ಚಡಚಣ: ಸಮೀಪದ ಹಾವಿನಾಳ ಗ್ರಾಮದ ಶ್ರೀ ದತ್ ಸಕ್ಕರೆ ಕಾರ್ಖಾನೆಯ ಆಡಳಿತದಲ್ಲಿ ಮರಾಠಿ ಭಾಷೆ ಬಳಸಲಾಗುತ್ತಿದೆ. ಕೂಡಲೇ ಆ ಪದ್ಧತಿ ನಿಲ್ಲಿಸಿ, ಕನ್ನಡವನ್ನು ಆಡಳಿತ ಭಾಷೆಯಾಗಿ ಬಳಸುವಂತೆ ಕ್ರಮ ಕೈಗೊಳ್ಳಲು ಆಗ್ರಹಿಸಿ ಜಯ ಕರ್ನಾಟಕ, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಗುರುವಾರ ತಹಸೀಲ್ದಾರ್ ಸಂಜಯ ಇಂಗಳೆ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಜಯ ಕರ್ನಾಟಕ ಸಂಘಟನೆ ಜಿಲ್ಲಾ ಅಧ್ಯಕ್ಷ ಸಂಗಮೇಶ ದಾಶ್ಯಾಳ ಮಾತನಾಡಿ, ಕನ್ನಡ ನೆಲ, ಜಲ, ವಿದ್ಯುತ್, ಕಬ್ಬು ಪಡೆದು ಕಾರ್ಖಾನೆ ನಡೆಸುತ್ತಿರುವ ಶ್ರೀ ದತ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸಂಪೂರ್ಣವಾಗಿ ಮರಾಠಿ ಭಾಷೆಯಲ್ಲಿ ಆಡಳಿತ ನಡೆಸುವದರೊಂದಿಗೆ ಶೇ.99 ರಷ್ಟು ಕಾರ್ಮಿಕರನ್ನು ಮರಾಠಿಗರನ್ನೇ ನೇಮಿಸಿಕೊಂಡಿದೆ ಎಂದು ಆರೋಪಿಸಿದರು.
ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ರವಿ ಶಿಂಧೆ ಮಾತನಾಡಿ, ಶ್ರೀ ದತ್ ಸಕ್ಕರೆ ಕಾರ್ಖಾನೆಯ ಸಮಗ್ರ ವಹಿವಾಟು, ಪತ್ರ ವ್ಯವಹಾರ, ರೈತರೊಂದಿಗೆ ಸಭೆಯನ್ನು ಕನ್ನಡ ಭಾಷೆಯಲ್ಲಿ ನಡೆಸಬೇಕು. ಒಂದು ತಿಂಗಳಿನಲ್ಲಿ ಕಾರ್ಖಾನೆಯ ವ್ಯವಹಾರ ಹಾಗೂ ನಾಮ ಫಲಕಗಳು ಕನ್ನಡಮಯವಾಗಿ ಪರಿವರ್ತನೆಯಾಗದಿದ್ದರೆ ಕಾರ್ಖಾನೆಯ ಎದುರು ಧರಣಿ ಸತ್ಯಾಗ್ರಹ ಮಾಡುವುದು ಅನಿವಾರ್ಯವಾಗುತ್ತದೆ ಎಂದರು.
ನಂತರ ಕಾರ್ಖಾನೆಗೆ ತೆರಳಿದ ಕಾರ್ಯಕರ್ತರು ಕಾರ್ಖಾನೆಯ ಆಡಳಿತ ವ್ಯವಸ್ಥಾಪಕರಿಗೆ ಮನವಿ ನೀಡಿ, 15 ದಿನದೊಳಗೆ ಕ್ರಮ ಕೈಗೊಳ್ಳಲು ಎಚ್ಚರಿಕೆ ನೀಡಿದರು.
ಚೇತನ ಮಠ, ಚಿದಾನಂದ ಶಿಂಧೆ, ಓಂಕಾರ ಮಠ, ದತ್ತು ಶಿಂಧೆ, ವಿಕಾಸ ಮಲ್ಲಾಡಿ, ದಯಾನಂದ ಶಿಂಧೆ, ಅರ್ಜುನ ಕ್ಷತ್ರಿ, ಸುನೀಲ ಕ್ಷತ್ರಿ, ಸುನೀಲ ಧೋತ್ರೆ, ಸಚಿನ ಕಟ್ಟಿಮನಿ, ಪ್ರದೀಪ ನಾವಿ, ರಘುವೀರ ಮೋರೆ ಇತರರಿದ್ದರು.