ಕುಮಾರಸ್ವಾಮಿಯೇ ಐದು ವರ್ಷ ಸಿಎಂ: ಸೋನಿಯಾ, ರಾಹುಲ್ ಪತ್ರ ಬರೆದುಕೊಟ್ಟಿದ್ದಾರೆಂದ ಎಚ್​ಡಿಡಿ

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವ ಸಂದರ್ಭದಲ್ಲೇ ಐದು ವರ್ಷಗಳ ಕಾಲ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ ಆಗಿರುತ್ತಾರೆ ಎಂಬುದಾಗಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಪತ್ರ ಬರೆದು ಕೊಟ್ಟಿದ್ದಾರೆ. ಹೀಗಾಗಿ ಐದು ವರ್ಷಗಳ ಕಾಲ ಸಿಎಂ ಹುದ್ದೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ಪದ್ಮನಾಭನಗರದಲ್ಲಿ ಶನಿವಾರ ಪಕ್ಷದ ಕಾರ್ಯಕರ್ತರ ಸಮ್ಮುಖ ಕೇಕ್ ಕತ್ತರಿಸಿ 87ನೇ ಹುಟ್ಟುಹಬ್ಬ ಆಚರಿಸಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ಯಾವಾಗಲೂ ದೇವರಲ್ಲಿ ನಂಬಿಕೆ ಇಟ್ಟವನು. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲೇ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಆಗಲಿದೆ ಎಂಬ ವಿಶ್ವಾಸವಿತ್ತು. ಆಗಲೇ ಕುಮಾರಸ್ವಾಮಿ ಸಿಎಂ ಆಗುತ್ತಾರೆ ಎಂಬ ನಿರೀಕ್ಷೆ ಇತ್ತು. ಅದು ಹಾಗೆಯೇ ಆಯಿತು ಎಂದು ವಿಶ್ಲೇಷಿಸಿದರು. ಮೈತ್ರಿ ಸರ್ಕಾರದಲ್ಲಿ ಮೊದಲಿನಿಂದಲೂ ಗೊಂದಲ ಇದೆ. ಕುಮಾರಸ್ವಾಮಿ ಸಿಎಂ ಆದಾಗಿನಿಂದಲೂ ಯಾರ್ಯಾರು ಏನೇನು ಹೇಳಿಕೆ ಕೊಟ್ಟಿದ್ದಾರೆ ಎಂಬುದರ ಚರ್ಚೆಗೆ ಹೋಗುವುದಿಲ್ಲ. ಮೈತ್ರಿ ಸರ್ಕಾರ ಉಳಿಯುತ್ತದೆ. ಕುಮಾರಸ್ವಾಮಿ ಐದು ವರ್ಷ ಅಧಿಕಾರ ನಡೆಸುತ್ತಾರೆ. ಆಡಳಿತ ಮಂಡಳಿಗಳು ಹೇಳಿದಂತೆ ಮಾಧ್ಯಮಗಳು ಕೆಲಸ ಮಾಡುತ್ತವೆ. ಅವರ ಸ್ವಾತಂತ್ರ್ಯಕ್ಕೆ ನನ್ನ ಅಡ್ಡಿ ಇಲ್ಲ ಎಂದರು. ಪ್ರಧಾನಿ ಮೋದಿ ನಡವಳಿಕೆ ಬಗ್ಗೆ ದೇಶದ ಜನತೆ ಬೇಸತ್ತಿದ್ದಾರೆ. ಮೋದಿಗೂ ಅದರ ಅರಿವಿದೆ. ಆದರೂ 300 ಸೀಟು ಗೆಲ್ಲುತ್ತೇವೆ ಎನ್ನುತ್ತಾರೆ. ಬಿಜೆಪಿಗೆ ಬಹುಮತ ಬರುವುದಿಲ್ಲ. ಕಾಂಗ್ರೆಸ್​ಗೂ ಬಹುಮತ ಕಷ್ಟ. ವಿ.ಪಿ.ಸಿಂಗ್ ಕಾಲದಲ್ಲೂ ಅತಿದೊಡ್ಡ ಪಕ್ಷ ಅಧಿಕಾರಕ್ಕೆ ಬಂದಿರಲಿಲ್ಲ. ಬಿಜೆಪಿಯವರು ಪ್ರಾದೇಶಿಕ ಪಕ್ಷಗಳನ್ನಿಟ್ಟುಕೊಂಡು ಒದ್ದಾಡಬೇಕಾಗುತ್ತದೆ. ಕೇಂದ್ರದಲ್ಲಿ ಪ್ರಾದೇಶಿಕ ಪಕ್ಷಗಳ ಬೆಂಬಲದಿಂದ ರಾಷ್ಟ್ರೀಯ ಪಕ್ಷದವರು ಪ್ರಧಾನಿಯಾಗಬಹುದು ಎಂದು ಭವಿಷ್ಯ ನುಡಿದರು.

ಮೋದಿ, ರಾಹುಲ್ ಸಿದ್ದು ಶುಭಾಶಯ

ಎಚ್.ಡಿ.ದೇವೇಗೌಡರಿಗೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಟ್ವೀಟ್ ಮೂಲಕ ಶುಭ ಕೋರಿದ್ದಾರೆ.

ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಮುಖ್ಯಮಂತ್ರಿಯಾಗುವ ಯೋಗವಿದ್ದರೆ ಮುಂದೆ ನೋಡೋಣ ಬಿಡಿ. ನಮ್ಮ ಕುಟುಂಬದ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿರುವಾಗ ನಾವು ಅದರ ಬಗ್ಗೆ ಯೋಚನೆ ಮಾಡಿಲ್ಲ.

| ಭವಾನಿ ರೇವಣ್ಣ ಹಾಸನ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ

ದೇವೇಗೌಡರ ಹುಟ್ಟುಹಬ್ಬ

86 ಪೂರ್ಣಗೊಂಡು 87ನೇ ವರ್ಷಕ್ಕೆ ಕಾಲಿಟ್ಟ ಎಚ್.ಡಿ.ದೇವೇಗೌಡ ಶುಕ್ರವಾರ ಬೆಳಗ್ಗೆ ತಿರುಪತಿಯಲ್ಲಿ ಕುಟುಂಬ ಸಮೇತ ತಿಮ್ಮಪ್ಪನ ದರ್ಶನ ಪಡೆದರು. ಪತ್ನಿ ಚನ್ನಮ್ಮ, ಸಿಎಂ ಕುಮಾರಸ್ವಾಮಿ ಹಾಗೂ ಕುಟುಂಬದವರು ಪಾಲ್ಗೊಂಡಿದ್ದರು. ನಂತರ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಿ, ಪದ್ಮನಾಭನಗರದ ನಿವಾಸದಲ್ಲಿ ಅಭಿಮಾನಿಗಳ ಒತ್ತಾಸೆಗೆ ಮಣಿದು ಕೇಕ್ ಕತ್ತರಿಸಿದರು. ಗುರು ಪೌರ್ಣಿಮೆ ಇದ್ದುದರಿಂದ ಮನೆಯಲ್ಲಿ ಸತ್ಯನಾರಾಯಣ ಫೂಜೆ ಮಾಡಿದ್ದೆವು. ಸುಮಾರು 40 ವರ್ಷಗಳಿಂದ ತಿರುಪತಿಗೆ ಹೋಗಿ ವೆಂಕಟೇಶ್ವರನ ದರ್ಶನ ಪಡೆದು, ಆಶೀರ್ವಾದ ಪಡೆಯುತ್ತೇನೆ ಎಂದು ದೇವೇಗೌಡ ತಿಳಿಸಿದರು. ಇದೇ ವೇಳೆ ಪದ್ಮನಾಭ ನಗರದ ನಿವಾಸದ ಎದುರು ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಆರಂಭಿಸಿದ ಸಂಚಾರಿ ಅಪ್ಪಾಜಿ ಕ್ಯಾಂಟೀನ್​ಗೆ ಚಾಲನೆ ನೀಡಿದರು.

ವ್ಯತಿರಿಕ್ತ ಹೇಳಿಕೆ ನೀಡದಂತೆ ಸಿಎಂ ಮನವಿ

ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚನೆಯ ಮಹತ್ತರ ಘಟ್ಟದಲ್ಲಿ ನಾವಿದ್ದೇವೆ. ಹೀಗಾಗಿ ರಾಜ್ಯದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಉಭಯ ಪಕ್ಷಗಳ ಮುಖಂಡರು ವ್ಯತಿರಿಕ್ತ ಹೇಳಿಕೆ ನೀಡಬಾರದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಈ ಕುರಿತು ಟ್ವಿಟರ್​ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಸಿಎಂ, ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚನೆಯ ನಮ್ಮೆಲ್ಲರ ಆಶಯ ಸಾಕಾರಗೊಳಿಸುವ ಪ್ರಯತ್ನಗಳು ನಡೆಯುತ್ತಿರುವ ಸಂದರ್ಭದಲ್ಲಿ ರಾಜ್ಯದ ಮೈತ್ರಿಪಕ್ಷಗಳ ಮುಖಂಡರು ವ್ಯತಿರಿಕ್ತ ಹೇಳಿಕೆಗಳನ್ನು ನೀಡುವುದರಿಂದ ಇಂತಹ ಪ್ರಯತ್ನಗಳಿಗೆ ಹಿನ್ನಡೆಯಾಗಬಹುದು. ಆದ್ದರಿಂದ ಉಭಯ ಪಕ್ಷಗಳ ಮುಖಂಡರು ಸಕಾರಾತ್ಮಕವಾಗಿ ಸ್ಪಂದಿಸಿ, ಯಾವುದೇ ವಿಭಿನ್ನ, ವ್ಯತಿರಿಕ್ತ ಹೇಳಿಕೆ ನೀಡದಂತೆ ನನ್ನ ಕಳಕಳಿಯ ಮನವಿ ಎಂದಿದ್ದಾರೆ. ಇದಕ್ಕೂ ಮೊದಲು ತಿರುಪತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಗೆ 18ಕ್ಕೂ ಹೆಚ್ಚು ಸ್ಥಾನಗಳು ದಕ್ಕಲಿವೆ. ಜೆಡಿಎಸ್ ಆರಂಭದಿಂದಲೂ ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದು, ಲೋಕಸಭಾ ಚುನಾವಣೆ ಫಲಿತಾಂಶದ ನಂತರವೂ ಕಾಂಗ್ರೆಸ್ ಜತೆ ಇರುತ್ತೇವೆ ಎಂದು ಹೇಳಿದರು.

ವಿಸರ್ಜನೆ ವೇದನೆ

ಬೆಂಗಳೂರು: ‘ಗೊಂದಲಗಳು ಬಗೆಹರಿ ಯದಿದ್ದರೆ ಸರ್ಕಾರ ವಿಸರ್ಜನೆ ಮಾಡುವುದು ಸೂಕ್ತ’ ಎಂಬ ಜೆಡಿಎಸ್ ಹಿರಿಯ ನಾಯಕ ಬಸವರಾಜ್ ಹೊರಟ್ಟಿ ನೀಡಿರುವ ಹೇಳಿಕೆ ಮೈತ್ರಿ ಪಕ್ಷಗಳನ್ನು ಮುಜುಗರಕ್ಕೀಡು ಮಾಡಿದೆ.

ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಪದೇಪದೆ ಹೇಳಿಕೆ ನೀಡುತ್ತಿರುವುದು ಮೈತ್ರಿ ಸರ್ಕಾರದ ಬುಡಕ್ಕೆ ಬೆಂಕಿ ಇಟ್ಟಿತ್ತು. ಕುಂದಗೋಳ ಹಾಗೂ ಚಿಂಚೋಳಿ ಉಪಚುನಾವಣೆ ವೇಳೆ ಖುದ್ದು ಸಿಎಂ ಕುಮಾರಸ್ವಾಮಿ, ‘ಖರ್ಗೆ ಸಿಎಂ ಆಗಬೇಕಿತ್ತು’ ಎಂಬ ಹೇಳಿಕೆಯಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಅದಕ್ಕೆ ತಿರುಗೇಟು ನೀಡಿದಂತೆ ಸಿದ್ದರಾಮಯ್ಯ, …ರೇವಣ್ಣ ಕೂಡ ಸಿಎಂ ಆಗಬಹುದು ಎಂದು ಉರಿವ ಬೆಂಕಿಗೆ ತುಪ್ಪ ಸುರಿದಿದ್ದರು. ಮೈತ್ರಿ ಸರ್ಕಾರಗಳ ಶಾಸಕರ ಈ ನಡೆಯನ್ನು ಬಿಜೆಪಿ ಉಪಚುನಾವಣೆಯಲ್ಲಿ ಬಂಡವಾಳವನ್ನಾಗಿ ಮಾಡಿಕೊಳ್ಳುವ ಪ್ರಯತ್ನ ನಡೆಸಿತು. ಬಳಿಕ ಮಿತ್ರ ಪಕ್ಷಗಳ ನಾಯಕರು ಇಂತಹ ಹೇಳಿಕೆಗಳಿಗೆ ಕೆಲ ಕಾಲ ಕದನ ವಿರಾಮ ಘೋಷಿಸಿದ್ದರು. ಇದೀಗ ಬಸವರಾಜ ಹೊರಟ್ಟಿ, ‘ಮೈತ್ರಿ ಸರ್ಕಾರದಲ್ಲಿ ಗೊಂದಲ ಬಗೆಹರಿಯದಿದ್ದರೆ ರಾಜ್ಯಪಾಲರು ಮಧ್ಯಪ್ರವೇಶಿಸುವ ಮುನ್ನ ಸರ್ಕಾರ ವಿಸರ್ಜನೆ ಮಾಡುವುದು ಸೂಕ್ತ’ ಎಂಬ ಹೇಳಿಕೆ ನೀಡಿದ್ದು ಉಭಯ ಪಕ್ಷಗಳಲ್ಲಿ ಜ್ವಾಲಾಮುಖಿ ಭುಗಿಲೇಳುವಂತೆ ಮಾಡಿದೆ. ಉಪಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದ ಹೊರಟ್ಟಿ ಇದ್ದಕ್ಕಿದ್ದಂತೆ ಈ ಹೇಳಿಕೆ ನೀಡಿದ್ದು, ರಾಜ್ಯ ರಾಜಕೀಯದಲ್ಲಿ ದೊಡ್ಡ ಹುಯಿಲೆಬ್ಬಿಸಿದೆ. ಪ್ರತಿಪಕ್ಷ ಬಿಜೆಪಿ ನಾಯಕರು ಸರ್ಕಾರದ ಅಸ್ಥಿರತೆಗೆ ಇದು ಸಾಕ್ಷಿ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗ್ತಾರೆ ಎಂದು ಪದೇಪದೆ ಹೇಳುವ ಅವಶ್ಯಕತೆ ಏನಿದೆ. ಇದರಿಂದ ಜೆಡಿಎಸ್-ಕಾಂಗ್ರೆಸ್ ನಡುವೆ ಜಗಳ ಇದೆ ಎಂದು ಬಿಜೆಪಿಯವರು ಹೇಳುತ್ತಾರೆ. ಇದೆಲ್ಲ ಆಗಬಾರದು. ಒಂದು ಹೊಡೆತದಲ್ಲಿ ಎರಡು ತುಂಡು ಅನ್ನೋ ಹಾಗೆ ಸರ್ಕಾರವನ್ನು ಉತ್ತಮವಾಗಿ ನಡೆಯಲು ಬಿಡಬೇಕು ಅಥವಾ ಸರ್ಕಾರ ಬಿಟ್ಟು ಹೊಗಲಿ.

| ಬಸವರಾಜ ಹೊರಟ್ಟಿ ಜೆಡಿಎಸ್ ಮುಖಂಡ

ನೋ ಕಾಮೆಂಟ್ಸ್… ವೈಯಕ್ತಿಕ ಅಭಿಪ್ರಾಯ

ಹೊರಟ್ಟಿ ಹೇಳಿಕೆಗೆ ಎಚ್.ಡಿ.ದೇವೇಗೌಡ ಪ್ರತಿಕ್ರಿಯೆ ನೀಡಲು ನಿರಾಕರಿಸಿದರೆ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ‘ಸಮ್ಮಿಶ್ರ ಸರ್ಕಾರ ವಿಸರ್ಜನೆ ಎಂಬುದು ಬಹಳ ದೊಡ್ಡ ಮಾತಾಗುತ್ತದೆ. ಎರಡೂ ಪಕ್ಷಗಳಲ್ಲೂ ಹೈಕಮಾಂಡ್ ಎಂಬುದಿದೆ. ಹಿರಿಯ ನಾಯಕರಿದ್ದಾರೆ. ಅವರು ಕುಳಿತು ಚರ್ಚೆ ಮಾಡುತ್ತಾರೆ. ಯಾವುದೋ ನೋವಿನಲ್ಲಿ ಆ ರೀತಿ ಹೇಳಿರಬಹುದು. ಅವರ ವೈಯಕ್ತಿಕ ಅಭಿಪ್ರಾಯವನ್ನು ಸಾರ್ವತ್ರಿಕವಾಗಿ ಅನ್ವಯಿಸಲು ಸಾಧ್ಯವಿಲ್ಲ ಎಂದು ಸಾರಾಸಗಟು ತಳ್ಳಿ ಹಾಕಿದ್ದಾರೆ. ‘ಮೈತ್ರಿ ಸರ್ಕಾರ ರಚನೆಯಾಗಿರುವುದು ಎಚ್.ಡಿ.ದೇವೇಗೌಡ-ಕುಮಾರಸ್ವಾಮಿ ಹಾಗೂ ಸೋನಿಯಾ-ರಾಹುಲ್ ಗಾಂಧಿ ಒಡಂಬಡಿಕೆಯಿಂದ. ಈ ವಿಚಾರದಲ್ಲಿ ಹೊರಟ್ಟಿ ನಿರ್ಣಯ ತೆಗೆದುಕೊಳ್ಳುವವರಲ್ಲ’ ಎಂದು ಸಚಿವ ಸತೀಶ್ ಜಾರಕಿಹೊಳಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಹೊರಟ್ಟಿ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ, ನಮ್ಮ ಸರ್ಕಾರವಂತೂ ಫಲಿತಾಂಶ ಬಂದ ನಂತರ ಇನ್ನಷ್ಟು ಗಟ್ಟಿಯಾಗಿರುತ್ತದೆ’ ಎಂದು ಸ್ಪಷ್ಟಪಡಿಸಿದ್ದಾರೆ. ಹೊರಟ್ಟಿ ಅವರದ್ದು ವೈಯಕ್ತಿಕ ಹೇಳಿಕೆ. ಅದು ಅವರ ಸ್ವಾತಂತ್ರ್ಯ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

Leave a Reply

Your email address will not be published. Required fields are marked *