ಕಬ್ಬು ಬೆಳೆಗಾರರ ಕೋಲಾಹಲ, ಜಾರಕಿಹೊಳಿ ರಾಜೀನಾಮೆ ವದಂತಿ ಬೆನ್ನಲ್ಲೇ ನಡೆದ ಗೌಡ-ಸಿದ್ದು ಭೇಟಿಯ ಹಿಂದಿನ ಮರ್ಮವೇನು?

ಬೆಂಗಳೂರು: ಕಬ್ಬು ಬೆಳೆಗಾರರ ಪ್ರತಿಭಟನೆ ಮತ್ತು ರಮೇಶ್​ ಜಾರಕಿಹೊಳಿ ಅವರ ರಾಜೀನಾಮೆ ವದಂತಿಯ ಹಿನ್ನೆಲೆಯಲ್ಲೇ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಸಂಜೆ ಕುಮಾರ ಕೃಪ ಅತಿಥಿಗೃಹದಲ್ಲಿ ಭೇಟಿ ಮಾಡಿದ್ದು, ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಸಚಿವ ಸಂಪುಟ ವಿಸ್ತರಣೆ ಕುರಿತು ಗುರು-ಶಿಷ್ಯರ ಇಂದಿನ ತಮ್ಮ ಭೇಟಿಯಲ್ಲಿ ಚರ್ಚಿಸಿದ್ದಾರೆ ಎನ್ನಲಾಗಿದೆ. ಚರ್ಚೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ದೇವೇಗೌಡರೂ ಅದನ್ನೇ ಹೇಳಿದರು. ‘ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿ ಬಗ್ಗೆ ಚರ್ಚೆ ಮಾಡಿದ್ದೇವೆ. ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇವೆ. ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಕುಮಾರಸ್ವಾಮಿ ತೀರ್ಮಾನ ಮಾಡುತ್ತಾರೆ’ ಎಂದರು.

ಈ ಚರ್ಚೆಯಲ್ಲಿ, ಇಂದಿನ ರೈತರ ಹೋರಾಟ, ಜಾರಕಿಹೊಳಿ ಮುನಿಸು ಮತ್ತು ಲೋಕಸಭೆ ಚುನಾವಣೆಗೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಕುರಿತೂ ಚರ್ಚೆಗಳಾಗಿವೆ ಎಂದೂ ಹೇಳಲಾಗಿದೆ.