ದೇವೇಗೌಡ ಸ್ಪರ್ಧೆ ಇನ್ನೂ ನಿಗೂಢ

ಬೆಂಗಳೂರು: ಮಾಜಿ ಪ್ರಧಾನಮಂತ್ರಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದು ನಿಗೂಢವಾಗಿಯೇ ಉಳಿದಿದ್ದು, ಸ್ವತಃ ಅವರೇ ಈ ಬಗ್ಗೆ ಸ್ಪಷ್ಟ ಹೇಳಿಕೆ ನೀಡಲು ನಿರಾಕರಿಸಿದರು.

ಜೆಡಿಎಸ್ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಬುಧವಾರ ಮುಖಂಡರ ಸಭೆ ನಡೆಸಿದ ನಂತರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು 29 ವರ್ಷ ಪಾರ್ಲಿಮೆಂಟ್ ನೋಡಿದ್ದೇನೆ. ಮೊದಲು ಪಕ್ಷ ಕಟ್ಟುವುದು ನನ್ನ ಜವಾಬ್ದಾರಿ. ಸ್ಪರ್ಧೆ ಮಾತು ಆಮೇಲೆ ಎಂದು ಮಾಧ್ಯಮಗಳ ಮೇಲೆ ಗರಂ ಆದರು.

ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಜೆಡಿಎಸ್ ಬಲಪಡಿಸಬೇಕಿದೆ. ಆ ನಿಟ್ಟಿನಲ್ಲಿ ಈಗಾಗಲೇ ಸಭೆಗಳನ್ನು ನಡೆಸುತ್ತಿದ್ದೇವೆ. ವಿಶೇಷವಾಗಿ ಹಲವು ಜಿಲ್ಲೆಗಳಲ್ಲಿ ಪಕ್ಷವನ್ನು ಸ್ಥಾಪಿಸಬೇಕಿದೆ. ಸ್ಥಾನ ಹೊಂದಾಣಿಕೆ ಬಗ್ಗೆ ಕಾಂಗ್ರೆಸ್ ಜತೆ ಇನ್ನೂ ಮಾತನಾಡಬೇಕಿದೆ. 2-3 ದಿನಗಳಲ್ಲಿ ಆ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದರು.

ಎಚ್ಚರಿಕೆ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರದ ಮುಖ್ಯಸ್ಥರಾಗಿರುವುದರಿಂದ ಜೆಡಿಎಸ್​ನ ಯಾವುದೇ ಸಚಿವರು, ಶಾಸಕರು ಅಥವಾ ಮುಖಂಡರು ಸರ್ಕಾರದ ಘನತೆಗೆ ಧಕ್ಕೆ ತರುವ ರೀತಿ ಹೇಳಿಕೆ ನೀಡಕೂಡದು ಎಂದು ದೇವೇಗೌಡರು ಖಡಕ್ ಎಚ್ಚರಿಕೆ ನೀಡಿದರು. ಪಕ್ಷವನ್ನು ಹಂತ ಹಂತವಾಗಿ ಬೆಳೆಸಿಕೊಂಡ ಬಂದ ಹಾಗೆಯೇ ಅದರ ಉಳಿವಿಗೂ ಶ್ರಮಿಸಬೇಕು. ಕುಮಾರಸ್ವಾಮಿ ಎರಡೂ ಪಕ್ಷಗಳ ನೇತೃತ್ವ ವಹಿಸಿಕೊಂಡು ಮುಖ್ಯಮಂತ್ರಿ ಆಗಿರುವುದರಿಂದ ನಿಭಾಯಿಸುವುದು ತುಂಬಾ ಕಷ್ಟಕರ. ಹೀಗಾಗಿ ಪಕ್ಷದ ಮುಖಂಡರು ಅರ್ಥ ಮಾಡಿಕೊಂಡು ಮಾತನಾಡಬೇಕು ಎಂದು ಕಿವಿಮಾತು ಹೇಳಿದರು.

Leave a Reply

Your email address will not be published. Required fields are marked *