More

    ಬಸ್ ನಿಲ್ದಾಣ ಬಂದ್ ಮಾಡಿ ಆಕ್ರೋಶ; ಹಳ್ಳಿಗಳಿಗೆ ಸಮರ್ಪಕ ಬಸ್ ಬಿಡಲು ಆಗ್ರಹ; ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ

    ಹಾವೇರಿ: ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕವಾಗಿ ಬಸ್ ಬಿಡುವಂತೆ ಹಾಗೂ ಹಾವೇರಿಯಲ್ಲಿ ನಗರ ಸಾರಿಗೆ ಆರಂಭಿಸುವಂತೆ ಆಗ್ರಹಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳು ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು. ಕೆಲಕಾಲ ಕೇಂದ್ರ ಬಸ್ ನಿಲ್ದಾಣ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
    ನಗರದ ಲಕಮಾಪುರದಿಂದ ಪಿಬಿ ರಸ್ತೆ ಮಾರ್ಗವಾಗಿ ಪ್ರತಿಭಟನಾ ರ‌್ಯಾಲಿ ಆರಂಭಿಸಿದ ವಿದ್ಯಾರ್ಥಿಗಳು ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಜಮಾಯಿಸಿದರು. ಬಳಿಕ ಕೇಂದ್ರ ಬಸ್ ನಿಲ್ದಾಣದ ಎದುರು ರಸ್ತೆ ಮೇಲೆ ಕುಳಿತು ಸುಮಾರು ಎರಡು ತಾಸು ಬಸ್ ಸಂಚಾರ ಬಂದ್ ಮಾಡಿ ಪ್ರತಿಭಟಿಸಿದರು. ಸಾರಿಗೆ ಇಲಾಖೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
    ಗ್ರಾಮೀಣ ಭಾಗದಿಂದ ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕರು, ಸರ್ಕಾರಿ ನೌಕರರು, ಸಾರ್ವಜನಿಕರು ಜಿಲ್ಲಾ ಕೇಂದ್ರಕ್ಕೆ ವಿದ್ಯಾಭ್ಯಾಸಕ್ಕಾಗಿ ಹಾಗೂ ವ್ಯಾಪಾರಕ್ಕಾಗಿ ಬರುತ್ತಾರೆ. ಆದರೆ, ಸೂಕ್ತ ಬಸ್ ಸೌಕರ್ಯವಿಲ್ಲದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಜಿಲ್ಲಾ ಕೇಂದ್ರವಾಗಿ 25 ವರ್ಷ ಕಳೆದರೂ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ.
    ಹಾವೇರಿಯಲ್ಲಿ ನಗರ ಸಾರಿಗೆ ಸೌಕರ್ಯ ಇಲ್ಲದ ಕಾರಣ ಬಸ್ ನಿಲ್ದಾಣದಿಂದ ಏಳೆಂಟು ಕಿ.ಮೀ.ವರೆಗೆ ವಿದ್ಯಾರ್ಥಿಗಳು ನಡೆದುಕೊಂಡೇ ಓಡಾಡಬೇಕಾಗಿದೆ. ಇದರಿಂದ ವಿದ್ಯಾಭ್ಯಾಸಕ್ಕೂ ಅಡ್ಡಿ ಉಂಟಾಗಿದೆ. ಈ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
    ಎಸ್‌ಎಫ್ ಐ ಮುಖಂಡರಾದ ವಿವೇಕ ಫನಸೆ, ಅಭಿಷೇಕ ಗುದಗಿ, ಮಾಲತೇಶ ಕಂಬಳಿ, ಭರತ ಮೂಲಿಮನಿ, ಪ್ರದೀಪ ಸಾದರ, ಶಿವು ಪಾಟೀಲ, ಪೃಥ್ವಿರಾಜ ಬೆಟಗೇರಿ, ಚೇತನ ಲಮಾಣಿ, ಆಕಾಶ ಕರಿಯಪ್ಪನವರ, ಸುಶ್ಮೀತಾ ಎಚ್., ಸಂಗೀತಾ ಆರ್., ಭೂಮಿಕಾ ಆರ್., ಪವಿತ್ರಾ ಕೆ., ಇತರರು ಪಾಲ್ಗೊಂಡಿದ್ದರು.
    9ರಂದು ಸಭೆ ನಿಗದಿ
    ಸ್ಥಳಕ್ಕೆ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬರುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದರು. ಡಿವೈಎಸ್‌ಪಿ ಎಂ.ಎಸ್.ಪಾಟೀಲ ಮಧ್ಯಪ್ರವೇಶಿಸಿ ಡಿಟಿಒ ಅಶೋಕ ಅವರನ್ನು ಸ್ಥಳಕ್ಕೆ ಕರೆಸಿದರು. ಬಸ್ ಸಮಸ್ಯೆಗಳ ಕುರಿತು ವಿದ್ಯಾರ್ಥಿ ಮುಖಂಡರೊಂದಿಗೆ ಚರ್ಚಿಸಲು ಆ.9ರಂದು ಸಭೆ ಕರೆಯಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.
    ಕೋಟ್:
    ಶಕ್ತಿ ಯೋಜನೆ ಜಾರಿಯಾದ ಬಳಿಕ ಸ್ಥಳೀಯ ಬಸ್‌ಗಳನ್ನು ನಾನ್ ಸ್ಟಾಪ್ ಸಂಚರಿಸಲು ಬಿಡುವ ಮೂಲಕ ಸಾರಿಗೆ ಇಲಾಖೆ ಅಧಿಕಾರಿಗಳು ಸೂಕ್ತ ಬಸ್ ಸೌಕರ್ಯ ಒದಗಿಸುವಲ್ಲಿ ವಿಫಲರಾಗಿದ್ದು, ಅವರನ್ನು ಸರ್ಕಾರ ವರ್ಗಾವಣೆ ಮಾಡಬೇಕು. ಕೂಡಲೇ ಗ್ರಾಮೀಣ ಭಾಗಕ್ಕೆ ಸಮರ್ಪಕ ಬಸ್ ಸೌಲಭ್ಯ ಒದಗಿಸಬೇಕು.
    ಬಸವರಾಜ ಭೋವಿ, ಜಿಲ್ಲಾ ಸಹ ಕಾರ್ಯದರ್ಶಿ, ಎಸ್‌ಎಫ್‌ಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts