ವಾರಾಣಸಿಯಿಂದ ಮೋದಿ ಆಯ್ಕೆ ಪ್ರಶ್ನಿಸಿ ಅರ್ಜಿ; ಪ್ರಧಾನಿಗೆ ನೋಟಿಸ್ ನೀಡಿದ ಹೈಕೋರ್ಟ್‌

ಅಲಹಾಬಾದ್‌: ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಆಯ್ಕೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ಸಂಬಂಧ ಅಲಹಾಬಾದ್‌ ಹೈಕೋರ್ಟ್‌ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ನೋಟಿಸ್‌ ಜಾರಿ ಮಾಡಿದೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ಕೆ ಗುಪ್ತಾ ಅವರು ಮುಂದಿನ ವಿಚಾರಣೆಯನ್ನು ಆಗಸ್ಟ್‌ 21ಕ್ಕೆ ಮುಂದೂಡಿದ್ದಾರೆ.

ವಾರಣಾಸಿಯಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿ ಎಂದು ಘೋಷಿಸಲ್ಪಟ್ಟಿದ್ದ ಬಿಎಸ್‌ಎಫ್‌ನ ಮಾಜಿ ಯೋಧ ತೇಜ್ ಬಹದ್ದೂರ್ ರಿಟರ್ನಿಂಗ್‌ ಅಧಿಕಾರಿ ಅವರ ನಾಮಪತ್ರಗಳನ್ನು ತಿರಸ್ಕರಿಸಿದ್ದರಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ವಿಫಲರಾಗಿದ್ದರು. ಇವರು ಪ್ರಧಾನಿ ನರೇಂದ್ರ ಮೋದಿಯವರ ಆಯ್ಕೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.

ಭ್ರಷ್ಟಾಚಾರ ಆರೋಪದ ಮೇಲೆ ತಾವು ಬಿಎಸ್ಎಫ್​ನಿಂದ ವಜಾಗೊಂಡಿಲ್ಲ ಎಂಬ ಕುರಿತು ಪ್ರಮಾಣಪತ್ರ ಸಲ್ಲಿಸಲು ತೇಜ್ ಬಹದ್ದೂರ್ ವಿಫಲವಾಗಿದ್ದ ಹಿನ್ನೆಲೆಯಲ್ಲಿ ನಾಮಪತ್ರವನ್ನು ತಿರಸ್ಕರಿಸಲಾಗಿತ್ತು.

ನನ್ನ ನಾಮಪತ್ರವನ್ನು ಚುನಾವಣೆ ಅಧಿಕಾರಿಗಳು ತಪ್ಪಾಗಿ ತಿರಸ್ಕರಿಸಿದ್ದಾರೆ ಎಂದು ಚುನಾವಣೆ ಅರ್ಜಿಯಲ್ಲಿ ಆರೋಪಿಸಿದ್ದು, ವಾರಾಣಸಿಯಿಂದ ಪ್ರಧಾನಿ ಮೋದಿ ಆಯ್ಕೆಯನ್ನು ಅನೂರ್ಜಿತಗೊಳಿಸಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ.

ನಾಮಪತ್ರವನ್ನು ತಿರಸ್ಕೃತಗೊಳಿಸುವುದಕ್ಕೂ ಮುನ್ನ ಯಾದವ್‌ ಅವರಿಗೆ ವಿಚಾರಣೆಗೆ ಅವಕಾಶ ನೀಡಲಾಗಿಲ್ಲ ಎಂಬ ಅರ್ಜಿದಾರರ ವಾದವನ್ನು ಆಲಿಸಿದ ನ್ಯಾಯಾಲಯ ಮೋದಿಗೆ ನೋಟಿಸ್‌ ನೀಡಿದೆ. (ಏಜನ್ಸೀಸ್)

Leave a Reply

Your email address will not be published. Required fields are marked *