ನಸುಕಿನಲ್ಲಿ ಗುಡುಗು-ಸಿಡಿಲು, ಬಿರುಗಾಳಿ-ಮಳೆ ಅಬ್ಬರ

UDP-4-5-Rain

ಜಿಲ್ಲೆಯಲ್ಲಿ 53 ಮನೆಗಳಿಗೆ ಹಾನಿ | 20 ಕುಟಂಬಗಳ ಅಡಿಕೆತೋಟ, 8 ಕೊಟ್ಟಿಗೆ ನಷ್ಟ

  • ಕುಂದಾಪುರ ತಾಲೂಕಿನಲ್ಲಿ ಗರಿಷ್ಠ 191 ಮಿ.ಮೀ. ವರ್ಷಧಾರೆ

ವಿಜಯವಾಣಿ ಸುದ್ದಿಜಾಲ ಉಡುಪಿ
ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿಯುತ್ತಿದ್ದು, ಜುಲೈ 8ರ ವರೆಗೂ ಕರಾವಳಿ ಭಾಗದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಗುರುವಾರ ನಸುಕಿನ 4 ಗಂಟೆಯ ವೇಳೆಗೆ ಹೃದಯಕ್ಕೆ ಆಘಾತವಾಗುವ ರೀತಿಯಲ್ಲಿ ಅಬ್ಬರದ ಗುಡುಗು, ಸಿಡಿಲು, ಭಯಂಕರ ಗಾಳಿ ಆರಂಭಗೊಂಡಿತು. 15-20 ನಿಮಿಷಗಳ ವರೆಗೂ ಭಯ ಹುಟ್ಟಿಸುವ ರೀತಿಯಲ್ಲಿ ಗುಡುಗಿನ ಅಬ್ಬರ ಮುಂದುವರಿದಿತ್ತು.

ಗುಡುಗಿನ ಸದ್ದಿಗೆ ಮನೆಗಳೆಲ್ಲ ಅಲ್ಲಾಡಿದಂತಾಗಿ, ಉಡುಪಿ ಜನರು ಆತಂಕಕ್ಕೊಳಗಾಗಿದ್ದರು. ಅತಿ ಎತ್ತರದ ಅಪಾರ್ಟ್​ಮೆಂಟ್​ನಲ್ಲಿರುವ ಜನರಿಗಂತೂ ಎಲ್ಲಿ ಕಟ್ಟಡ ಕುಸಿಯುವುದೋ ಎಂಭ ಭಯ ಆವರಿಸಿತ್ತು.

53 ಮನೆಗೆ ಹಾನಿ

ಭಾರಿ ಬಿರುಗಾಳಿಯಿಂದಾಗಿ ಕುಂದಾಪುರ ತಾಲೂಕಿನಲ್ಲಿ ಅಪಾರ ಹಾನಿ ಸಂಭವಿಸಿದೆ. ತಾಲೂಕಿನ ರಟ್ಟಾಡಿ, ಅಮಾವಾಸ್ಯೆಬೈಲು ಹೆಂಗವಳ್ಳಿ, ಬೀಜಾಡಿ, ಹೊಸಂಗಡಿ, ವಂಡ್ಸೆ, ಕಸಬಾ ಗ್ರಾಮ, ಬ್ರಹ್ಮಾವರ ತಾಲೂಕಿನ ಹೊಸೂರು ಗ್ರಾಮ, ಉಡುಪಿ ತಾಲೂಕಿನ ಆತ್ರಾಡಿ, ಬೊಮ್ಮರಬೆಟ್ಟು, ಶಿವಳ್ಳಿ ಪುತ್ತೂರು ಗ್ರಾಮ, ಕಾರ್ಕಳ ತಾಲೂಕಿನ ಹಿರ್ಗಾನ, ಕಣಜಾರು, ರಂಜಾಳ ಗ್ರಾಮ, ಹೆಬ್ರಿ ತಾಲೂಕಿನ ಕಬ್ಬಿನಾಲೆ, ಅಲ್ಬಾಡಿ ಗ್ರಾಮ ಹಾಗೂ ಬೈಂದೂರು ತಾಲೂಕಿನ ಶಿರೂರು ಗ್ರಾಮಗಳ ಒಟ್ಟು 53 ಮನೆಗಳು ಭಾಗಶಃ ಹಾನಿಯಾಗಿವೆ.

