ಹಾವೇರಿ: ಜಿಲ್ಲೆಯ ಜೀವನಾಡಿಗಳಾದ ತುಂಗಭದ್ರಾ, ವರದಾ, ಧರ್ಮಾ ಹಾಗೂ ಕುಮದ್ವತಿ ನದಿಗಳು ಉಕ್ಕಿ ಹರಿಯುತ್ತಿದ್ದು, ಮಳೆ ಹೀಗೆ ಮುಂದುವರಿದರೆ ಅಪಾಯ ಮಟ್ಟ ಮೀರುವ ಆತಂಕ ಎದುರಾಗಿದೆ. ನದಿಯಂಚಿನ ಕೆಲ ಗ್ರಾಮಗಳಿಗೆ ಪ್ರವಾಹ ಭೀತಿ ಕಾಡುತ್ತಿದ್ದು, ಜನ ಆತಂಕಕ್ಕೀಡಾಗಿದ್ದಾರೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳಲ್ಲಿನ ಒಳ, ಹೊರ ಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹತ್ತಾರು ಸೇತುವೆಗಳು, ರಸ್ತೆ ಮಾರ್ಗಗಳು ಜಲಾವೃತವಾಗಿದ್ದು, ಸಂಚಾರ ಸ್ಥಗಿತಗೊಂಡಿದೆ. ನದಿ ಪಕ್ಕದ ಜಮೀನುಗಳಿಗೆ ಈಗಾಗಲೇ ಜಲದಿಗ್ಬಂದನವಾಗಿದ್ದು, ರೈತ ಬೆಳೆದ ಬೆಳೆ ನೀರುಪಾಲಾಗಿದೆ. ಅನ್ನದಾತ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾನೆ.
ಮಲೆನಾಡು, ಕರಾವಳಿಯಲ್ಲಿ ಹಾಗೂ ಜಿಲ್ಲೆಯಲ್ಲಿ ಮಳೆ ಮುಂದುವರಿದರೆ ನದಿಯಂಚಿನ ಗ್ರಾಮಗಳಾದ ಹಾವೇರಿ ತಾಲೂಕಿನ ವರದಹಳ್ಳಿ, ನಾಗನೂರ, ಕುಣಿಮೆಳ್ಳಿಹಳ್ಳಿ, ರಾಣೆಬೆನ್ನೂರ ತಾಲೂಕಿನ ಹಳೇ ಚಂದಾಪುರ, ಹರನಗಿರಿ, ಹಾನಗಲ್ಲ ತಾಲೂಕಿನ ಕೂಡಲ, ಹರನಗಿರಿ, ಅರೆಲಕ್ಮಾಪುರ, ಶೀಗಿಹಳ್ಳಿ- ಸಿಂಗಾಪುರ, ಮತ್ತಿತರ ಗ್ರಾಮಗಳಿಗೆ ನೀರು ನುಗ್ಗುವ ಆತಂಕವಿದೆ. ಒಂದು ವೇಳೆ ಪ್ರವಾಹ ಎದುರಾದರೆ ಸಾವು, ನೋವು ಸಂಭವಿಸುವ ಭೀತಿಯೂ ಇದೆ.
ವರದಹಳ್ಳಿಯ ಶಿಬಾರಗಟ್ಟಿವರೆಗೂ ವರದಾ ನದಿ ನೀರು ಬಂದಿದ್ದು, ಮತ್ತಷ್ಟು ಮಳೆಯಾದರೆ ಒಂದೆರೆಡು ದಿನಗಳಲ್ಲಿ ಗ್ರಾಮಕ್ಕೆ ನೀರು ನುಗ್ಗುವ ಆತಂಕವಿದೆ. 2019ರಲ್ಲಿ ಪ್ರವಾಹದಿಂದ ಗ್ರಾಮ ತತ್ತರಿಸಿತ್ತು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಗ್ರಾಮಸ್ಥರು.
ವರದಾ ನದಿ ಹರಿವು ಹೆಚ್ಚಳ
ಜಿಲ್ಲೆಯಲ್ಲಿ ಹರಿದಿರುವ ವರದಾ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚುತ್ತಲೇ ಇದೆ. ಜಿಲ್ಲೆಯ ಗೊಂದಿ, ಸೋಮಾಪುರ, ಲಕಮಾಪುರ, ಬಿದರಗಡ್ಡಿ, ಶೀಂಗಾಪುರ, ಸಂಗೂರ, ವರ್ದಿ, ನಾಗನೂರ, ಕೂಡಲ, ವರದಾಹಳ್ಳಿ, ದೇವಗಿರಿ, ಕಳಸೂರ, ಹುರಳಿಕೊಪ್ಪ, ಮೆಳ್ಳಾಗಟ್ಟಿ, ಹಿರೇಮಗದೂರ, ಚಿಕ್ಕಮಗದೂರ, ಕರ್ಜಗಿ, ಕೋನನತಂಬಗಿ, ಡಂಬರಮತ್ತೂರ, ಮತ್ತಿತರ ಗ್ರಾಮಗಳ ಮೂಲಕ ವರದಾ ನದಿ ಹರಿದು ಹೋಗಿದೆ. ಬಹುತೇಕ ಗ್ರಾಮಗಳ ನದಿಪಾತ್ರದ ಜಮೀನುಗಳಿಗೆ ನೀರು ನುಗ್ಗಿ ಹತ್ತಿ, ಸೋಯಾ, ಅವರೆ, ಅಡಕೆ, ಬಾಳೆ, ಮೆಕ್ಕೆಜೋಳ, ಇನ್ನಿತರ ಬೆಳೆ ಹಾನಿಗೀಡಾಗಿದೆ.
