More

  ಗುಟ್ಟು ಬಿಟ್ಟುಕೊಡದ ಮಾನಿನಿಯರು ! ಮಹಿಳೆಯರ ಮತಗಳತ್ತ ಎಲ್ಲರ ಚಿತ್ತ; ಗೆಲುವಿನ ರೂವಾರಿಗಳಾಗುವರೇ ಹೆಂಗಳೆಯರು ?

  ಕೇಶವಮೂರ್ತಿ ವಿ.ಬಿ. ಹಾವೇರಿ

  ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಮಹಿಳಾ ಮತದಾರರು ಯಾರ ಪರ ನಿಂತಿದ್ದಾರೆ ಎಂಬ ಚರ್ಚೆ ಮೊದಲಿನಿಂದ ಇತ್ತಾದರೂ, ಮತದಾನದ ನಂತರ ಎಲ್ಲರ ಚಿತ್ತ ಮಹಿಳಾ ಮತದಾರರತ್ತ ಕೇಂದ್ರೀಕರಿಸಿದೆ. ಅವರು ರಾಜ್ಯ ಸರ್ಕಾರದ ಗ್ಯಾರಂಟಿ ಪರ ಇದ್ದಾರೋ ? ಅಥವಾ ಪ್ರಧಾನಿ ನರೇಂದ್ರ ಮೋದಿ ಗ್ಯಾರಂಟಿ ಪರ ಇದ್ದಾರೋ ? ಎಂಬ ಚರ್ಚೆ ಹುಟ್ಟಿಹಾಕಿದೆ. ಗುಟ್ಟು ಬಿಟ್ಟುಕೊಡದ ಮಾನಿನಿಯರು ಎಲ್ಲರ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ.

  ಹೇ ಈ ಸಲ ಹೆಣ್ ಮಕ್ಳು ಹೆಚ್ಚಾಗಿ ಓಟು ಕಾಂಗ್ರೆಸ್‌ಗೆ ಹಾಕ್ಯಾರ್ ಪಾ, ಗ್ಯಾರಂಟಿ ಕೈ ಹಿಡದೈತಿ… ಹೇ ಎಂಪಿ ಎಲೆಕ್ಷನ್‌ದಾಗ ಅದೆಲ್ಲ ನಡಿಯಂಗಿಲ್ಲ ನೋಡು, ಕೇಂದ್ರದಾಗ ಮೋದಿನ ಬೇಕ್ ಅಂತಾರ, ಅದಕ ಹೆಣ್ ಮಕ್ಳು ಓಟು ಬಿಜೆಪಿಗೆ ಹೆಚ್ಚು ಬಿದ್ದಾವ್ ನೋಡ್ ಪಾ… ಹಾವೇರಿ, ಗದಗ ಜಿಲ್ಲೆಯ ಕ್ಷೇತ್ರ ವ್ಯಾಪ್ತಿಯ ಮತದಾರರು, ವಿವಿಧ ಪಕ್ಷಗಳ ಕಾರ್ಯಕರ್ತರು, ಮುಖಂಡರು ಎದುರಾದಾಗ ಸಾಮಾನ್ಯವಾಗಿ ಚರ್ಚೆಯಾಗುತ್ತಿರುವ ವಿಷಯವಿದು. ಪ್ರತಿ ಸಲ ಜಾತಿ ಲೆಕ್ಕಾಚಾರವೇ ಚರ್ಚೆಯ ಮೊದಲಿಗೆ ಬರುತ್ತಿತ್ತು. ಈ ಬಾರಿ ವ್ಯಾಖ್ಯಾನ ಬದಲಾಗಿದೆ. ಮಹಿಳೆಯರ ಮತದಾನದ ಪ್ರಮಾಣ ಹೆಚ್ಚಾಗಿದ್ದು, ಕಾಂಗ್ರೆಸ್ ಗ್ಯಾರಂಟಿ ವರ್ಸಸ್ ಮೋದಿ ಗ್ಯಾರಂಟಿ ಎಂಬ ವಾತಾವರಣ ಕಂಡುಬಂದಿದೆ.

  ರಾಜ್ಯ ಸರ್ಕಾರ ನೀಡಿರುವ ಐದು ಗ್ಯಾರಂಟಿಗಳ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಭಾರಿ ವಿಶ್ವಾಸ ವ್ಯಕ್ತವಾಗಿದೆ. ಸಾಂಪ್ರದಾಯಿಕ ವೋಟುಗಳ ಜತೆಗೆ ಗ್ಯಾರಂಟಿ ಕೃಪೆಯಿಂದ ಮಹಿಳಾ ಮತದಾರರ ಓಟುಗಳೂ ನಮಗೇ ಬರಲಿವೆ. ಹಾಗಾಗಿ, ಈ ಬಾರಿ ಗೆಲುವು ನಮ್ಮದೇ ಎಂಬುದು ಕಾಂಗ್ರೆಸ್‌ನ ಆತ್ಮವಿಶ್ವಾಸವಾಗಿದೆ. ಮಹಿಳಾ ಮತದಾರರು ಪ್ರಬುದ್ಧರು. ಎಲ್ಲಿ ಯಾವಾಗ ಯಾರಿಗೆ ಮತ ಹಾಕಬೇಕೆಂಬುದು ಅವರಿಗೆ ಚೆನ್ನಾಗಿ ತಿಳಿದಿದೆ. ದೇಶದ ವಿಷಯಕ್ಕೆ ಬಂದಾಗ ಮೋದಿ ಅವರಿಗೇ ಮೊದಲ ಪ್ರಾಧಾನ್ಯತೆ ಕೊಡುತ್ತಾರೆ. ಆದ್ದರಿಂದ ಈ ಸಲವೂ ಬಿಜೆಪಿ ಗೆಲುವು ನಿಕ್ಕಿ ಎಂಬುದು ಬಿಜೆಪಿಗರ ಭರವಸೆಯ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ.
  ಮಹಿಳಾ ಮತದಾರರಲ್ಲಿ ನವ ಮತದಾರರು, ಯುವ ಮತದಾರರು, ಮಧ್ಯಮ ವಯಸ್ಕ, ಹಿರಿಯ ಮತದಾರರೂ ಸೇರಿದ್ದಾರೆ. ಒಂದೊಂದು ವರ್ಗದ ಮತಗಳು ಒಂದೊಂದು ಪಕ್ಷ, ಅಭ್ಯರ್ಥಿಯತ್ತ ಸೆಳೆದಿರುತ್ತವೆ. ಈ ಬಾರಿ ಗೆಲುವಿನ ರೂವಾರಿಗಳು ಇವರೇ ಆಗಲಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಏನೇ ಆದರೂ ಮಹಿಳಾ ಮತದಾರರ ಚಿತ್ತ ಯಾರತ್ತ ಎಂಬುದನ್ನು ತಿಳಿಯಲು ಜೂನ್ 4ರಂದು ಫಲಿತಾಂಶ ಪ್ರಕಟವಾಗುವವರೆಗೆ ಕಾಯಲೇಬೇಕು. ಅಲ್ಲಿಯವರೆಗೆ ಪಂಚಾಯ್ತಿ ಕಟ್ಟೆ, ಚಾವಡಿ ಕಟ್ಟೆ, ಮನೆ ಮನೆಗಳಲ್ಲೂ ಈ ಚರ್ಚೆ ಮುಂದುವರಿಯಲಿದೆ.

  ಶೇ.6ರಷ್ಟು ಮತದಾನ ಹೆಚ್ಚಳ
  ಪ್ರಸ್ತುತ ಕ್ಷೇತ್ರದಲ್ಲಿ ಒಟ್ಟು 17,92,774 ಮತದಾರರಿದ್ದು, 9,02,119 ಪುರುಷರು ಹಾಗೂ 8,90,572 ಮಹಿಳಾ ಹಾಗೂ 83 ಇತರೆ ಮತದಾರರಿದ್ದಾರೆ. ಈ ಪೈಕಿ ಈ ಬಾರಿ 7,13,613 ಪುರುಷರು, 6,77,577 ಮಹಿಳೆಯರು ಹಾಗೂ 24 ಇತರರು ಮತ ಚಲಾಯಿಸಿದ್ದಾರೆ. 2014ರಲ್ಲಿ ಶೇ.67.66ರಷ್ಟು ಮಹಿಳೆಯರು ಮತ ಚಲಾಯಿಸಿದ್ದರೆ, 2019ರಲ್ಲಿ ಶೇ.68.99ರಷ್ಟು ಮಹಿಳೆಯರು ಮತ ಚಲಾಯಿಸಿದ್ದಾರೆ. 2024ರಲ್ಲಿ ಶೇ.75ರಷ್ಟು ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಶೇ.6ರಷ್ಟು ಮಹಿಳಾ ಮತದಾರರ ಸಂಖ್ಯೆ ಹೆಚ್ಚಳವಾಗಿದೆ.

