ಏಳಕ್ಕೆ ಏಳೂ ಅಥವಾ ಆರು ಗೆಲ್ಲುತ್ತೇವೋ ಹೇಳೋಕ್ಕಾಗಲ್ಲ, ನಮ್ಮ ಸರ್ಕಾರ ಬಾರದಿದ್ದರೂ ಕೆಲಸ ಮಾಡಿಸ್ತೇನೆ

ತುಮಕೂರು: ಈ ಕ್ಷೇತ್ರದಲ್ಲಿ ಬಡತನ ಹೆಚ್ಚಿದೆ. ತೆಂಗು ಬೆಳೆಗೆ ನೀರಿಲ್ಲದೆ ತೊಂದರೆಯಾಗಿದೆ. ಡಿಸಿಎಂ ಪರಮೇಶ್ವರ್​ ಅವರೊಂದಿಗೆ ನಾನೂ ಕೈಜೋಡಿಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ತುಮಕೂರು ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಜೆಡಿಎಸ್​ ವರಿಷ್ಠ ಮಾಜಿ ಪ್ರಧಾನ ಮಂತ್ರಿ ಎಚ್​.ಡಿ. ದೇವೇಗೌಡ ತಿಳಿಸಿದರು.

ಬಹಿರಂಗ ಪ್ರಚಾರ ಅಂತ್ಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ದೇವೇಗೌಡರು, ಜೆಡಿಎಸ್​ ಸ್ಪರ್ಧಿಸಿರುವ ಏಳಕ್ಕೆ ಏಳು ಸ್ಥಾನಗಳಲ್ಲಿ ಗೆಲ್ಲುತ್ತೋ ಅಥವಾ 6 ಸ್ಥಾನಗಳಲ್ಲಿ ಗೆಲ್ಲುತ್ತೋ ಹೇಳುವುದಕ್ಕೆ ಆಗುವುದಿಲ್ಲ. ನಮ್ಮ ಸರ್ಕಾರ ಬಾರದಿದ್ದರೂ ನಾನು ಕೆಲಸ ಮಾಡಿಸುತ್ತೇನೆ. ನಾನು ಚುನಾವಣೆ ಬಗ್ಗೆ ವಿಶ್ಲೇಷಣೆ ಮಾಡುವುದಿಲ್ಲ. ನನಗೆ ನನ್ನದೇ ಸ್ಫೂರ್ತಿಯಿದೆ. ತುಮಕೂರು ಕ್ಷೇತ್ರಕ್ಕೆ ಹೊಸಬನಾದರೂ ಜನರಿಗೆ ನಾನು ಗೊತ್ತಿದ್ದೇನೆ. ಸ್ಪಲ್ಪ ಮಟ್ಟಿಗೆ ಜನರಿಂದ ಪ್ರೋತ್ಸಾಹ ಸಿಗುತ್ತಿದೆ ಎಂದು ದೇವೇಗೌಡರು ತಿಳಿಸಿದರು.

14 ದಿನಗಳಿಂದ ನಾವು ಮತ್ತು ದೇವೇಗೌಡರು ತುಮಕೂರು ಕ್ಷೇತ್ರದ 8 ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರಚಾರ ಮಾಡಿದ್ದೇವೆ. ದೇವೇಗೌಡರ ಪರವಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿಕ್ಕನಾಯಕನಹಳ್ಳಿ, ಶಿರಾ, ಪಾವಗಡ, ಮಧುಗಿರಿ, ಕೊರಟಗೆರೆಯಲ್ಲಿ ಕಡಿಮೆ ಮಳೆಯಾಗುತ್ತಿದೆ. ಹಾಗಾಗಿ ಹೇಮಾವತಿ, ಭದ್ರಾ ಮೇಲ್ಡಂಡೆ ಯೋಜನೆ ಅನುಷ್ಠಾನಕ್ಕೆ ತರಲು ಬೇಡಿಕೆ ಬಂದಿದೆ. ಭದ್ರಾ ಮೇಲ್ಡಂಡೆ ಮತ್ತು ಎತ್ತಿನಹೊಳೆ ಯೋಜನೆ ಒಂದೂವರೆ ವರ್ಷದಲ್ಲಿ ಮುಗಿಯಲಿದೆ. ಕಳೆದ ಸರ್ಕಾರದಲ್ಲಿ ಹೇಮಾವತಿ ನಾಲೆ ಅಗಲೀಕರಣವಾಗಿದೆ. ಈ ಬಾರಿಯೂ ಕುಮಾರಸ್ವಾಮಿ ಅವರು 450 ಕೋಟಿ ರೂ. ಮೀಸಲಿಟ್ಟಿದ್ದಾರೆ ಎಂದು ಡಿಸಿಎಂ ಪರಮೇಶ್ವರ್​ ತಿಳಿಸಿದರು.

ಸುದ್ದಿಗೋಷ್ಠಿ ಬೇಗ ಮುಗಿಸುವಂತೆ ಸೂಚನೆ

ಬಹಿರಂಗ ಪ್ರಚಾರ ಇಂದು ಸಂಜೆ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯನ್ನು ಬೇಗ ಮುಗಿಸುವಂತೆ ಚುನಾವಣಾ ಅಧಿಕಾರಿಗಳು ದೇವೇಗೌಡರು ಮತ್ತು ಪರಮೇಶ್ವರ್​ ಅವರಿಗೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ದೇವೇಗೌಡರು ಸಮಯ ಆಗಿದೆ. ಹಾಗಾಗಿ ನಾನು ಮಾತನಾಡುವುದಿಲ್ಲ ಎಂದು ಸುದ್ದಿಗೋಷ್ಠಿಯನ್ನು ಮುಕ್ತಾಯಗೊಳಿಸಿದರು.