ಅಡಿಕೆ ತೋಟ ನಾಶ

ಕುಂದಾಪುರ ತಾಲೂಕಿನ ರಟ್ಟಾಡಿ, ಅಮಾವಾಸ್ಯೆಬೈಲು, ಹರ್ಕೂರು, ಹೆಂಗವಳ್ಳಿ ಗ್ರಾಮ, ಹೆಬ್ರಿ ತಾಲೂಕಿನ ಕಬ್ಬಿನಾಲೆ, ಬ್ರಹ್ಮಾವರ ತಾಲೂಕಿನ ಹೊಸೂರು ಗ್ರಾಮದ 20 ಕುಟುಂಬಗಳ ಅಡಿಕೆ ತೋಟ ಹಾಗೂ 8 ಕುಟುಂಬಗಳ ಜಾನುವಾರುಗಳಿದ್ದ ಕೊಟ್ಟಿಗೆ ಭಾಗಶಃ ಹಾನಿಯಾಗಿದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.

UDP-4-5A-Rain
ಅಮಾವಾಸ್ಯೆಬೈಲು ಗ್ರಾಮದಲ್ಲಿ ಹಾನಿಗೊಂಡ ಅಪಾರ ಪ್ರಮಾಣದ ಅಡಿಕೆ ತೋಟವನ್ನು ಡ್ರೋನ್​ ಕ್ಯಾಮರಾ ಮೂಲಕ ಸರ್ವೇ ಮಾಡಿದ ಸ್ಥಳೀಯ ಗ್ರಾಪಂ ಆಡಳಿತ.

130 ವಿದ್ಯುತ್​ ಕಂಬಕ್ಕೆ ಹಾನಿ

ಭೀಕರ ಗಾಳಿಯಿಂದಾಗಿ ಒಟ್ಟು 130 ವಿದ್ಯುತ್​ ಕಂಬಗಳು ಉರುಳಿದ್ದು, 2.08 ಕಿ.ಮೀ., ವಿದ್ಯುತ್​ ತಂತಿ ಹಾನಿಯಾಗಿದೆ. ಅಲ್ಲದೆ, 10 ಟ್ರಾನ್ಸ್ ಫಾರ್ಮರ್ ಸುಟ್ಟು ಹೋಗಿರುವುದಾಗಿ ಉಡುಪಿ ಜಿಲಾ ಮೆಸ್ಕಾಂನ ಅಧೀಕ್ಷಕ ಇಂಜಿನಿಯರ್​ ದಿನೇಶ್​ ಉಪಾಧ್ಯ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.

UDP-4-5B-Rain
ಕಡೇಕಾರ್​ ಜಂಕ್ಷನ್​ ಸಮೀಪ ಎಚ್​ಟಿ/ಎಲ್​ಟಿ ವಿದ್ಯುತ್​ ತಂತಿ ಮೇಲೆ ಮರ ಬಿದ್ದು ಕಂಬ ವಾಲಿರುವುದು.

ಮಳೆ ಪ್ರಮಾಣ

ಕಾರ್ಕಳ- 111.04 ಮಿ.ಮೀ., ಕುಂದಾಪುರ- 191.00, ಉಡುಪಿ- 82.07, ಬೈಂದೂರು- 135.01, ಬ್ರಹ್ಮಾವರ- 113.09, ಕಾಪು- 38.05 ಹಾಗೂ ಹೆಬ್ರಿ ತಾಲೂಕಿನಲ್ಲಿ 140.03 ಮಿ.ಮೀ.5 ಮಳೆಯಾಗಿದೆ. ಜಿಲ್ಲೆಯ ತಾಲೂಕುಗಳ ಮಳೆಯ ಸರಾಸರಿ 132.05 ಮಿ.ಮೀ. ಇತ್ತು.

UDP-4-5C-Rain
ಇತ್ತೀಚೆಗಷ್ಟೇ ದುರಸ್ತಿ ಮಾಡಿದ್ದ ರಟ್ಟಾಡಿ-ಅವರ್ಸೆ ಫೀಡರ್​ನ ಟ್ರಂಕ್​ ಲೈನ್​ ಮೇಲೆ ಮತ್ತೆ ಮರ ಬಿದ್ದಿರುವುದು.