ನಾಗನೂರ ಗ್ರಾಮಕ್ಕೆ ನೆರೆ ಹೊರೆ
ನಾಗನೂರ ಗ್ರಾಮದಿಂದ ಕೂಡಲ ಸಂಪರ್ಕಿಸುವ ವರದಾ ನದಿಯ ಬ್ಯಾರೇಜ್ ಕಂ ಬ್ರಿಡ್ಜ್ ಮುಳುಗಡೆಯಾಗಿದ್ದರಿಂದ ರಸ್ತೆ ಸಂಚಾರ ಬಂದ್ ಆಗಿದೆ. ಇಲ್ಲಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಅರ್ದಕ್ಕೆ ನಿಂತಿದ್ದು, ಕೂಡಲೇ ಕಾಮಗಾರಿ ಆರಂಭಿಸಲು ಕ್ರಮ ಜರುಗಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. 2019ರಲ್ಲಿ ಗ್ರಾಮದಲ್ಲಿ ಪ್ರವಾಹ ಉಂಟಾಗಿ ಹಲವು ಮನೆಗಳು ಮುಳುಗಿದ್ದವು. ಕೆಲ ನಿವಾಸಿಗಳಿಗೆ ಸರ್ಕಾರ ಬದಲಿ ನಿವೇಶನ ಕೊಟ್ಟು ಸ್ಥಳಾಂತರಿಸಲಾಗಿದ್ದು, ಇನ್ನೂ ಹಲವರು ನದಿ ಅಂಚಿನಲ್ಲೇ ವಾಸವಾಗಿದ್ದಾರೆ. ಕಳೆದ ವರ್ಷ ಗ್ರಾಮಸ್ಥರನ್ನು ಸ್ಥಳಾಂತರಿಸಲು ಸ್ಥಳೀಯ ಶಾಸಕ ಬಸವರಾಜ ಶಿವಣ್ಣನವರ ಯತ್ನಿಸಿದ್ದರಾದರೂ ಸಫಲವಾಗಿಲ್ಲ.
ಕಾಳಜಿ ಕೇಂದ್ರ ತೆರೆಯಿರಿ
ನದಿ ಪಾತ್ರದ ಗ್ರಾಮಗಳಲ್ಲಿ ಈ ಕೂಡಲೇ ಕಾಳಜಿ ಕೇಂದ್ರಗಳನ್ನು ತೆರೆಯಬೇಕು. ಹೆಸರಿಗೆ ಮಾತ್ರ ಕೇಂದ್ರ ತೆರೆಯದೇ ಅಲ್ಲಿ ಊಟ, ವಸತಿಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಜನರ ಆರೋಗ್ಯ ಕಾಳಜಿಗೆ ಬೇಕಾದ ಕ್ರಮಗಳನ್ನು ಒದಗಿಸಬೇಕಿದೆ.
ಕೋಟ್:
ನಿರಂತರ ಮಳೆಯಿಂದಾಗಿ ಪ್ರವಾಹಕ್ಕೆ ತುತ್ತಾಗಬಹುದಾದ ಗ್ರಾಮಗಳ ಪರಿಶೀಲನೆಗೆ ಹಾಗೂ ತಗ್ಗು ಪ್ರದೇಶಗಳಲ್ಲಿ ವಾಸವಾಗಿರುವ ಜನ ಹಾಗೂ ಜಾನುವಾರುಗಳನ್ನು ಸ್ಥಳಾಂತರಿಸುವ ಕಾರ್ಯದಲ್ಲಿ ತಹಸೀಲ್ದಾರ್ ಹಾಗೂ ಇತರ ಅಧಿಕಾರಿಗಳು ನಿರತರಾಗಿದ್ದಾರೆ. ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ಕೈಗೊಳ್ಳಲು ಸೂಚಿಸಲಾಗಿದೆ. ಶಿಥಿಲಾವಸ್ಥೆಯ ಮನೆಗಳನ್ನು ಸರ್ವೆ ಮಾಡಿ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ.
– ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾಧಿಕಾರಿ