ಆರೋಪಿ ಬಂಧಿಸದಿದ್ದಲ್ಲಿ ಎಸ್‌ಪಿ ಕಚೇರಿ ಎದುರು ಪ್ರತಿಭಟನೆ; ಕುರುಬರ ಮಲ್ಲೂರ ಪಿಯುಸಿ ವಿದ್ಯಾರ್ಥಿ ಪ್ರಶಾಂತ ಕಳಸೂರ ಆತ್ಮಹತ್ಯೆ ಪ್ರಕರಣ

1 Min Read

ಹಾವೇರಿ: ಯುವತಿಯನ್ನು ಕರೆದುಕೊಂಡು ಹೋಗಿದ್ದಕ್ಕೆ ನಿನ್ನ ಕುಟುಂಬದ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸುತ್ತೇವೆ ಎಂದು ಬೆದರಿಸಿ ಮೂರು ಲಕ್ಷ ರೂ. ವಸೂಲಿ ಮಾಡಿರುವ ಹಾಗೂ ಇದೇ ಕಾರಣಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಆರೋಪಿ ಚಂದ್ರಶೇಖರ ಮುದಕಣ್ಣನವರ ಅವರನ್ನು ಪೊಲೀಸರು ಮಂಗಳವಾರದೊಳಗೆ ಬಂಧಿಸದಿದ್ದಲ್ಲಿ ಬುಧವಾರ ಎಸ್‌ಪಿ ಕಚೇರಿ ಎದುರು ಪ್ರತಿಭಟನೆ ಆರಂಭಿಸಲಾಗುವುದು ಎಂದು ವಾಲ್ಮೀಕಿ ಮಹಾಸಭಾದ ಜಿಲ್ಲಾಧ್ಯಕ್ಷ ರಮೇಶ ಆನವಟ್ಟಿ ಎಚ್ಚರಿಕೆ ನೀಡಿದರು.
ಕೇಸ್ ಮಾಡಿ ನಿಮ್ಮನ್ನು ಜೈಲಿಗೆ ಕಳುಹಿಸುತ್ತೇವೆ. ಪೊಲೀಸರಿಗೆ ಹಣ ಕೊಡಬೇಕು ಎಂದು ರಾಜೀ ಹೆಸರಲ್ಲಿ ಹಣ ಪಡೆದಿದ್ದಾರೆ. ಯುವಕನ ತಂದೆ ಪ್ರಕಾಶ ಎತ್ತು ಮಾರಿ ಹಣ ತಂದು ಕೊಟ್ಟಿದ್ದಾರೆ. ಈ ವಿಷಯ ತಿಳಿದು ಪ್ರಶಾಂತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಾವಿಗೆ ಯುವತಿಯ ಅಜ್ಜ ಹಾಗೂ ವಕೀಲರು ಕಾರಣ ಎಂದು ಮೃತ ಯುವಕ ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾನೆ ಎಂದರು.
ಮುದಕಣ್ಣವರ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಪೊಲೀಸರು ಈವರೆಗೆ ಬಂಧಿಸಿಲ್ಲ. ವಿಚಾರಣೆಗೆ ಕರೆಸಿ ಹಾಗೇ ಬಿಟ್ಟು ಕಳುಹಿಸಿದ್ದಾರೆ. ಈ ಮೂಲಕ ಅವರಿಗೆ ಜಾಮೀನು ಪಡೆಯಲು ಪೊಲೀಸರು ಸಹಕಾರ ನೀಡುತ್ತಿದ್ದಾರೆ. ರಾಜಕೀಯ ಒತ್ತಡವೂ ಇದರಲ್ಲಿ ಸೇರಿದೆ. ಇದರಲ್ಲಿ ಶಿಗ್ಗಾಂವಿ ಡಿವೈಎಸ್‌ಪಿ ಸೇರಿದಂತೆ ಇತರ ಪೊಲೀಸರು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ಮೃತ ಯುವಕ ಪ್ರಶಾಂತನ ತಂದೆ ಪ್ರಕಾಶ ಕಳಸೂರ ಮಾತನಾಡಿ, ಮುದಕಣ್ಣವರ ವಕೀಲರು ಮೊದಲು 25 ಸಾವಿರ ರೂ. ಕೇಳಿದ್ದರು. ನಂತರ 5 ಲಕ್ಷ ಕೇಳಿ 3 ಲಕ್ಷಕ್ಕೆ ಒಪ್ಪಿಕೊಂಡರು. ಹಣ ಕೊಟ್ಟ ವಿಷಯ ತಿಳಿದು ಮಗ ಆತ್ಮಹತ್ಯೆ ಮಾಡಿಕೊಂಡ ಎಂದು ನೋವು ತೋಡಿಕೊಂಡರು.
ಸುದ್ದಿಗೋಷ್ಠಿಯಲ್ಲಿ ವಾಲ್ಮೀಕಿ ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬೂದಗಟ್ಟಿ, ನಾಗರಾಜ ಬಡಿಯಮ್ಮನವರ, ಕಾಂತೇಶ ಕಳಸೂರ, ನೀಲಪ್ಪ ಹುಲಗಮ್ಮನವರ, ಮಂಜುನಾಥ ಮುಗದೂರ, ಇತರರಿದ್ದರು.

See also  ಮನೆ ಮನೆಗೆ ಶ್ರೀರಾಮನ ಅಕ್ಷತೆ ವಿತರಣೆ ಇಂದು; ಜಿಲ್ಲೆಯಾದ್ಯಂತ 700 ಗ್ರಾಮಗಳಲ್ಲಿ 700 ತಂಡ ರಚನೆ; ಆರತಿ ಎತ್ತಿ ಸ್ವಾಗತಿಸಲು ಸಜ್ಜಾದ ಭಕ್ತರು

Share This Article