ಜೆಡಿಎಸ್​ ಹಾಸನ ಅಭ್ಯರ್ಥಿ ಪ್ರಜ್ವಲ್​ ರೇವಣ್ಣ ಎಂದು ಘೋಷಿದ ಗೌಡರು, ಮಂಡ್ಯಕ್ಕೆ ನಿಖಿಲ್​ ನಿಲ್ಲಿಸಿ ಆಶೀರ್ವಾದಿಸ್ತಾರಂತೆ…

ಹಾಸನ: ಲೋಕಸಭಾ ಚುನಾವಣೆಯ ಹಾಸನದ ಜೆಡಿಎಸ್​ ಅಭ್ಯರ್ಥಿಯನ್ನಾಗಿ ಸಚಿವ ಎಚ್​.ಡಿ.ರೇವಣ್ಣ ಪುತ್ರ ಪ್ರಜ್ವಲ್​ ರೇವಣ್ಣ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಾಯಿತು.

ಬುಧವಾರ ಹೊಳೆನರಸೀಪುರದ ಮೂಡಲಹಿಪ್ಪೆ ಗ್ರಾಮದಲ್ಲಿ ನಡೆದ ಚುನಾವಣೆ ಪ್ರಚಾರದ ವೇದಿಕೆಯಲ್ಲಿ ಜೆಡಿಎಸ್​ ವರಿಷ್ಠ ಎಚ್​.ಡಿ.ದೇವೇಗೌಡ ಅವರು ಅಧಿಕೃತವಾಗಿ ಘೋಷಣೆ ಮಾಡಿದರು. ಪ್ರಜ್ವಲ್ ಹೆಸರು ಹೇಳುತ್ತಿದ್ದಂತೆ ಸಚಿವ ರೇವಣ್ಣ ಅವರು ಹಿಂದಿನ ಸಾಲಲ್ಲಿ ನಿಂತು ವೇದಿಕೆ ಮೇಲೆಯೇ ಕಣ್ಣೀರಿಟ್ಟರು.

ಈ ವೇಳೆ ಮಾತನಾಡಿದ ದೇವೇಗೌಡ ಅವರು ಕಾಂಗ್ರೆಸ್​ನ ಕೆಲವರು ಹಾಸನದಲ್ಲಿ ಬಿಜೆಪಿ ಜತೆ ಸಂಪರ್ಕ ಮಾಡಿದ್ದಾರೆ. ಪ್ರಜ್ವಲ್ ನಿಂತರೆ ವಿರೋಧ ಮಾಡುತ್ತೇವೆ ಎಂದಿದ್ದಾರೆ. ಈಗಾಗಲೇ ಮಂಡ್ಯದಲ್ಲಿ ದೊಡ್ಡ ವಿವಾದ ಎಬ್ಬಿಸಿದ್ದಾರೆ. ನಿಖಿಲ್ ನಿಲ್ಲಿಸಬೇಕು ಎಂಬುದು ಅಲ್ಲಿಯ ಶಾಸಕರ ಅಭಿಪ್ರಾಯವಾಗಿದೆ. ಆದರೆ, ಕೆಲವರು ನಿಖಿಲ್ ಗೋ ಬ್ಯಾಕ್ ಅಂತಿದ್ದಾರೆ. ಈ ಬಗ್ಗೆ ನನಗೆ ನೋವಿದೆ. ನಾನೂ ಮಂಡ್ಯಕ್ಕೆ ಹೋಗುವೆ. ನನಗೆ ಹಾಸನ‌ ಬೇರೆ ಅಲ್ಲ. ಮಂಡ್ಯ ಬೇರೆ ಅಲ್ಲ. ಇದೇ ರೀತಿ ಸಭೆ ಮಾಡಿ ನಿಖಿಲ್ ಹೆಸರು ಘೋಷಣೆ ಮಾಡಿ, ಅವನಿಗೂ ಆಶೀರ್ವಾದ ಮಾಡುತ್ತೇವೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್​)