ಕಾಂಗ್ರೆಸ್​ ಇಲ್ಲದೆ ಕೇಂದ್ರದಲ್ಲಿ ಸರ್ಕಾರ ರಚಿಸುವುದು ಅಸಾಧ್ಯ ಎಂದು ಎಚ್​.ಡಿ. ದೇವೇಗೌಡ ಹೇಳಿದ್ದೇಕೆ?

ತುಮಕೂರು: ಕಾಂಗ್ರೆಸ್​ ಪಕ್ಷವನ್ನು ದೂರವಿಟ್ಟು ಪ್ರಾದೇಶಿಕ ಪಕ್ಷಗಳು ಕೇಂದ್ರದಲ್ಲಿ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂದು ಜೆಡಿಎಸ್​ ವರಿಷ್ಠ ಮಾಜಿ ಪ್ರಧಾನ ಮಂತ್ರಿ ಎಚ್​.ಡಿ. ದೇವೇಗೌಡ ಅವರು ಅಭಿಪ್ರಾಯಪಟ್ಟಿದ್ದಾರೆ.

ತುಮಕೂರಿನಲ್ಲಿ ಪ್ರಚಾರದ ವೇಳೆ ಮಾತನಾಡಿದ ದೇವೇಗೌಡ ಅವರು, ಅನೇಕ ಪ್ರಾದೇಶಿಕ ಪಕ್ಷಗಳಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿವೆ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ರಾಜಕೀಯ ಆಡಳಿತಕ್ಕೆ ಅಂತ್ಯ ಕಾಣಿಸಬೇಕಿದ್ದರೆ ನಾವೆಲ್ಲರೂ ಭಿನ್ನಾಭಿಪ್ರಾಯ ಮರೆತು ಒಂದುಗೂಡಿ ಹೋಗಬೇಕಿದೆ. ರಾಷ್ಟೀಯ ಪಕ್ಷ ಕಾಂಗ್ರೆಸ್ ಜತೆ ಹೋಗಿ ಮೋದಿಯ ಆಡಳಿತಕ್ಕೆ ಅಂತ್ಯ ಹಾಡಬೇಕಿದೆ. ಈ ವಯಸ್ಸಲ್ಲಿ ನನಗೆ ಯಾವುದೇ ರಾಜಕೀಯ ಆಶೋತ್ತರಗಳಿಲ್ಲ, ಎಲ್ಲರನ್ನೂ ಒಟ್ಟುಗೂಡಿಸಲು ನನ್ನ ಕೈಲಾದ ಮಟ್ಟಿಗೆ ಪ್ರಯತ್ನಪಡುತ್ತೇನೆ ಎಂದು ತಿಳಿಸಿದರು.

ಪ್ರಧಾನ ಮಂತ್ರಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ನಡವಳಿಕೆ ಬಗ್ಗೆ ಬಿಜೆಪಿಯಲ್ಲೇ ಅಸಮಾಧಾನ ಇರುವುದನ್ನು ಗಮನಿಸಿದ್ದೇನೆ. ವೇದಿಕೆಗಳಲ್ಲಿ ಮೋದಿ ಬಿಟ್ಟರೆ ಅವರ ಪಕ್ಷದ ಇತರ ನಾಯಕರ ಹೆಸರನ್ನೂ ಹೇಳುತ್ತಿಲ್ಲ. ಅನಂತಕುಮಾರ್​ ಮರಣಾನಂತರ ಅವರ ಪತ್ನಿಗೆ ಟಿಕೆಟ್​ ಕೊಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಏನಾಯ್ತು. ರಾಜ್ಯದಲ್ಲಿ ಬಿಜೆಪಿ ದಕ್ಷಿಣದ ಹೆಬ್ಬಾಗಿಲು ತೆರೆದಿದೆ ಎಂದು ಹೇಳುತ್ತಿದ್ದಾರೆ. ಆದರೆ ನಾವು ಆ ಹೆಬ್ಬಾಗಿಲನ್ನು ಪೂರ್ತಿ ಮುಚ್ಚುವ ಪ್ರಯತ್ನ ಮಾಡುತ್ತೇವೆ ಎಂದು ದೇವೇಗೌಡರು ತಿಳಿಸಿದರು.