ಬಿಜೆಪಿ ನಾಯಕರಿಗೆ ಶಕ್ತಿ ಇದ್ದರೆ ಅವಿಶ್ವಾಸ ಮಂಡಿಸಲಿ: ಮಾಜಿ ಪ್ರಧಾನಿ ದೇವೇಗೌಡ

ದೆಹಲಿ: ಬಿಜೆಪಿ ಅವರಿಗೆ ಶಕ್ತಿ ಇದ್ದರೆ ಅವಿಶ್ವಾಸ ಮಂಡಿಸಲಿ ಎಂದು ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಅವರು ಬಿಜೆಪಿ ನಾಯಕರಿಗೆ ನೇರವಾಗಿ ಸವಾಲು ಹಾಕಿದರು.

ಬುಧವಾರ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ನಡವಳಿಕೆಯ ಬಗ್ಗೆ ನಾನು ಮಾತನಾಡುವುದಿಲ್ಲ. ಸರ್ಕಾರದ ಭವಿಷ್ಯ ಸದನದಲ್ಲೇ ನಿರ್ಧಾರ ಆಗಿಬಿಡಲಿ, ಬಿಜೆಪಿ ನಾಯಕರಿಗೆ ಶಕ್ತಿ ಇದ್ದರೆ ಅವಿಶ್ವಾಸ ಮಂಡಿಸಲಿ ಎಂದರು.

ಬಿಜೆಪಿಯವರು ಅದೇನು ಮಾಡಿಕೊಳ್ಳುತ್ತಾರೆ ಮಾಡಲಿ, ಸರ್ಕಾರ ಅಲ್ಪ ಮತಕ್ಕೆ ಕುಸಿದಿದ್ದರೆ ಅದನ್ನು ಸಾಬೀತುಪಡಿಸಲಿ, ವಿಶ್ವಾಸಮತಯಾಚನೆ ಮಂಡಿಸಲು ನಾನು ಬೇಡ ಎನ್ನುವುದಿಲ್ಲ. ಪ್ರತಿಯೊಬ್ಬ ಶಾಸಕರಿಗೂ ಒಂದೊಂದು ಕೆಲಸ ಇರುತ್ತದೆ. ಹೀಗಾಗಿ ಕೆಲವರು ಇಂದು ಕಲಾಪಕ್ಕೆ ಬಂದಿಲ್ಲ. ಅಧಿವೇಶನ ನಡೆಯುತ್ತಿರುವುದರ ಬಗ್ಗೆ ಅನುಮಾನ ಇದ್ದರೆ ಅವಿಶ್ವಾಸ ಗೊತ್ತುವಳಿ ಮಂಡಿಸಲಿ ಎಂದು ಸವಾಲು ಹಾಕಿದರು.

ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿಲ್ಲ
ಲೋಕಸಭೆ ಸೀಟು ಹಂಚಿಕೆ ಬಗ್ಗೆ ಯಾವುದೇ ಮಾತುಕತೆಯಾಗಿಲ್ಲ. ಇಂದು ಕೇಂದ್ರ ಬಜೆಟ್ ಕುರಿತು ಮಾತನಾಡಲು ಬಂದಿದ್ದೆ. ಆದರೆ, ಸಂಸತ್ ಕಲಾಪ ಮುಂದೂಡಿಕೆ ಆಯಿತು. ಸೆಂಟ್ರಲ್ ಹಾಲ್​ನಲ್ಲಿ ಕಾಫಿ ಕುಡಿದು ಬಂದೆ. ನಾನು ಇಂದು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿಲ್ಲ ಎಂದರು.