದ ಆಶಯದ, ಬದಲಿಗೆ ಬಡವ-ಬಲ್ಲಿದ ಎಂಬ ಭೇದ ಮೂಡಿಸುವುದು ಕಾಣುತ್ತಿದೆ. ವಿವಿಧ ಶಾಲೆಗಳಲ್ಲಿ ಖಾಲಿಯಿರುವ 25 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳನ್ನು ತುಂಬುವ ಸಂಬಂಧ ಮುಂಗಡ ಪತ್ರದಲ್ಲಿ ಯಾವುದೇ ಪ್ರಸ್ತಾವನೆಯಿಲ್ಲ. ಸಹಸ್ರಾರು ಶಾಲೆಗಳಿರುವಾಗ ಕೇವಲ ಒಂದು ಸಾವಿರ ಶಾಲೆಗಳಿಗೆ ಕಲಿಕೋಪಕರಣ ನೀಡುವುದಾಗಿ ಹೇಳಿದ್ದಾರೆ. ಇದು ಯಾವುದಕ್ಕೂ ಸಾಲದು. ಇನ್ನೂ ಹೆಚ್ಚಿನ ಶಾಲೆಗಳಿಗೆ ನೀಡಬೇಕಿತ್ತು .

ಜನಸಂಖ್ಯೆಯಲ್ಲಿ ಶೇ.40 ಮಕ್ಕಳಿದ್ದಾರೆ. ಅವರ ಕಲ್ಯಾಣಕ್ಕೆ ಮಾತ್ರ ಕಡಿಮೆ ಹಣ ಮೀಸಲಿಡಲಾಗಿದೆ. 1600 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಇನ್ನೂ ಹಲವು ಮುಚ್ಚುವ ಹಂತದಲ್ಲಿವೆ. ಅವುಗಳ ಪುನಶ್ಚೇತನಕ್ಕೆ ಯಾವುದೇ ಗಂಭೀರ ಕ್ರಮಗಳನ್ನು ಸರ್ಕಾರ ಸೂಚಿಸಿಲ್ಲ. ಶತಮಾನ ಪೂರೈಸಿದ ಶಾಲೆಗಳನ್ನು ಮತ್ತಷ್ಟು ಸಶಕ್ತಗೊಳಿಸಲು ವಿಶೇಷ ಅನುದಾನ ನೀಡುವಂತೆ ಮನವಿ ಮಾಡಲಾಗಿತ್ತು. ಆ ಕುರಿತು ಬಜೆಟ್​ನಲ್ಲಿ ಪ್ರಸ್ತಾಪವೇ ಇಲ್ಲ.

ರಾಜ್ಯದಲ್ಲಿ 60 ಸಾವಿರ ಶಾಲಾ ಕೊಠಡಿಗಳ ಉನ್ನತೀಕರಣದ ಅಗತ್ಯವಿದೆ. ಆದರೆ, ಕೇವಲ 5 ಸಾವಿರ ಶಾಲಾ ಕೊಠಡಿಗಳನ್ನು ಉನ್ನತೀಕರಿಸುವುದಾಗಿ ಬಜೆಟ್​ನಲ್ಲಿ ತಿಳಿಸಲಾಗಿದೆ. ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು ವಿಶೇಷ ಆದ್ಯತೆ ನೀಡಬೇಕಿತ್ತು. ಆ ಪ್ರಯತ್ನ ನಡೆದಿಲ್ಲ.

ಸಾವಿರ ಶಾಲೆಗೊಬ್ಬ ಅಧಿಕಾರಿ, ಫಲಿತಾಂಶ ಸುಧಾರಣೆಗೆ ಕ್ರಮ- ಇವೆಲ್ಲ ಪರಿಣಾಮಕಾರಿ ಕಾರ್ಯಕ್ರಮಗಳಲ್ಲ. ಒಟ್ಟಾರೆ ಶಿಕ್ಷಣ ಕ್ಷೇತ್ರಕ್ಕೆ ಬಜೆಟ್​ನಲ್ಲಿ ನೀಡಿರುವ ಅನುದಾನ ಮತ್ತು ಹೊಸ ಕಾರ್ಯಕ್ರಮಗಳು ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಿದೆ.

