ಹಾವೇರಿ: ಕಬ್ಬಿನ ಬಾಕಿ ಅಂದಾಜು ಹಣ 38 ಕೋಟಿ ರೂ. ಬಿಡುಗಡೆಗೆ ಆಗ್ರಹಿಸಿ ರೈತರು ಬುಧವಾರ ತಾಲೂಕಿನ ಸಂಗೂರ ಗ್ರಾಮದ ಜಿಎಂ ಸಕ್ಕರೆ ಕಾರ್ಖಾನೆಯ ಗೇಟ್‌ಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಕಳುಹಿಸಿ ಎರಡು ತಿಂಗಳು ಕಳೆದರೂ ಕಬ್ಬು ಸಾಗಾಣಿಕೆ ಮಾಡಿದ ರೈತರಿಗೆ ಹಣ ಕೊಟ್ಟಿಲ್ಲ. ಕಬ್ಬು ಪೂರೈಕೆ ಮಾಡಿದ 14 ದಿನಗಳ ಒಳಗಾಗಿ ರೈತರಿಗೆ ಹಣ ಕೊಡಬೇಕು ಎಂದು ಸರ್ಕಾರದ ಆದೇಶ ಇದೆ. ಈ ಆದೇಶವನ್ನು ಕಾರ್ಖಾನೆಯವರು ಉಲ್ಲಂಘಿಸಿದ್ದಾರೆ. ಸುಮಾರು 2 ಸಾವಿರ ರೈತರಿಗೆ 1,20,000 ಟನ್ ಕಬ್ಬಿನ ಅಂದಾಜು 38 ಕೋಟಿ ರೂ. ಪಾವತಿಸಬೇಕಿದೆ. ಈ ಹಣಕ್ಕೆ ಶೇ.16ರಷ್ಟು ಬಡ್ಡಿ ಸೆರಿಸಿದರೆ ಒಂದು ತಿಂಗಳಿಗೆ ಆರು ಕೊಟಿ ರೂ. ಆಗುತ್ತದೆ.
ಈ ಕುರಿತು ಜಿಲ್ಲಾಧಿಕಾರಿಯವರಿಗೆ ಅನೇಕ ಬಾರಿ ಮನವಿ ಮಾಡಿದ್ದೇವೆ. ಅವರು ಬಿಲ್ ಪಾವತಿಸಲು ಸೂಚಿಸಿದ್ದರೂ ಕಾರ್ಖಾನೆಯವರು ಅವರ ಮಾತನ್ನೂ ಕೇಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಖಾನೆಯ ಮುಖ್ಯ ಗೇಟ್, ವೇಬ್ರಿಜ್ ಗೇಟ್, ಜಿಎಂ ಬ್ಯಾಂಕ್, ಅಡ್ಮಿನ್ ಆಫೀಸ್‌ಗಳಿಗೆ ರೈತರು ಬೀಗ ಹಾಕಿ ಪ್ರತಿಭಟನೆ ಮಾಡಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ, ನಿಂಗಪ್ಪ ನರೇಗಲ್, ಶಿವಯೋಗಿ ಹೂಗಾರ, ಶಿವಲಿಂಗಪ್ಪ ಕಾಳಂಗಿ, ಗುರಪ್ಪ ಕರೆಗೊಂಡರ, ಬಸವರಾಜ ಮುಂದಿನಮನಿ, ಗುರನಂಜಪ್ಪ ವರ್ದಿ, ಮಲ್ಲೇಶಪ್ಪ ಭೀಮನಾಯಕರ, ಗುಡ್ಡನಗೌಡ ಮಲಾಗೌಡ್ರ, ಸುರೇಶ ಹೊಸಕೇರಿ, ಬಸಪ್ಪ ಕಳಸದ, ಹನುಮಂತ ಪಾಟೊಳಿ, ಇತರರಿದ್ದರು.
ಕೋಟ್
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಯವರು ಮಧ್ಯ ಪ್ರವೇಶಿಸಿ, ಫೆ.17ರ ಒಳಗಾಗಿ ಕಬ್ಬಿನ ಬಾಕಿ ಬಿಲ್ ಪಾವತಿಸಬೇಕು. ಇಲ್ಲದಿದ್ದರೆ ಸೋಮವಾರ ಹಾನಗಲ್ಲ- ಹಾವೇರಿಯ ಮುಖ್ಯರಸ್ತೆಯಲ್ಲಿ ಸಂಚಾರ ತಡೆದು ಪ್ರತಿಭಟನೆ ಮಾಡಲಾಗುವುದು.
– ಭುವನೇಶ್ವರ ಶಿಡ್ಲಾಪುರ, ಜಿಲ್ಲಾಧ್ಯಕ್ಷ, ರಾಜ್ಯ ಕಬ್ಬು ಬೆಳೆಗಾರರ ಸಂಘ