ಒಂದಾದ ಗುರುಶಿಷ್ಯರು: ಇಂದು ಒಂದೇ ವೇದಿಕೆಗೆ ಬರಲಿದ್ದಾರೆ ದೇವೇಗೌಡ- ಸಿದ್ದರಾಮಯ್ಯ

ಬೆಂಗಳೂರು: ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಒಂದೇ ವೇದಿಕೆಯಡಿ ಸೇರಲಿದ್ದಾರೆ. ಈ ಮೂಲಕ ಉಪ ಚುನಾವಣೆಗೆ ರಣಕಹಳೆ ಮೊಳಗಿಸಲಿದ್ದಾರೆ.

ರಾಜ್ಯದಲ್ಲಿ ಎದುರಾಗಿರುವ ಐದು ಕ್ಷೇತ್ರಗಳ ಉಪಚುನಾವಣೆಯ ಕುರಿತು ಎರಡೂ ಪಕ್ಷಗಳ ಮುಂದಿನ ಕಾರ್ಯತಂತ್ರದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಲು ಇಂದು ನಗರ ಲಲಿತ್​ ಅಶೋಕ್​ ಹೊಟೇಲ್​ನಲ್ಲಿ 11 ಗಂಟೆಗೆ ಕಾಂಗ್ರೆಸ್​ ಮತ್ತು ಜೆಡಿಎಸ್​ ನಾಯಕರು ಜಂಟಿ ಸುದ್ದಿಗೋಷ್ಠಿ ಆಯೋಜಿಸಿದ್ದಾರೆ. ಕಾಂಗ್ರೆಸ್​-ಜೆಡಿಎಸ್​ನ ಪ್ರಮುಖ ನಾಯಕರು ಇದರಲ್ಲಿ ಭಾಗವಹಿಸುತ್ತಿದ್ದಾರೆ.

ಅಚ್ಚರಿಯೆಂದರೆ, ಒಂದು ಕಾಲದ ಒಡನಾಡಿಗಳು, ಕಳೆದ ವಿಧಾನಸಭೆ ಚುನಾವಣೆ ವರೆಗೆ ಬದ್ಧವೈರಿಗಳೋ ಎಂಬಂತೆ ಕಾದಾಡಿದ್ದ ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈ ಸುದ್ದಿಗೋಷ್ಠಿಯಲ್ಲಿ ಅಕ್ಕಪಕ್ಕದಲ್ಲೇ ಕೂರುವ ಸಂಭವವಿದೆ. ಈ ಮೂಲಕ ರಾಜ್ಯ ಉಪ ಚುನಾವಣೆಗಾಗಿ ಎರಡೂ ಪಕ್ಷಗಳು, ಎಲ್ಲಾ ನಾಯಕರು ವೈಮನಸ್ಸು ಮರೆತು ಒಂದಾಗಿದ್ದಾರೆ. ಅಲ್ಲದೆ, ವಿರೋಧಿ ಪಾಳೆಯದಲ್ಲಿ ನಡುಕ ಹುಟ್ಟಿಸಿದ್ದಾರೆ.

ಸುದ್ದಿಗೋಷ್ಠಿಯ ಕುರಿತು ಪ್ರದೇಶ ಕಾಂಗ್ರೆಸ್​ ಕಚೇರಿಯಿಂದ ಅಧಿಕೃತ ಪ್ರಕಟಣೆ ಮಾಧ್ಯಮಗಳಿಗೆ ಸಿಕ್ಕಿದೆ.