ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ್ದ ಅಂಬರೀಷ್

ರಟ್ಟಿಹಳ್ಳಿ: 2011ರಲ್ಲಿ ರಟ್ಟಿಹಳ್ಳಿಯಲ್ಲಿ ಜರುಗಿದ ಹಿರೇಕೆರೂರು ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಖ್ಯ ಅತಿಥಿಯಾಗಿ ಡಾ. ಅಂಬರೀಷ್ ಪಟ್ಟಣಕ್ಕೆ ಆಗಮಿಸಿದ್ದರು ಎಂದು ಜಿಲ್ಲಾ ಕಸಾಪ ಮಾಜಿ ಉಪಾಧ್ಯಕ್ಷ ಎಂ.ಎಚ್. ಹರವಿಶೆಟ್ಟರ್ ಮತ್ತು ರಟ್ಟಿಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೋಮೇಶ್ವರ ಮೇಸ್ತಾ ಮೆಲುಕು ಹಾಕಿದ್ದಾರೆ.

ಸಿನಿಮಾರಂಗ ಮತ್ತು ರಾಜಕೀಯದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಡಾ. ಅಂಬರೀಷ್ ಅವರನ್ನು 2011ರಲ್ಲಿ ಹಿರೇಕೆರೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಟ್ಟಿಹಳ್ಳಿಗೆ ಮುಖ್ಯ ಅಥಿತಿಯಾಗಿ ಆಗಮಿಸಲು ಶಾಸಕ ಬಿ.ಸಿ. ಪಾಟೀಲ ಹಾಗೂ ಕನ್ನಡಾಭಿಮಾನಿಗಳ ನೇತೃತ್ವದಲ್ಲಿ ಅವರ ನಿವಾಸಕ್ಕೆ ಹೋಗಿದ್ದಾಗ ತುಂಬು ಹೃದಯದಿಂದ ಒಪ್ಪಿಕೊಂಡಿದ್ದರು. ಸಮ್ಮೇಳನಕ್ಕೆ ಚಿತ್ರನಟರಾದ ಮುಖ್ಯಮಂತ್ರಿಚಂದ್ರು ಮತ್ತು ರಟ್ಟಿಹಳ್ಳಿಯವರೇ ಆಗಿದ್ದ ಆರ್. ಸುದರ್ಶನ ಮತ್ತು ಶೈಲಶ್ರೀ ಅವರನ್ನು ಜತೆಯಲ್ಲಿ ಕರೆದುಕೊಂಡು ಬಂದಿದ್ದರು. ಸಮ್ಮೇಳನದಲ್ಲಿ ಅಂಬರೀಷ್ ಅವರು ರಟ್ಟಪಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ, ಕನ್ನಡ ನಾಡು ನುಡಿ, ಜಲ ಕುರಿತು ಮನಮುಟ್ಟುವಂತೆ ಮಾತನಾಡಿದ್ದರು. ಪರಿಷತ್ ವತಿಯಿಂದ ಅವರಿಗೆ ಬೆಳ್ಳಿ ಕಿರೀಟ ತೊಡಿಸಿ ಸನ್ಮಾನಿಸಲಾಗಿತ್ತು. ಅವರ ನಿಧನ ತುಂಬ ಬೇಸರ ತಂದಿದೆ ಎಂದು ಸಂತಾಪ ಸೂಚಿಸಿದ್ದಾರೆ.

ಗೋಕಾಕ್ ಚಳವಳಿ ಸಂದರ್ಭ: ರಾಜಕಾರಣಿಯಾಗಿ ಹಾವೇರಿ ಜಿಲ್ಲೆಗೆ ಭೇಟಿ ನೀಡದಿದ್ದರೂ, ಚಲನಚಿತ್ರ ನಟರಾಗಿ, ಗೋಕಾಕ್ ಚಳವಳಿಯನ್ನು ಬೆಂಬಲಿಸಿ ನಡೆದ ಹೋರಾಟದಲ್ಲಿ ಪಾಲ್ಗೊಂಡ ಡಾ. ಅಂಬರೀಷ್ ಅವರ ನೆನಪುಗಳು ಹಿರಿಯರ ಮನದಲ್ಲಿ ಅಚ್ಚಳಿಯದೇ ಉಳಿದಿವೆ.

1980ರ ದಶಕದಲ್ಲಿ ನಡೆದ ಗೋಕಾಕ್ ಚಳವಳಿ ಸಂದರ್ಭದಲ್ಲಿ ನಟಸಾರ್ವಭೌಮ ಡಾ. ರಾಜಕುಮಾರ ಅವರೊಂದಿಗೆ ನಗರದ ಮುನ್ಸಿಪಲ್ ಮೈದಾನದಲ್ಲಿ ಕನ್ನಡಪರ ಸಂಘಟನೆಗಳು ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಅಂಬರೀಷ್ ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ಹೋರಾಟಗಾರರಾಗಿ, ಚಲನಚಿತ್ರನಟರಾಗಿ ಜಿಲ್ಲೆಗೆ ಭೇಟಿ ನೀಡಿದ್ದರು. ಆದರೆ, ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ವೇಳೆ ಒಮ್ಮೆಯೂ ಭೇಟಿ ನೀಡಿಲ್ಲ. ಗೋಕಾಕ್ ಚಳವಳಿ ಬೆಂಬಲಿಸಿ ನಡೆಸಿದ ಹೋರಾಟದಲ್ಲಿ ಜಿಲ್ಲೆಯ ಎಂ.ಎಸ್. ಕೋರಿಶೆಟ್ಟರ್, ಎನ್.ಬಿ. ಹಿರೇಮಠ, ಪಂಚಾಕ್ಷರಿ ಒಳಸಂಗದ, ಡಿ.ವಿ. ಕಡಕೋಳ, ಸಿದ್ದಣ್ಣ ಚೌಶೆಟ್ಟಿ, ಎಸ್.ಬಿ. ಹಿರೆಮಠ, ಅವರು ಮುಂಚೂಣಿಯಲ್ಲಿದ್ದರು.