ಕೈಗಾರಿಕೆಗಳ ಕಣ್ಣೊರೆಸುವ ಬಜೆಟ್

| ಆರ್. ಶಿವಕುಮಾರ್, ಎಫ್​ಕೆಸಿಸಿಐ, ಮಾಜಿ ಅಧ್ಯಕ್ಷ

ಉದ್ಯೋಗ ಸೃಷ್ಟಿಯಾಗಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಪೂರಕವಾಗುವ ಕೈಗಾರಿಕೆ ಬೆಳವಣಿಗೆಗೆ ಹೆಚ್ಚಿನ ಅವಕಾಶಗಳನ್ನು ರಾಜ್ಯ ಬಜೆಟ್​ನಲ್ಲಿ ಒದಗಿಸಿಲ್ಲ. ಇದೊಂದು ಕೈಗಾರಿಕೆಗಳ ಕಣ್ಣೊರೆಸುವ ಬಜೆಟ್ ಆಗಿದೆ. ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ಎಷ್ಟರ ಮಟ್ಟಿಗೆ ಬೆಂಬಲ ನೀಡಲಾಗುತ್ತದೆ ಎಂಬುದನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇರವಾಗಿ ಹೇಳಿಲ್ಲ. ಕೆಲವು ಕಡೆ ಕೈಗಾರಿಕೆ ಕ್ಲಸ್ಟರ್ ಮಾಡುವುದಾಗಿ ಮಾತ್ರ ಹೇಳಿದ್ದಾರೆ. ಆದರೆ ಅನುದಾನ ಎಷ್ಟು ಕೊಡಲಾಗುತ್ತದೆ ಎಂಬ ಬಗ್ಗೆ ಮಾಹಿತಿಯೇ ಇಲ್ಲ. ಅಕ್ಕಿ ಮೇಲೂ ಆಸೆ, ನೆಂಟರ ಮೇಲೂ ಪ್ರೀತಿ ಎಂಬ ಗಾದೆಯ ಮಾತಿಗೆ ಈ ಮುಂಗಡಪತ್ರ ಪೂರಕವಾಗಿರುವಂತಿದೆ. ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಹಾಗೂ ಎಂಎಸ್​ಎಂಇಗಳೇ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸುವುದು. ಗಣಿ, ಕಲ್ಲುಕ್ವಾರಿಗಳು ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ ಮಾಡುತ್ತವೆ. ಆದರೆ ಕುಮಾರಸ್ವಾಮಿ ಅವರು ಆ ವಲಯಕ್ಕೆ ಯಾವುದೇ ಅವಕಾಶ ನೀಡಿಲ್ಲ. ಚಾಮರಾಜನಗರ ಜಿಲ್ಲೆಯಲ್ಲಿ ಹಿಂದಿನ ಸರ್ಕಾರ ಎರಡು ಸಾವಿರ ಎಕರೆ ಭೂಮಿಯನ್ನು ಅಭಿವೃದ್ಧಿ ಮಾಡಿದೆ. ಆದರೆ ಅಲ್ಲಿಗೆ ಯಾವ ಕೈಗಾರಿಕೆಗಳನ್ನು ತರುತ್ತೇವೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕಾ ಬೆಳವಣಿಗೆಗೆ 50 ಕೋಟಿ ರೂ. ನೀಡುವುದಾಗಿ ಮುಖ್ಯಮಂತ್ರಿ ಪ್ರಕಟಿಸಿದ್ದಾರೆ, ಆದರೆ ಅವರು ಮೀಸಲಿಟ್ಟಿರುವ ಹಣ ಯಾವುದಕ್ಕೂ ಸಾಲುವುದಿಲ್ಲ. ಕೌಶಲಾಭಿವೃದ್ಧಿಯಲ್ಲಿ 70 ಸಾವಿರ ಜನರಿಗೆ ತರಬೇತಿ ನೀಡಲು 90 ಕೋಟಿ ರೂ.ಗಳನ್ನು ಮಾತ್ರ ಮೀಸಲಿಟ್ಟಿದ್ದಾರೆ.

ಆ ಮೊತ್ತ ಯಾವುದಕ್ಕೂ ಸಾಲುವುದಿಲ್ಲ. ಅಲ್ಲದೆ, ಮಹಿಳಾ ಉದ್ಯಮಿಗಳಿಗೆ ಯಾವುದೇ ರೀತಿಯಲ್ಲಿ ನೆರವು ನೀಡಿಲ್ಲ. ಹಿಂದಿನ ಸಿದ್ದರಾಮಯ್ಯ ಸರ್ಕಾರ ಮಹಿಳಾ ಉದ್ಯಮಕ್ಕೆ ಪ್ರೋತ್ಸಾಹ ನೀಡಲು ಪ್ರತ್ಯೇಕ ಪಾರ್ಕ್ ನಿರ್ಮಾಣ ಮಾಡಿತ್ತು. ಈ ಸರ್ಕಾರದಿಂದ ಇನ್ನೂ ಹೆಚ್ಚಿನ ನೆರವು ನಿರೀಕ್ಷೆ ಮಾಡಲಾಗಿತ್ತು. ಆದರೆ, ಆ ನಿರೀಕ್ಷೆಗಳೆಲ್ಲ ಹುಸಿಯಾಗಿವೆ. ಸಮ್ಮಿಶ್ರ ಸರ್ಕಾರದ ಎರಡು ಪಕ್ಷಗಳು ಒಟ್ಟಾಗಿ ಕೂತು ರೂಪಿಸಿದ ಆಯವ್ಯಯದಂತೆ ಕಾಣುತ್ತಿಲ್ಲ. ಆತುರವಾಗಿ ಸಿದ್ಧಪಡಿಸಿದಂತೆ ಭಾಸವಾಗುತ್ತಿದೆ. ಕೈಗಾರಿಕೆ, ಮೂಲಸೌಕರ್ಯ ಮತ್ತು ಉದ್ಯೋಗ ಸೃಷ್ಟಿಯ ವಿಚಾರದಲ್ಲಿ ಒಪ್ಪಲು ಆಗದ, ತಿರಸ್ಕರಿಸಲು ಆಗದ ಆಯವ್ಯಯದಂತೆ ಭಾಸವಾಗುತ್ತದೆ.