More

    ಮುರುಕಲು ಮನೆಯಲ್ಲಿ ಆದಿವಾಸಿ ಕುಟುಂಬ

    ಶಾಶ್ವತ ಸೂರಿಗಾಗಿ ಅಂಗಲಾಚುತ್ತಿರುವ ಇಳಿವಯಸ್ಸಿನ ಬಸಮ್ಮ

    ದೊಡ್ಡಸಿದ್ದು ಹಾದನೂರು ಎಚ್.ಡಿ.ಕೋಟೆ
    ತಾಲೂಕಿನ ಕಟ್ಟೆಮನುಗನಹಳ್ಳಿ ಗ್ರಾಮದಲ್ಲಿ ಜೇನುಕುರುಬ ಸಮುದಾಯದ ಬಸಮ್ಮ ಎಂಬುವರ ಕುಟುಂಬ ಸರಿಯಾದ ಸೂರಿಲ್ಲದೆ ಬೀದಿಗೆ ಬಿದ್ದಿದ್ದು, ಸರ್ಕಾರದ ಸವಲತ್ತು ಇವರಿಗೆ ಗಗನಕುಸುಮವಾಗಿದೆ.
    ಪಟ್ಟಣಕ್ಕೆ ಕೇವಲ 2 ಕಿ.ಮೀ. ದೂರದಲ್ಲಿರುವ ಈ ಗ್ರಾಮದಲ್ಲಿ 60 ವರ್ಷದ ಬಸಮ್ಮ ಅವರು ಕಾಡುಪ್ರಾಣಿಗಳಿಂತ ಕಡೆಯಾಗಿ ಜೀವನ ಸಾಗಿಸುತ್ತಿದ್ದಾರೆ. ಇವರಿಗೆ ಒಬ್ಬ ಮಗನಿದ್ದು, ಆತನಿಗೆ ಮೂರು ವರ್ಷಗಳ ಹಿಂದೆ ಮದುವೆಯಾಗಿದೆ. ಅಂಗೈ ಅಗಲದಷ್ಟು ಜಾಗದಲ್ಲಿ ಮುರುಕಲು ಮನೆಯಲ್ಲಿ ಮೂವರು ವಾಸಿಸುತ್ತಿದ್ದು, ಜೀವನಕ್ಕೆ ಕೂಲಿಯನ್ನು ಆಶ್ರಯಿಸಿದ್ದಾರೆ.
    ಕಳೆದ ಆಗಸ್ಟ್‌ನಲ್ಲಿ ಬಿದ್ದ ಭಾರಿ ಮಳೆಗೆ ಇವರು ವಾಸವಿದ್ದ ಮುರಕಲು ಮನೆ ಇನ್ನಷ್ಟು ಅಧೋಗತಿಗೆ ತಲುಪಿದೆ. ಮಳೆಗಾಲದಲ್ಲಿ ಗುಡಿಸಲಲ್ಲಿ ಮಲಗಲು ಆಗದೆ ಇಡೀ ರಾತ್ರಿ ಸಮೀಪಕ ಕಾಳಮ್ಮನ ದೇವಸ್ಥಾನದಲ್ಲಿ ಕಾಲ ಕಳೆಯುವಂತಾಗಿದೆ.
    ಕಿರಿದಾದ ಜಾಗದಲ್ಲಿ ಒಂದೆಡೆ ತಾಯಿ ಮಲಗಿದರೆ, ಮತ್ತೊಂದು ಕಡೆ ಪುತ್ರ ಕುಮಾರ ಹಾಗೂ ಸೊಸೆ ಸಿಂಧು ಮಲಗುವ ಪರಿಸ್ಥಿತಿ ಇದೆ. ಒಂದೊಂದು ದಿನ ರಾತ್ರಿ ವೇಳೆ ಇಳಿವಯಸ್ಸಿನ ಬಸಮ್ಮ ಗುಡಿಸಲಿನ ಹೊರಗಡೆ ಮಲಗಬೇಕಾದಂತಹ ದುಸ್ಥಿತಿ ಇದೆ. ಯಾವುದೇ ರಕ್ಷಣೆ ಇಲ್ಲದ ಗುಡಿಸಲಿಗೆ ಒಮ್ಮೊಮ್ಮೆ ಬೀದಿ ನಾಯಿಗಳು ನುಗ್ಗಿ ಮಾಡಿದ ಅಡುಗೆ ತಿಂದ ನಿದರ್ಶನಗಳಿದ್ದು, ಅಂತಹ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಉಪವಾಸ ಬಿದ್ದಿದ್ದಾರೆ. ಕೂಲಿ ಮಾಡಿದರೆ ಮಾತ್ರ ಜೀವನದ ಬಂಡಿ ಸಾಗುತ್ತದೆ. ಮನೆಯಲ್ಲಿ ಒಬ್ಬರು ಕಾವಲಿಗಿದ್ದರೆ, ಮತ್ತೊಬ್ಬರು ಕೂಲಿಗೆ ಹೋಗುತ್ತಾರೆ.
    ದಾಖಲೆಗಳಿಲ್ಲ:
    ಬಸಮ್ಮ ಅವರು ವಾಸಿಸುತ್ತಿರುವ ಜಾಗವು ದೇವಸ್ಥಾನಕ್ಕೆ ಸೇರಿದೆ. ಇಲ್ಲಿ ಮನೆ ನಿರ್ಮಿಸಿಕೊಂಡು ವಾಸ ಮಾಡಲು ಹಲವಾರು ವರ್ಷಗಳ ಹಿಂದೆ ಗ್ರಾಮಸ್ಥರು ಅವಕಾಶ ಮಾಡಿಕೊಟ್ಟಿದ್ದು, ಈ ಜಾಗ ಬಸಮ್ಮ ಅವರ ಹೆಸರಿನಲ್ಲಿ ಇಲ್ಲ. ಸರ್ಕಾರದ ಯೋಜನೆಯಡಿ ಮನೆ ನಿರ್ಮಿಸಿಕೊಂಡಿ ಎಂದು ಬಸಮ್ಮ ಹಾಗೂ ಅವರ ಪುತ್ರ ಕುಮಾರ ನಾಗನಹಳ್ಳಿ ಗ್ರಾಮ ಪಂಚಾಯಿತಿಗೆ ಹಲವಾರು ವರ್ಷಗಳಿಂದ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ ಇವರ ಹೆಸರಲ್ಲಿ ಜಾಗ ಇಲ್ಲದ ಕಾರಣ ಮನೆ ನಿರ್ಮಿಸಿಕೊಡಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಜಾಗವನ್ನು ನಿಮ್ಮ ಹೆಸರಿಗೆ ಮಾಡಿಸಿಕೊಂಡು ಬಂದರೆ ಮನೆ ಮಾಡಿಕೊಡುವುದಾಗಿ ಹೇಳಿ ಕೈತೊಳೆದುಕೊಂಡಿದ್ದಾರೆ.
    ನಿರ್ಗತಿಕ ಕುಟುಂಬಕ್ಕೆ ನಿಯಮಾನುಸಾರ ಅಂತ್ಯೋದಯ ಪಡಿತರ ಚೀಟಿ ದೊರೆಯಬೇಕು. ಆದರೆ ಈ ಕುಟುಂಬಕ್ಕೆ ಅಧಿಕಾರಿಗಳು ಬಿಪಿಎಲ್ ಕಾರ್ಡ್ ಕರುಣಿಸಿದ್ದಾರೆ. ಪಡಿತರ ಸೌಲಭ್ಯ ಬಿಟ್ಟು ಸರ್ಕಾರದ ಯಾವ ಸವಲತ್ತೂ ಇವರಿಗೆ ಸಿಕ್ಕಿಲ್ಲ. ಬಸಮ್ಮ ಕುಟುಂಬ ಒಂದು ಶಾಶ್ವತ ಸೂರಿಗಾಗಿ ಸರ್ಕಾರವನ್ನು ಅಂಗಲಾಚುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts