ನಾನಿರುವವರೆಗೂ ವಿಭಜನೆ ಅಸಾಧ್ಯ

ನವದೆಹಲಿ: ‘ನಾನು ಹಾಗೂ ನನ್ನ ಮಗನ ಜೀವಿತಾವಧಿಯಲ್ಲಿ ಕರ್ನಾಟಕ ವಿಭಜನೆಯಾಗಲು ಬಿಡುವುದಿಲ್ಲ’ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.

ಕೆಲವರ ಪಿತೂರಿಯಿಂದ ರಾಜ್ಯದಲ್ಲಿ ಇಂಥ ಕೂಗಿಗೆ ಬೆಲೆ ಬಂದಿದೆ. ಕುಮಾರಸ್ವಾಮಿ ಈಗಾಗಲೇ ಸ್ಪಷ್ಟಪಡಿಸಿದ್ದು ಪ್ರತ್ಯೇಕ ರಾಜ್ಯದ ಕೂಗಿಗೆ ಬೆಂಬಲವಿಲ್ಲ ಎಂದಿದ್ದಾರೆ. ಇದಲ್ಲದೆ ಬಜೆಟ್​ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎನ್ನುವುದರಲ್ಲಿ ಸತ್ಯವಿಲ್ಲ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ದೇವೇಗೌಡ ತಿಳಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಜನರನ್ನು ಪ್ರಚೋದಿಸುತ್ತಿದ್ದಾರೆ. ಸಾಲಮನ್ನಾ ಸೇರಿ ಇನ್ನಿತರ ವಿಚಾರಗಳ ಮೂಲಕ ರಾಜ್ಯದಲ್ಲಿ ಅಶಾಂತಿ ಹರಡಲು ಪ್ರಯತ್ನಿಸುತ್ತಿದ್ದಾರೆ. ಕೆಲವರು ಸೇರಿಕೊಂಡು ಪ್ರತ್ಯೇಕ ಉತ್ತರ ಕರ್ನಾಟಕ ಕೇಳಿದರೆ ಅದಕ್ಕೆ ಒಪ್ಪಲಾಗದು. ನನ್ನ ಜೀವಿತಾವಧಿಯಲ್ಲಿ ಅದು ಆಗದು ಎಂದು ಖಡಕ್ ಆಗಿ ಉತ್ತರಿಸಿದ್ದಾರೆ. ಈಗಾಗಲೇ ಸರ್ಕಾರದ ಕೆಲ ಇಲಾಖೆಗಳನ್ನು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ವರ್ಗಾಯಿಸಲು ಸಿಎಂ ಆದೇಶಿಸಿದ್ದಾರೆ. ಹೀಗಿರುವಾಗ ಕಡೆಗಣನೆ ಎನ್ನುವುದರಲ್ಲಿ ಅರ್ಥವಿಲ್ಲ ಎಂದು ದೇವೇಗೌಡ ಹೇಳಿದ್ದಾರೆ.

ಉತ್ತರದವರಿಗೆ ಕೃತಜ್ಞತೆಗಳು

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಗುರುವಾರ ಕೆಲ ಸಂಘಟನೆಗಳು ನೀಡಿದ್ದ ಬಂದ್ ಕರೆಯನ್ನು ಉತ್ತರ ಕರ್ನಾಟಕದ ಜನತೆ ಸಂಪೂರ್ಣ ತಿರಸ್ಕರಿಸಿದ್ದು, ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ಬೆಂಗಳೂರಿನಲ್ಲಿ ಹೇಳಿದ್ದಾರೆ. ನಾಡಿನ ಅಖಂಡತೆಯನ್ನು ಎತ್ತಿ ಹಿಡಿದ ಜನತೆಗೆ ರಾಜ್ಯ ಸರ್ಕಾರದ ಪರವಾಗಿ ಹಾಗೂ ವೈಯುಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ಸಮ್ಮಿಶ್ರ ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿಯ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿದೆ. ಜನರು ಸರ್ಕಾರದ ಮೇಲೆ ವಿಶ್ವಾಸ ಇಡಬೇಕು ಎಂದು ಕೋರಿದರು.