2019ರಲ್ಲಿ ಮರುಕಳಿಸಲಿದೆ 1996ರ ರಾಜಕೀಯ : ಎಚ್​.ಡಿ.ಕುಮಾರಸ್ವಾಮಿ

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸುವ ನಿಟ್ಟಿನಲ್ಲಿ ಆಂಧ್ರಮುಖ್ಯಮಂತ್ರಿ ಎಲ್ಲ ಜಾತ್ಯತೀತ ಪಕ್ಷಗಳ ನಾಯಕರನ್ನೂ ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್​. ಡಿ.ಕುಮಾರಸ್ವಾಮಿ ಹೇಳಿದರು.

ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಭೇಟಿಯ ನಂತರ ಮಾಧ್ಯಮದವರ ಜತೆ ಮಾತನಾಡಿ, 1996ರಲ್ಲಿ ದೇವೇಗೌಡರು ಪ್ರಧಾನಿಯಾಗಿದ್ದಾಗಿನ ಕಾಲ 2019ರ ಲೋಕಸಭಾ ಚುನಾವಣೆಯಲ್ಲಿ ಮರುಕಳಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವ ಉಳಿವಿಗಾಗಿ ನಾವೆಲ್ಲ ಒಂದಾಗಿ, ಮಹಾಘಟಬಂಧನ ನಡೆಸುತ್ತಿದ್ದೇವೆ. ದೇವೆಗೌಡರ ಹಿರಿತನ, ರಾಜಕೀಯ ಅನುಭವ, ಅವರಿಗೆ ಇರುವ ಹಿನ್ನೆಲೆಯನ್ನು ಗುರುತಿಸಿ ಈ ಒಗ್ಗಟ್ಟಿನ ನೇತೃತ್ವ ವಹಿಸಲು ಚಂದ್ರಬಾಬು ನಾಯ್ಡು ಕೇಳಿಕೊಂಡಿದ್ದಾರೆ. ರಾಷ್ಟ್ರದ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸುವ ಶಕ್ತಿ ದೇವೇಗೌಡರಿಗೆ ಇದೆ. ನಾಯ್ಡು ಅವರು ಈಗಾಗಲೇ ರಾಹುಲ್​ ಗಾಂಧಿಯವರನ್ನೂ ಭೇಟಿ ಮಾಡಿದ್ದರು. ಜನವರಿಯಲ್ಲಿ ಮಮತಾ ಬ್ಯಾನರ್ಜಿಯವರು ಕೋಲ್ಕತಾದಲ್ಲಿ ಒಂದು ವೇದಿಕೆ ಸಿದ್ಧಪಡಿಸಿದ್ದು ಎಲ್ಲರಿಗೂ ಆಹ್ವಾನ ನೀಡಿದ್ದಾರೆ. ನಾವೆಲ್ಲ ಒಂದಾಗಿದ್ದೇವೆ ಎಂದರು.

ಮೋದಿಯಿಂದ ಸಮಸ್ಯೆ: ಎಚ್​ಡಿಡಿ
ನಾಲ್ಕೂವರೆ ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಕಷ್ಟು ಸಮಸ್ಯೆ ಉಂಟು ಮಾಡಿದ್ದಾರೆ. ತನಿಖಾ ಸಂಸ್ಥೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಹೇಳಿದರು.

ಮಾಯಾವತಿ, ಮಮತಾ ಬ್ಯಾನರ್ಜಿ, ಸ್ಟಾಲಿನ್​ ಸೇರಿ ಎಲ್ಲರೂ ಒಂದಾಗಬೇಕು. ಮೋದಿ ನೇತೃತ್ವದ ಎನ್​ಡಿಎಯನ್ನು ಕಿತ್ತೊಗೆಯಬೇಕು. ಈ ಬಗ್ಗೆ ಚಂದ್ರಬಾಬು ನಾಯ್ಡು ಅವರ ಜತೆ ಮಾತುಕತೆ ನಡೆಸಿದ್ದೇವೆ. ಕಾಂಗ್ರೆಸ್​ ಸಹಕಾರ ನೀಡಬೇಕು. ಆ ಪಕ್ಷದ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಸೆಕ್ಯೂಲರ್​ ಪಕ್ಷಗಳ ಬಲ ತೋರಿಸುವ ಕಾಲ ಈಗ ಬಂದಿದ್ದು ಚಂದ್ರಬಾಬು ನಾಯ್ಡು ಶ್ರಮ ಪಡುತ್ತಿದ್ದಾರೆ ಎಂದು ತಿಳಿಸಿದರು.
ಚಂದ್ರಬಾಬು ನಾಯ್ಡು, ಎಚ್​.ಡಿ.ಕುಮಾರಸ್ವಾಮಿ ಸೇರಿ ಸದ್ಯದಲ್ಲೇ ದೆಹಲಿಯಲ್ಲಿ ಸಭೆ ನಡೆಸಲಿದ್ದಾರೆ. ಅದಾದ ಬಳಿಕ ತೃತೀಯ ರಂಗ ತೀರ್ಮಾನ ಕೈಗೊಳ್ಳಲಿದೆ ಎಂದರು.

Leave a Reply

Your email address will not be published. Required fields are marked *