ಪರಿಹಾರ ಕ್ರಮಕ್ಕೆ ಸಚಿವೆ ಹೆಬ್ಬಾಳ್ಕರ್​ ಸೂಚನೆ

ಉಡುಪಿ ಜಿಲ್ಲೆಯ ಕೆಲವೆಡೆ ಭಾರಿ ಗಾಳಿ ಮತ್ತು ಮಳೆಯಿಂದ ಹಾನಿಯಾಗಿರುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಅಧಿಕಾರಿಗಳಿಂದ ಗುರುವಾರ ಮಾಹಿತಿ ಪಡೆದಿದ್ದು, ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ. ಬೆಂಗಳೂರಿನಲ್ಲಿರುವ ಅವರು, ಸಚಿವ ಸಂಪುಟ ಸಭೆಗೆ ಹೊರಡುವ ಮೊದಲು ಜಿಲ್ಲೆಯ ಸದ್ಯದ ಪರಿಸ್ಥಿತಿಯ ಕುರಿತು ಅಧಿಕಾರಿಗಳೊಂದಿಗೆ ಮೊಬೈಲ್​ ಮೂಲಕವೇ ಚರ್ಚಿಸಿದರು. ಕುಂದಾಪುರ ತಾಲೂಕಿನ ಅಮಾವಾಸ್ಯೆಬೈಲು, ರಟ್ಟಾಡಿ ಸೇರಿದಂತೆ ಕೆಲವೆಡೆ ಮಳೆ, ಬಿರುಗಾಳಿಯಿಂದ ಉಂಟಾಗಿರುವ ಹಾನಿಯ ಮಾಹಿತಿ ಪಡೆದರು. ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದರು. ತ್ವರಿತವಾಗಿ ಪರಿಹಾರ ಕ್ರಮ ಕೈಗೊಳ್ಳುವಂತೆ ತಿಳಿಸಿದ ಅವರು, ಜನರಿಗೆ ಎಚ್ಚರಿಕೆಯ ಕ್ರಮಗಳ ಕುರಿತೂ ತಿಳಿಸಬೇಕೆಂದು ಅಧಿಕಅರಿಗಳಿಗೆ ಸೂಚಿಸಿದರು.

ಮನೆಯ ಮೇಲೆ ಮಣ್ಣು ಕುಸಿದು ಮಹಿಳೆ ಸಾವು

ಉಡುಪಿ: ಭಾರಿ ಮಳೆಯಿಂದಾಗಿ ಮನೆಯ ಮೇಲೆ ಮಣ್ಣಿನ ರಾಶಿ ಕುಸಿದುಬಿದ್ದ ಪರಿಣಾಮ ಕೂಲಿ ಕೆಲಸಕ್ಕೆ ಬಂದಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಕೊಲ್ಲೂರು ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಸಂಭವಿಸಿದೆ. ಕೊಲ್ಲೂರು ಸಮೀಪದ ದಳಿ ಎಂಬಲ್ಲಿ ನಿರಂತರ ಮಳೆಯಿಂದಾಗಿ ಗುಡ್ಡ ಪ್ರದೇಶ ಸಡಿಲಗೊಂಡಿದ್ದು, ಸಮೀಪದ ಸೊಸೈಟಿಗುಡ್ಡೆ ಎಂಬಲ್ಲಿ ಇದ್ದ ಮನೆಯೊಂದರ ಮೇಲೆ ಮಣ್ಣಿನ ರಾಶಿ ಕುಸಿದುಬಿದ್ದು, ಕಲ್ಲಿನ ಗೋಡೆ ನೆಲ್ಲಕುರುಳಿದೆ. ಈ ಸಂದರ್ಭದಲ್ಲಿ ಕೂಲಿ ಕೆಲಸಕ್ಕೆ ಆ ಮನೆಗೆ ಬಂದಿದ್ದಳು ಎನ್ನಲಾಗುತ್ತಿರುವ ಹಳ್ಳಿಬೇರು ನಿವಾಸಿ ಅಂಬಾ (55) ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಮಣ್ಣಿನ ರಾಶಿಯಲ್ಲಿ ಸಿಲುಕಿದ್ದ ಅವರ ಮೃತ ಶರೀರವನ್ನು ಕುಂದಾಪುರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

Share This Article

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಇಂದು ಬಹುತೇಕರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ. ಆದರೆ, ಮೊದ ಮೊದಲು ಹೆಚ್ಚಿನ…

ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್​ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್​!

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…

ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಈ 5 ಜನರ ಬಳಿ ನೀವು ಎಂದಿಗೂ ಹೋಗಬೇಡಿ

ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು…