ಹಾವೇರಿ: ರಾಮಮಂದಿರ ನಿರ್ಮಾಣವಾಗಿ ಒಂದು ವರ್ಷ ಪೂರೈಸಿದ ನೆನಪಿನಲ್ಲಿ ರಾಜ್ಯಾದ್ಯಂತ ಸಂಚರಿಸುತ್ತಿರುವ ನಂದಿ ರಥಯಾತ್ರೆಗೆ ನಗರದಲ್ಲಿ ಇತ್ತೀಚೆಗೆ ಭವ್ಯ ಸ್ವಾಗತ ಕೋರಲಾಯಿತು.
ಧಾರವಾಡ ಜಿಲ್ಲೆಯಿಂದ ಆಗಮಿಸಿದ ರಥಯಾತ್ರೆಯನ್ನು ಹಾವೇರಿ ಜಿಲ್ಲೆಯ ಗಡಿಭಾಗ ತಡಸ ಕ್ರಾಸ್ ಬಳಿ ಸ್ವಾಗತಿಸಲಾಯಿತು. ನಂತರ, ರಥಯಾತ್ರೆಯು ಶಿಗ್ಗಾಂವಿ ಮಾರ್ಗವಾಗಿ ಹಾವೇರಿ ಪ್ರವೇಶಿಸಿತು.
ಹಾವೇರಿ ನಗರದಲ್ಲಿ ರಥಯಾತ್ರೆಯನ್ನು ಸ್ವಾಗತಿಸಿದ ಜನರು, ರಥದಲ್ಲಿದ್ದ ಗೋವುಗಳನ್ನು ಪೂಜೆ ಸಲ್ಲಿಸಿದರು. ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಹಾಗೂ ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ರಥವನ್ನು ಸ್ವಾಗತಿಸಿ, ಗೋವುಗಳಿಗೆ ಹಣ್ಣು ತಿನ್ನಿಸಿದರು.
ಬಂಟ್ವಾಳ ತಾಲೂಕಿನ ಬ್ರಹ್ಮಗಿರಿಯ ಗೋಸೇವಾ ಗತಿವಿಧಿ ಕರ್ನಾಟಕ ಹಾಗೂ ರಾಧಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ ವತಿಯಿಂದ ನಂದಿ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. 88 ದಿನಗಳವರೆಗೆ ರಾಜ್ಯದೆಲ್ಲೆಡೆ ರಥಯಾತ್ರೆ ಸಂಚರಿಸಲಿದ್ದು, ಪ್ರತಿ ಮನೆಗಳಲ್ಲಿಯೂ ಗೋಮಯ ಹಣತೆ ಬೆಳಗಿಸಲಾಗುವುದು. 2024ರ ಡಿ.31ರಿಂದ 2025ರ ಮಾರ್ಚ್ 29ರವರೆಗೆ ರಥಯಾತ್ರೆ ನಡೆಯಲಿದ್ದು, ಮಂಗಳೂರಿನಲ್ಲಿ ಅಂತಿಮಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಆರ್‌ಎಸ್‌ಎಸ್‌ನ ಅಶೋಕ ನಾಡಿಗೇರ, ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಗವಿಸಿದ್ದಪ್ಪ ದ್ಯಾಮಣ್ಣನವರ, ಪ್ರಭು ಹಿಟ್ನಳ್ಳಿ, ರುದ್ರೇಶ ಚಿನ್ನಣ್ಣನವರ, ಸಂತೋಷ ಆಲದಕಟ್ಟಿ, ಕಿರಣ ಕೋಣನವರ, ಗಂಗಾಧರ ಕುಲಕರ್ಣಿ, ಇತರರಿದ್ದರು.