  2019- 2024ರ ಅಂಕಿ- ಅಂಶ (ಮಹಿಳೆಯರು ಚಲಾಯಿಸಿದ ಮತಗಳು)
  ವಿಧಾನಸಭಾ ಕ್ಷೇತ್ರ 2019 2024
  ಶಿರಹಟ್ಟಿ 72,556 81,276
  ಗದಗ 77,925 84,890
  ರೋಣ 77,183 86,319
  ಹಾನಗಲ್ಲ 74,999 85,852
  ಹಾವೇರಿ 77,847 88,812
  ಬ್ಯಾಡಗಿ 75,000 84,264
  ಹಿರೇಕೆರೂರ 67,410 75,218
  ರಾಣೆಬೆನ್ನೂರ 78,904 90,946


  ಒಟ್ಟು 6,01,824 6,77,577

  ಕೋಟ್:
  ಕಳೆದ 2019ರ ಲೋಕಸಭಾ ಚುನಾವಣೆಗಿಂತಲೂ 2024ರ ಚುನಾವಣೆಯಲ್ಲಿ ಮಹಿಳಾ ಮತದಾರರ ಮತದಾನದ ಪ್ರಮಾಣ ಹೆಚ್ಚಳವಾಗಿದೆ. ಈ ಬಾರಿ ಎಲ್ಲೆಡೆ ರಾಜ್ಯ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಸಕಾರಾತ್ಮಕ ಮಾತುಗಳು ಕೇಳಿಬಂದಿವೆ. ಮಹಿಳಾ ಮತದಾರರ ಮನ ಗೆದ್ದಿರುವ ಕಾಂಗ್ರೆಸ್ ಸರ್ಕಾರಕ್ಕೆ ಇದು ಶ್ರೀರಕ್ಷೆಯಾಗಲಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ಮಹಿಳಾ ಮತದಾರರೇ ಕಾರಣವಾಗಲಿದ್ದಾರೆ.
  – ರಾಜೇಶ್ವರಿ ಪಾಟೀಲ, ಕೆಪಿಸಿಸಿ ಮಾಜಿ ಕಾರ್ಯದರ್ಶಿ, ಶಿಗ್ಗಾಂವಿ

  ಕೋಟ್:
  ವಿಧಾನಸಭೆ ಚುನಾವಣೆಯಲ್ಲಿ ಆದಂತೆ ಲೋಕಸಭೆಯಲ್ಲಿ ಆಗಲ್ಲ. ಮಹಿಳಾ ಮತದಾರರಿಗೆ ಗ್ಯಾರಂಟಿಯಿಂದ ಆಗುವ ಸಮಸ್ಯೆಗಳ ಬಗ್ಗೆ ಗೊತ್ತಾಗಿದೆ. ವಿದ್ಯಾವಂತರಿಗಿಂತ ಹೆಚ್ಚಾಗಿ ಅವಿದ್ಯಾವಂತರು ಹಾಗೂ ಹಳ್ಳಿಗಳ ಮಹಿಳೆಯರೇ ಹೆಚ್ಚು ಜಾಗೃತರಾಗಿದ್ದಾರೆ. ಕೃಷಿಕರಿಗೆ ಸರ್ಕಾರ ಮಾಡುತ್ತಿರುವ ಅನ್ಯಾಯ, ಸಣ್ಣ ಕೆಲಸಕ್ಕೂ ಅಲೆದಾಡಬೇಕಾದ ಸಂದರ್ಭಗಳನ್ನು ಕಣ್ಣಾರೆ ಕಂಡಿದ್ದಾರೆ. ಅಲ್ಲದೇ ಮೋದಿ ಅವರ ಮೇಲೆ ಅಭಿಮಾನವಿದೆ. ಹಾಗಾಗಿ, ಈ ಬಾರಿಯೂ ಬಿಜೆಪಿ ಗೆಲುವು ಖಚಿತ.
  – ಭಾರತಿ ಜಂಬಗಿ, ಉತ್ತರ ಕನ್ನಡ ಜಿಲ್ಲಾ ಪ್ರಭಾರಿ, ಬಿಜೆಪಿ, ರಾಣೆಬೆನ್ನೂರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts