ಸಿನಿಮಾ

ಮನೋರೋಗಿಗಳಿಗೆ ಪ್ರೀತಿಯ ಚಿಕಿತ್ಸೆ ಅಗತ್ಯ; ವಿಶ್ವ ಸ್ಕಿಜೋಫ್ರೀನಿಯಾ ದಿನಾಚರಣೆಯಲ್ಲಿ ನ್ಯಾ.ಪುಟ್ಟರಾಜು ಹೇಳಿಕೆ

ಹಾವೇರಿ: ಮನೋರೋಗದಿಂದ ಬಳಲುವವರಿಗೆ ಮುಖ್ಯವಾಗಿ ಪ್ರೀತಿಯ ಚಿಕಿತ್ಸೆ ಅಗತ್ಯವಾಗಿದ್ದು, ಅಂಥವರನ್ನು ಪ್ರೀತಿ- ವಿಶ್ವಾಸದಿಂದ ಕಾಣಬೇಕು. ಸೂಕ್ತ ಚಿಕಿತ್ಸೆ ನೀಡುವ ಮೂಲಕ ಆರೋಗ್ಯವಂತರನ್ನಾಗಿ ಮಾಡಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಪುಟ್ಟರಾಜು ಹೇಳಿದರು.
ನಗರದ ಎಸ್.ಜಿ.ಎಸ್.ಎಲ್.ಪಿ. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ‘ವಿಶ್ವ ಸ್ಕಿಜೋಫ್ರೀನಿಯಾ‘ (ಮನೋರೋಗ) ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವ್ಯಕ್ತಿಯ ಮನಸ್ಸು ಕ್ಷಣಕ್ಷಣಕ್ಕೂ ಬದಲಾಗುತ್ತದೆ. ಅಂಥವರು ಏಕಾಗ್ರತೆ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಇಲ್ಲಿ ತಿಳಿಸಿದ ಮಾನಸಿಕ ಕಾಯಿಲೆ ಚಿಕಿತ್ಸೆ ಬಗ್ಗೆ ನಿಮ್ಮ ನೆರೆ-ಹೊರೆಯವರಿಗೆ, ಸಂಬಂಧಿಕರಿಗೆ ತಿಳಿವಳಿಕೆ ನೀಡಬೇಕು ಎಂದು ಸಲಹೆ ನೀಡಿದರು.
ಸಮಾರಂಭದಲ್ಲಿ ಪ್ರಶಸ್ತಿ ಪತ್ರ ವಿತರಣೆ: ಸ್ಕಿಜೋಫ್ರೀನಿಯಾ ಕುರಿತು ಆಯೋಜಿಸಿದ್ದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಾದ ಮಾಲತಿ ಹೂಲಿಕಟ್ಟಿ, ಶ್ವೇತಾ ಕ್ಯಾಲಕೊಂಡ ಹಾಗೂ ಅಕ್ಷತಾ ಮಾಳಮ್ಮನವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಎಸ್.ಜಿ.ಎಸ್.ಎಲ್.ಪಿ.ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಡಾ.ಶಿವಾನಂದ ಎಸ್.ಕೆ. ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪಿ.ಸಿ.ಬಣಕಾರ, ಕಾರ್ಯದರ್ಶಿ ಈಶ್ವರ ನಂದಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್.ಹಾವನೂರ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಸರಿತಾ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ನೀಲೇಶ ಎಂ.ಎನ್., ಡಾ.ಪ್ರಭಾಕರ ಕುಂದೂರು, ಆರೋಗ್ಯ ಶಿಕ್ಷಣಾಧಿಕಾರಿಗಳಾದ ಚನ್ನಪ್ಪ ಲಮಾಣಿ, ಮಾಲಿನಿ ಮರಾಠಾ, ಇತರರು ಉಪಸ್ಥಿತರಿದ್ದರು.
ಜಿಲ್ಲಾಸ್ಪತ್ರೆಯಲ್ಲೇ ಚಿಕಿತ್ಸೆ
ಈ ಮೊದಲು ಮನೋರೋಗಿಗಳಿಗೆ ಚಿಕಿತ್ಸೆಗಾಗಿ ಧಾರವಾಡ ಹಾಗೂ ಬೆಂಗಳೂರಿಗೆ ಹೋಗಬೇಕಾಗಿತ್ತು. ಈಗ ಜಿಲ್ಲಾಸ್ಪತ್ರೆಯಲ್ಲಿ ಮಾನಸಿಕ ಕಾಯಿಲೆಗೆ ಚಿಕಿತ್ಸೆ ಆರಂಭಿಸಲಾಗಿದೆ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಚನ್ನಬಸಯ್ಯ ವಿರಕ್ತಮಠ ಹೇಳಿದರು.
ಸಹಾಯವಾಣಿ ಸಂಪರ್ಕಿಸಿ
ಮಾನಸಿಕ ಕಾಯಿಲೆ ಚಿಕಿತ್ಸೆಗೆ ಆಸ್ಪತ್ರೆಗೆ ಹೋಗಲು ಕೆಲವರಿಗೆ ಮುಜಗರ ಉಂಟಾದಲ್ಲಿ ‘ಟೆಲಿ ಮಾನಸ ಸಹಾಯವಾಣಿ 14416’ ಸಂಪರ್ಕಿಸಿ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಬಹುದು. ಇತರೆ ಸಾಮಾನ್ಯ ಆರೋಗ್ಯ ಸಮಸ್ಯೆಗಳ ಪರಿಹಾರಕ್ಕೆ ಆನ್‌ಲೈನ್‌ನಲ್ಲಿ ಇ-ಸಂಜೀವಿನಿ ಒಪಿಡಿಗೆ ಲಾಗಿನ್ ಆಗಿ ಆರೋಗ್ಯ ಸೇವೆ ಪಡೆಯಬಹುದು.

Latest Posts

ಲೈಫ್‌ಸ್ಟೈಲ್