ಬಿಜೆಪಿ ಎದುರು ಜಾತ್ಯತೀತ ಪಕ್ಷಗಳು ಒಗ್ಗೂಡಬೇಕು: ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು

ಬೆಂಗಳೂರು: ದೇಶದ ಪ್ರಜಾಪ್ರಭುತ್ವ ಉಳಿಸಲು ನಾವೆಲ್ಲ ಒಂದಾಗಿದ್ದೇವೆ. ಬಿಜೆಪಿ ಎದುರು ಜಾತ್ಯತೀತ ಪಕ್ಷಗಳು ಒಗ್ಗೂಡಬೇಕು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದರು.

ಜೆಡಿಎಸ್​ ವರಿಷ್ಠ ದೇವೇಗೌಡರ ಪದ್ಮನಾಭನಗರದ ನಿವಾಸದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ದೇವೇಗೌಡರ ಅಮೂಲ್ಯ ಸಲಹೆಗಳು ನಮಗೆ ಉಪಯುಕ್ತವಾಗಿವೆ. ಈ ಅಪರೂಪದ ದಿನವನ್ನು ನಾನೆಂದೂ ಮರೆಯುವುದಿಲ್ಲ ಎಂದರು.

ಕೇಂದ್ರ ಸರ್ಕಾರ ಎಲ್ಲ ಕಡೆ ಮೂಗು ತೂರಿಸುತ್ತಿದೆ

ದೇಶದವನ್ನು ಉಳಿಸಬೇಕು. ಇಂದು ಸಿಬಿಐ, ಆರ್​ಬಿಐನಲ್ಲಿ ಏನೇನು ಆಗುತ್ತಿದೆ ಎಂದು ಎಲ್ಲರಿಗೂ ಗೊತ್ತು. ಕೇಂದ್ರ ಸರ್ಕಾರ ಎಲ್ಲ ಕಡೆ ಮೂಗು ತೂರಿಸುತ್ತಿದೆ. ಇಡಿ, ಸಿಬಿಐ, ಆರ್​ಬಿಐಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ರಫೇಲ್​ ಹಗರಣದಲ್ಲಿ ಸಿಲುಕಿದೆ. ತೈಲ ದರ ದಿನದಿಂದ ದಿನಕ್ಕೆ ಏರುತ್ತಿದೆ. ಡಾಲರ್​ ಎದುರು ರೂಪಾಯಿ ಮೌಲ್ಯ ಕುಸಿಯುತ್ತಲೇ ಇದೆ. ನಿತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ದೇಶವನ್ನು ಉಳಿಸಲು ಜಾತ್ಯತೀತ ಪಕ್ಷಗಳು ಒಂದಾಗಬೇಕು. ದೇವೇಗೌಡರ ಸಲಹೆ, ಸೂಚನೆಯಿಂದ ದೇಶಕ್ಕೆ ಒಳಿತಾಗುತ್ತದೆ. ನಮಗೆ ಪ್ರಧಾನಿ ಅಭ್ಯರ್ಥಿ ಯಾರೆಂಬುದು ಮುಖ್ಯವಲ್ಲ. ದೇಶಕ್ಕೆ ಒಳಿತಾಗಬೇಕು. ನಾವೆಲ್ಲರೂ ಒಂದಾಗಿ ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ ಎಂದು ಹೇಳಿದರು.

ಸ್ಟಾಲಿನ್​ ಭೇಟಿಗೆ ನಿರ್ಧಾರ
ನಾಳೆ ಡಿಎಂಕೆ ಮುಖಂಡ ಸ್ಟಾಲಿನ್​ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಲಾಗುವುದು. ಅಖಿಲೇಶ್​ ಯಾದವ್​, ಮಾಯಾವತಿ ಅವರೊಂದಿಗೆ ಸಹ ಚರ್ಚೆ ನಡೆಸುತ್ತೇವೆ. ಮಹಾಘಟಬಂಧನ ವಿಫಲ ಎಂದು ಬಿಜೆಪಿ ಹೇಳಿತ್ತು. ಕರ್ನಾಟಕ ಬೈ ಇಲೆಕ್ಷನ್​ ಎಲ್ಲಕ್ಕೂ ಉತ್ತರ ನೀಡಿದೆ. ಮಾಯಾವತಿ ಎಲ್ಲಿಯೂ ಹೋಗಿಲ್ಲ. ಎಲ್ಲ ಒಟ್ಟಾಗಿಯೇ ಲೋಕಸಭಾ ಚುನಾವಣೆ ಎದುರಿಸುತ್ತೇವೆ. ಮಮತಾ ಬ್ಯಾನರ್ಜಿ ಜನವರಿಯಲ್ಲಿ ಬೃಹತ್​ ರ‍್ಯಾಲಿ ನಡೆಸಲಿದ್ದಾರೆ. ಯಾರೂ ಬೇರೆಯಾಗಿಲ್ಲ, ಬೇರೆ ಅರ್ಥ ಬೇಡ ಎಂದರು.
ಸುಮಾರು 45 ನಿಮಿಷಗಳ ಕಾಲ ಉಭಯ ನಾಯಕರು ಚರ್ಚೆ ನಡೆಸಿದರು.