More

  ಮೂರು ತಿಂಗಳಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ; ಮೆಡಿಕಲ್ ಕಾಲೇಜಲ್ಲಿ ಐವರು ಕೈ ಶಾಸಕರ ಸಮಾಗಮ

  ಹಾವೇರಿ: ತಾಲೂಕಿನ ಡಿಸಿ ಕಚೇರಿ ರಸ್ತೆ ದೇವಗಿರಿ ಯಲ್ಲಾಪುರ ಬಳಿ ನಿರ್ಮಾಣ ಹಂತದಲ್ಲಿರುವ ಹಾವೇರಿ ಮೆಡಿಕಲ್ ಕಾಲೇಜು ಕಟ್ಟಡ ಸ್ಥಳಕ್ಕೆ ಜಿಲ್ಲೆಯ ಐವರು ಕಾಂಗ್ರೆಸ್ ಶಾಸಕರು ಮಂಗಳವಾರ ಏಕಕಾಲದಲ್ಲಿ ಭೇಟಿ ನೀಡಿ ಪ್ರಗತಿ ಪರಿಶೀಲಿಸಿದರು. ಕಾಲೇಜು ನಿರ್ದೇಶಕರು ಹಾಗೂ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ಶಾಸಕರು ಎರಡನೇ ಬ್ಯಾಚ್ ಬರುವಷ್ಟರಲ್ಲಿ ಆಗಸ್ಟ್- ಸಪ್ಟೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.
  ಕಾಲೇಜಿನ ನೂತನ ಕಟ್ಟಡ ಕಾಮಗಾರಿ ಪರಿಶೀಲಿಸಿದ ಶಾಸಕರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಶ್ರೀನಿವಾಸ ಮಾನೆ, ಯು.ಬಿ.ಬಣಕಾರ ಹಾಗೂ ಪ್ರಕಾಶ ಕೋಳಿವಾಡ ಐವರೂ ಶಾಸಕರು ನಂತರ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅವರೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
  ಕಳೆದ ವರ್ಷವೇ ಮೆಡಿಕಲ್ ಕಾಲೇಜು ಶುರುವಾಗಿದ್ದರೂ ನಿಗದಿತ ಸಮಯಕ್ಕೆ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣವಾಗದ ಕಾರಣ ದೇವಗಿರಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೊದಲ ಬ್ಯಾಚ್ ವಿದ್ಯಾರ್ಥಿಗಳಿಗೆ ತರಗತಿ ನಡೆಸಲಾಗುತ್ತಿದೆ. ಆಗಸ್ಟ್, ಸೆಪ್ಟೆಂಬರ್ ವೇಳೆಗೆ ಸಿಇಟಿ ಮುಗಿಸಿ 2ನೇ ಬ್ಯಾಚ್ ವಿದ್ಯಾರ್ಥಿಗಳು ಬರಲಿದ್ದಾರೆ. ಆಗ ತರಗತಿ ನಡೆಸುವುದು ಕಷ್ಟವಾಗಲಿದೆ. ಅಷ್ಟರೊಳಗಾಗಿ ಕಾಮಗಾರಿ ಪೂರ್ಣಗೊಳಿಸಬೇಕು. ಶೈಕ್ಷಣಿಕ ಬ್ಲಾಕ್, ಆಡಳಿತಾತ್ಮಕ ಬ್ಲಾಕ್, ವಿದ್ಯಾರ್ಥಿ ನಿಲಯ ಸೇರಿದಂತೆ ಅಗತ್ಯ ಮೂಲಸೌಲಭ್ಯ ಕಾಮಗಾರಿ ಮುಗಿದಿರಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟರು.
  ಸಭೆಯಲ್ಲಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಪಂ ಸಿಇಒ ಅಕ್ಷಯ ಶ್ರೀಧರ, ಎಸ್‌ಪಿ ಡಾ.ಶಿವಕುಮಾರ ಗುಣಾರೆ, ಎಡಿಸಿ ಪೂಜಾರ ವೀರಮಲ್ಲಪ್ಪ, ಜಿಲ್ಲಾಸ್ಪತ್ರೆ ಸರ್ಜನ್ ಡಾ.ಪಿ.ಆರ್.ಹಾವನೂರ, ಸೇರಿದಂತೆ ಇತರರು ಉಪಸ್ಥಿತರಿದ್ದರು.
  ಡೀನ್ ಮುಳಗುಂದಗೆ ಎಚ್ಚರಿಕೆ
  ಹಾವೇರಿ ಮೆಡಿಕಲ್ ಕಾಲೇಜು ಡೀನ್ ಮತ್ತು ನಿರ್ದೇಶಕ ಡಾ.ಉದಯ ಮುಳಗುಂದ ಅವರನ್ನು ಶಾಸಕರ ತಂಡ ತರಾಟೆಗೆ ತೆಗೆದುಕೊಂಡಿತು. ಯಾವ ಕೆಲಸವನ್ನೂ ಚುರುಕಾಗಿ ಮಾಡುತ್ತಿಲ್ಲ. ಸಂಬಂಧಪಟ್ಟವರೊಂದಿಗೆ ಸಮನ್ವಯತೆಯೊಂದಿಗೆ ಕೆಲಸ ಮಾಡುತ್ತಿಲ್ಲ. ಸರಿಯಾಗಿ ಮಾಹಿತಿಯನ್ನೂ ನೀಡುತ್ತಿಲ್ಲ. ಈವರೆಗೆ ಮಾಡಿದಂತೆ ಇನ್ನು ಮುಂದೆ ಮಾಡಿದರೆ ನಡೆಯುವುದಿಲ್ಲ. ಇನ್ನು ಮುಂದೆ ಚುರುಕಾಗಬೇಕು. ನಿಮ್ಮಿಂದ ಸಾಧ್ಯವಾಗದಿದ್ದರೆ ತಾವು ಹೊರಡಬಹುದು ಎಂದು ಶಾಸಕರು ವಾರ್ನಿಂಗ್ ನೀಡಿದರು.
  ಹಿರಿಯ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ಸಿಬ್ಬಂದಿ ಹುದ್ದೆಗೆ ನೇಮಕಗೊಂಡವರಿಗೆ ಆದೇಶ ನೀಡಿಲ್ಲ. ಇದರಿಂದ ತರಗತಿ ನಡೆಸುವುದು ಕಷ್ಟವಾಗುತ್ತದೆ. ಕಾಯಂ ಹುದ್ದೆಗೆ ನೇಮಕಗೊಂಡವರಿಗೆ ಕರ್ತವ್ಯಕ್ಕೆ ಹಾಜರುಪಡಿಸಿಕೊಂಡು ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕರು ಸೂಚಿಸಿದರು.
  ಮಾಧ್ಯಮಕ್ಕೆ ತಿಳಿಸದೇ ಸಭೆ
  ಜಿಲ್ಲೆಯ ಆಡಳಿತ ಪಕ್ಷದ ಐವರು ಶಾಸಕರು ಇದೇ ಮೊದಲ ಬಾರಿಗೆ ಮೆಡಿಕಲ್ ಕಾಲೇಜು ಕಾಮಗಾರಿ ಪ್ರಗತಿ ಪರಿಶೀಲನೆ ಸಭೆ ನಡೆಸಿರುವುದು ಅತ್ಯಂತ ಮಹತ್ವದ ಸಂಗತಿಯಾಗಿದೆ. ಈ ಬಗ್ಗೆ ಜನರಿಗೂ ತೀವ್ರ ಕುತೂಹಲವಿದೆ. ಇಂತಹ ಮಹತ್ವದ ಸಭೆಯನ್ನು ಮಾಧ್ಯಮದವರಿಗೆ ತಿಳಿಸದೇ ಐವರೂ ಶಾಸಕರು ನಡೆಸಿರುವುದಕ್ಕೆ ಸಾರ್ವಜನಿಕರ ಆಕ್ಷೇಪ ವ್ಯಕ್ತವಾಗಿದೆ. ಮಾಧ್ಯಮಕ್ಕೆ ತಿಳಿಸದೇ ಸಭೆ ನಡೆಸಿದ್ದು ಯಾಕೆ ಎಂಬ ಪ್ರಶ್ನೆ ಉದ್ಭವಿಸಿದೆ.

  ಕೋಟ್
  ಮೆಡಿಕಲ್ ಕಾಲೇಜು ಕಟ್ಟಡ ಕಾಮಗಾರಿ ಕುರಿತು ಪರಿಶೀಲನೆ ಮಾಡಿದ್ದೇವೆ. ಮೆಡಿಕಲ್ ಕಾಲೇಜಿನಲ್ಲಿ ಆಸ್ಪತ್ರೆ ಮತ್ತು ಹಾಸ್ಪಿಟಲ್ ಬ್ಲಾಕ್ ಮಂಜೂರಾಗಬೇಕಿದೆ. ಕಾಮಗಾರಿಯ ಅನುದಾನ ಪಾವತಿ ಕುರಿತು ಇಂದು ಮುಖ್ಯಮಂತ್ರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರನ್ನು ಭೇಟಿಯಾಗಿ ಬಿಡುಗಡೆಗೆ ಒತ್ತಾಯಿಸುತ್ತೇವೆ.
  ಶ್ರೀನಿವಾಸ ಮಾನೆ, ಹಾನಗಲ್ಲ ಶಾಸಕ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts