More

    ಪಠ್ಯದಲ್ಲಿ ಸಂಗೂರ ಕರಿಯಪ್ಪ ಚರಿತ್ರೆ ಸೇರಿಸಿ; ಸರ್ಕಾರಕ್ಕೆ ಚಿಕ್ಕಮ್ಮ ಆಡೂರು ಮನವಿ

    ಹಾವೇರಿ: ಗಾಂಧೀಜಿ ಅನುಯಾಯಿಯಾಗಿದ್ದ ಸಂಗೂರು ಕರಿಯಪ್ಪ, ವೀರಮ್ಮ ದಂಪತಿಗಳು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ಸವೆಸಿದ್ದಾರೆ. ಇಂತಹ ಮಹಾನ್ ಹೋರಾಟಗಾರರ ಜೀವನ ಚರಿತ್ರೆಯನ್ನು ಪಠ್ಯಪುಸ್ತಕದಲ್ಲಿ ಅಳವಡಿಸಬೇಕು ಎಂದು ಸಂಗೂರು ಕರಿಯಪ್ಪ ಪುತ್ರಿ ಚಿಕ್ಕಮ್ಮ ಆಡೂರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
    ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್, ಭಾರತ ವಿದ್ಯಾರ್ಥಿ ಫೆಡರೇಷನ್ ಹಾಗೂ ಕರಿಯಪ್ಪ ಅವರ ಕುಟುಂಬಸ್ಥರ ವತಿಯಿಂದ ಮಂಗಳವಾರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ರಘುನಂದನಮೂರ್ತಿ ಅವರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
    ಈ ವೇಳೆ ಮಾತನಾಡಿದ ಚಿಕ್ಕಮ್ಮ ಆಡೂರು, ಸ್ವಾತಂತ್ರ್ಯ ಹೋರಾಟಗಾರ ಸಂಗೂರು ಕರಿಯಪ್ಪನವರ ಜೀವನ ಗಾಥೆಯನ್ನು ಜನಮಾನಸದಲ್ಲಿ ಚಿರಸ್ಥಾಯಿಗೊಳಿಸಲು ರಾಜ್ಯ ಸರ್ಕಾರ ಹಾಗೂ ಹಾವೇರಿ ಜಿಲ್ಲಾಡಳಿತ ಕಾರ್ಯಪ್ರವೃತ್ತರಾಗಬೇಕು. ಜಿಲ್ಲಾ ಕೇಂದ್ರದ ಬಸ್ ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟಗಾರ ಸಂಗೂರು ಕರಿಯಪ್ಪನವರ ಹೆಸರನ್ನು ಇಡಬೇಕು ಎಂದರು.
    ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ವಿದುರಾಶ್ವತ ಮಾದರಿಯಲ್ಲಿ ಸಂಗೂರಿನಲ್ಲಿ ಕರಿಯಪ್ಪ ಮತ್ತು ವೀರಮ್ಮ ಅವರ ಸ್ಮಾರಕ ಮೂರ್ತಿ ಹಾಗೂ ಮ್ಯೂಸಿಯಂ ನಿರ್ಮಿಸಬೇಕು. ಗಾಂಧೀಜಿ ಚಿತಾಭಸ್ಮವಿರುವ ಸ್ಥಳವನ್ನು ಅಭಿವೃದ್ಧಿ ಪಡಿಸಿ ಅಲ್ಲಿ ನಿರಂತರ ಚಟುವಟಿಕೆಗಳು ನಡೆಯುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
    ಜಿಲ್ಲೆಯ ವಿದ್ಯಾರ್ಥಿ-ಯುವಜನರಿಗೆ ಸಂಗೂರು ಕರಿಯಪ್ಪ ಸೇರಿದಂತೆ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳ ಜೀವನಗಾಥೆಯ ಕುರಿತು ಜಾಗೃತಿ ಮೂಡಿಸುವ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲು ಕಾರ್ಯಯೋಜನೆಯನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ರೂಪಿಸಬೇಕು ಎಂದರು.
    ಈ ಸಂದರ್ಭದಲ್ಲಿ ರಾಜು ಮಲ್ಲೂರು, ಖಲಂದರ್ ಅಲ್ಲಿಗೌಡ್ರ, ಸಂತೋಷ ಕೂರಗುಂದ, ಸಂಗೂರು ಕರಿಯಪ್ಪನವರ ಬಂಧುಗಳಾದ ಜಯಶ್ರೀ ಕಾವಲಕೊಪ್ಪ, ವಿನೋದಾ ಎರೆಸೀಮಿ, ರಾಜೇಶ್ವರಿ ಎರೆಸೀಮಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts