ಮತ್ತೆ ಸುದ್ದಿಯಲ್ಲಿ ಜಿಲ್ಲೆಯ ಶಾಸಕರು!

ವಿಜಯವಾಣಿ ವಿಶೇಷ ಹಾವೇರಿ

ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಪತನಗೊಳಿಸುವ ಬಿಜೆಪಿಯ ಆಪರೇಷನ್ ಕಮಲ ಚುರುಕು ಪಡೆದ ಬೆನ್ನಲ್ಲಿಯೇ ರಾಜ್ಯ ರಾಜಕಾರಣದಲ್ಲಿ ಹಾವೇರಿ ಜಿಲ್ಲೆ ಶಾಸಕರಾದ ಆರ್. ಶಂಕರ, ಬಿ.ಸಿ. ಪಾಟೀಲರ ಮೂಲಕ ಮತ್ತೊಮ್ಮೆ ಗಮನ ಸೆಳೆಯುತ್ತಿದೆ.

ರಾಣೆಬೆನ್ನೂರ ಶಾಸಕ ಆರ್. ಶಂಕರ ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದು ಕಮಲ ಪಾಳಯ ಸೇರಲು ಸಜ್ಜಾಗಿದ್ದಾರೆ. ಜಿಲ್ಲೆಯ ಆರು ಶಾಸಕರಲ್ಲಿ ನಾಲ್ವರು ಬಿಜೆಪಿ ಶಾಸಕರಿದ್ದು, ಬಿಜೆಪಿಗೆ ಆನೆಬಲವಿದೆ. ಇನ್ನಿಬ್ಬರು ಶಾಸಕರಲ್ಲಿ ಕೆಪಿಜೆಪಿಯ ಆರ್. ಶಂಕರ ಅವರು ಬಹುತೇಕವಾಗಿ ಬಿಜೆಪಿ ಬುಟ್ಟಿಗೆ ಬಿದ್ದಿದ್ದು, ಈಗ ಎಲ್ಲರ ಚಿತ್ತ ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲರತ್ತ ನೆಟ್ಟಿದೆ.

ಸದ್ದು ಮಾಡದ ಬಿಸಿಪಿ:ಬಿ.ಸಿ. ಪಾಟೀಲರು ಮೈತ್ರಿ ಸರ್ಕಾರ ರಚನೆಯಾದಾಗಿನಿಂದಲೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ, ಎರಡನೇ ಬಾರಿಯ ಸಂಪುಟ ವಿಸ್ತರಣೆಯಲ್ಲೂ ಅವರಿಗೆ ಸಚಿವ ಸ್ಥಾನ ಸಿಗಲಿಲ್ಲ. ಇದರಿಂದ ಬಿ.ಸಿ. ಪಾಟೀಲ ತೀವ್ರ ಬೇಸರಗೊಂಡಿದ್ದರು. ಬಿಜೆಪಿಯ ಆಪರೇಷನ್ ಕಮಲದ ವಿಷಯ ಸುದ್ದಿಯಾಗುತ್ತಿದ್ದಂತೆ, ಅವರ ಹೆಸರು ಮುಂಚೂಣಿಯಾಗಿ ಕೇಳಿ ಬಂದಿತ್ತು. ಕೆಲ ತಿಂಗಳ ಹಿಂದೆ ತರಳಬಾಳಿನಲ್ಲಿ ನಡೆದ ಧಾರ್ವಿುಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರು ಬಿಸಿಪಿಯವರ ಕಾರು ಅಡ್ಡಗಟ್ಟಿ ಬಿಜೆಪಿ ಸೇರುವಂತೆ ಒತ್ತಾಯ ಮಾಡಿದ್ದರು. ಆದರೆ, ಈಗ ಸಂಕ್ರಾಂತಿಯ ವೇಳೆ ಆಪರೇಷನ್ ಕಮಲದ ಸುದ್ದಿ ಜೋರಾಗಿದ್ದರೂ ಬಿ.ಸಿ. ಪಾಟೀಲರ ಹೆಸರು ಎಲ್ಲಿಯೂ ಕಾಣದಿರುವುದು ಆಶ್ಚರ್ಯ ಮೂಡಿಸಿದೆ. ಇದೆಲ್ಲವನ್ನು ಗಮನಿಸಿದರೆ ಬಿ.ಸಿ. ಪಾಟೀಲರ ನಡೆ ಸದ್ಯಕ್ಕೆ ಏನು ಎಂಬ ಚರ್ಚೆಯೂ ಹಿರೇಕೆರೂರ ಕ್ಷೇತ್ರದ ಕಾರ್ಯಕರ್ತರಲ್ಲಿ ಜೋರಾಗಿದೆ.

ಮಗಳ ಮದುವೆಯಲ್ಲಿ ಬ್ಯುಸಿ:ಬಿ.ಸಿ. ಪಾಟೀಲರು 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ ಅವರಿಗೆ ಕಾಂಗ್ರೆಸ್ ಸಚಿವ ಸ್ಥಾನ ನೀಡಿಲ್ಲ. ಇದು ಸಹಜವಾಗಿಯೇ ಬೇಸರ ತಂದಿದೆ. ಹೀಗಾಗಿ ಅವರು ಮಾಧ್ಯಮಗಳ ಪ್ರಶ್ನೆಗೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಉತ್ತರಿಸುತ್ತಿದ್ದರು. ಅಲ್ಲದೆ, ಜ. 18ರಂದು ಬೆಂಗಳೂರಿನಲ್ಲಿ ಬಿಸಿಪಿ ಅವರ ಪುತ್ರಿ, ನಟಿ ಸೃಷ್ಟಿ ಪಾಟೀಲರ ವಿವಾಹ ಹಾಗೂ ಜ. 21ರಂದು ಹಿರೇಕೆರೂರಿನಲ್ಲಿ ವಿವಾಹ ಆರತಕ್ಷತೆ ಜೊತೆಗೆ ಸಾಮೂಹಿಕ ವಿವಾಹ ಸಮಾರಂಭ ಜರುಗಲಿದೆ. ಇದರಿಂದಾಗಿ ಮಗಳ ಮದುವೆ ಸಿದ್ಧತೆಯಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ಅವರು ರಾಜ್ಯ ರಾಜಕಾರಣದ ಬಗ್ಗೆ ಕಾಯ್ದು ನೋಡುತಿದ್ದಾರೆ. ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಕೈ ಪಾಳಯದ ಕಣ್ಣು…:ಮಗಳ ಮದುವೆ ತಯಾರಿಯಲ್ಲಿ ಬಿ.ಸಿ. ಪಾಟೀಲರು ಬ್ಯುಸಿಯಿದ್ದರೂ ಕೈ ಪಾಳಯ ಅವರ ಮೇಲೆ ಕಣ್ಣಿಟ್ಟಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ ಅವರು ಬಿ.ಸಿ. ಪಾಟೀಲರೊಂದಿಗೆ ಸತತ ಸಂಪರ್ಕದಲ್ಲಿಯೂ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಜನರ ವಿಶ್ವಾಸ ಕಳೆದುಕೊಳ್ಳುತ್ತಿರುವ ಶಂಕರ:2013ರ ಚುನಾವಣೆಯಲ್ಲಿ ಸೋಲು ಕಂಡು 2018ರಲ್ಲಿ ಗೆಲುವು ಸಾಧಿಸಿರುವ ಆರ್. ಶಂಕರ ಅವರಿಂದ ಕ್ಷೇತ್ರದ ಜನತೆ ಅಭಿವೃದ್ಧಿಯ ಅಪಾರ ನಿರೀಕ್ಷೆ ಹೊಂದಿದ್ದರು. ಅತಂತ್ರ ವಿಧಾನ ಸಭೆಯಲ್ಲಿ ಸಚಿವ ಸ್ಥಾನವನ್ನೂ ಗಿಟ್ಟಿಸಿಕೊಂಡಿದ್ದರು. ಆದರೆ, ಸಚಿವರಾಗುತ್ತಿದ್ದಂತೆ ಆರ್. ಶಂಕರ ಕ್ಷೇತ್ರಕ್ಕೆ ಅಪರೂಪವಾಗಿಬಿಟ್ಟರು. ಮುಂಗಾರು ಹಂಗಾಮಿನಲ್ಲಿಯೇ ರಾಣೆಬೆನ್ನೂರ ತಾಲೂಕು ಬರಪೀಡತವಾಗಿತ್ತು. ಸಚಿವರಾಗಿದ್ದರೂ ಬರ ಪರಿಹಾರಕ್ಕೆ ಹೆಚ್ಚಿನ ಆಸಕ್ತಿ ವಹಿಸಲಿಲ್ಲ. ಕೆಲ ರೈತರು ನಮ್ಮ ಕ್ಷೇತ್ರದ ಶಾಸಕರು ಕಾಣೆಯಾಗಿದ್ದಾರೆ. ಅವರನ್ನು ಹುಡುಕಿಕೊಡಿ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆಯೂ ನಡೆಯಿತು. ಶಂಕರ ಶಾಸಕರಾಗಿ ಆಯ್ಕೆಯಾದ ನಂತರ ಕ್ಷೇತ್ರದ ಹಿತಾಸಕ್ತಿ ಮರೆತ ಪರಿಣಾಮ ಕ್ಷೇತ್ರದ ಜನರು ಅವರ ಕಾರ್ಯವೈಖರಿ ಬಗೆಗೆ ಸಾಮಾಜಿಕ ಜಾಲತಾಣಗಳ ಮೂಲಕ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *