ಐದನೇ ದಿನಕ್ಕೆ ಕಾಲಿಟ್ಟ ಅಣ್ಣ ಹಜಾರೆ ಸತ್ಯಾಗ್ರಹ: ಗ್ರಾಮಸ್ಥರಿಂದ ಹೆದ್ದಾರಿ ತಡೆ

ರಾಲೇಗಾಂವ್​ ಸಿದ್ಧಿ (ಮಹಾರಾಷ್ಟ್ರ): ಕೇಂದ್ರದಲ್ಲಿ ಲೋಕಪಾಲ್​ ಮತ್ತು ಎಲ್ಲಾ ರಾಜ್ಯಗಳಲ್ಲಿ ಲೋಕಾಯುಕ್ತ ಸಂಸ್ಥೆಗಳನ್ನು ಸ್ಥಾಪಿಸುವಂತೆ ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಐದನೇ ದಿನಕ್ಕೆ ಕಾಲಿಟ್ಟಿದ್ದು, ಹಜಾರೆ ಹೋರಾಟಕ್ಕೆ ಬೆಂಬಲಿಸಿ ಗ್ರಾಮಸ್ಥರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ,

81 ವರ್ಷದ ಅಣ್ಣಾ ಹಜಾರೆ ತಮ್ಮ ಊರು ರಾಲೇಗಾಂವ್​ ಸಿದ್ಧಿಯಲ್ಲಿ ಕಳೆದ ಬುಧವಾರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಕೇಂದ್ರ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಭರವಸೆಯನ್ನು ಈಡೇರಿಸಬೇಕು. ಲೋಕಪಾಲ್ ಸಂಸ್ಥೆಯನ್ನು ಸ್ಥಾಪಿಸಬೇಕು. ಸರ್ಕಾರ ತನ್ನ ಭರವಸೆಯನ್ನು ಈಡೇರಿಸುವವರೆಗೆ ಸತ್ಯಾಗ್ರಹವನ್ನು ನಿಲ್ಲಿಸುವುದಿಲ್ಲ ಎಂದು ಅಣ್ಣಾ ಹಜಾರೆ ತಿಳಿಸಿದ್ದಾರೆ.

ಸೂಕ್ತ ಸಾಕ್ಷ್ಯಾಧಾರಗಳಿದ್ದರೆ ಲೋಕಪಾಲ್​ ಸಂಸ್ಥೆಯ ಮೂಲಕ ಪ್ರಧಾನ ಮಂತ್ರಿಯನ್ನೂ ತನಿಖೆಗೆ ಒಳಪಡಿಸಬೇಕು. ಇದೇ ವಿಧದಲ್ಲಿ ರಾಜ್ಯಗಳಲ್ಲಿ ಲೋಕಾಯುಕ್ತ ಸಂಸ್ಥೆ ಮೂಲಕ ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಸಚಿವರು ಮತ್ತು ಶಾಸಕರ ವಿರುದ್ಧದ ಭ್ರಷ್ಟಾಚಾರ ಆರೋಪವನ್ನು ತನಿಖೆಗೆ ಒಳಪಡಿಸಬೇಕು. ಲೋಕಪಾಲ ಮಸೂದೆಯನ್ನು 2013ರಲ್ಲಿ ಅಂಗೀಕರಿಸಲಾಗಿದೆ. ಆದರೆ ಇದುವರೆಗೆ ಕೇಂದ್ರ ಸರ್ಕಾರ ಲೋಕಪಾಲರನ್ನು ನೇಮಿಸಿಲ್ಲ ಎಂದು ಹಜಾರೆ ಕೇಂದ್ರದ ವಿರುದ್ಧ ಕಿಡಿ ಕಾರಿದ್ದಾರೆ.

ಅಣ್ಣಾ ಹಜಾರೆಗೆ ಬೆಂಬಲ ಸೂಚಿಸಿದ ಅಹಮದ್​ನಗರ ಜಿಲ್ಲೆಯ ಪರ್ನರ್​ ತಾಲೂಕಿನ ಸುಪಾ ಗ್ರಾಮದ ರೈತರು ಮತ್ತು ಯುವಜನತೆ ಅಹಮದಾಬಾದ್​-ಪುಣೆ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ.

3.8 ತೂಕ ಇಳಿಕೆ

ಕಳೆದ 5 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಅಣ್ಣಾ ಹಜಾರೆ 3.8 ಕೆ.ಜಿ. ತೂಕ ಕಳೆದುಕೊಂಡಿದ್ದಾರೆ. ರಕ್ತದೊತ್ತಡ, ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಿದೆ ಎಂದು ಅವರ ಆರೋಗ್ಯ ಪರೀಕ್ಷಿಸಿದ ವೈದ್ಯ ಡಾ. ಧನಂಜಯ ಪೋಟೆ ತಿಳಿಸಿದ್ದಾರೆ. (ಏಜೆನ್ಸೀಸ್​)