More

    ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸಿ; ಹಾವೇರಿಯಲ್ಲಿ ಎಸ್‌ಪಿ ಕಚೇರಿ ಬಳಿ ವಾಲ್ಮೀಕಿ ಮಹಾಸಭಾದಿಂದ ಪ್ರತಿಭಟನೆ

    ಹಾವೇರಿ: ಜಿಲ್ಲೆಯ ಸವಣೂರ ತಾಲೂಕಿನ ಕುರಬರ ಮಲ್ಲೂರು ಗ್ರಾಮದ ವಿದ್ಯಾರ್ಥಿ ಪ್ರಶಾಂತ ಕಳಸೂರ ಆತ್ಮಹತ್ಯೆಗೆ ಕಾರಣರಾದ ಆರೋಪಿತರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ನಗರದಲ್ಲಿ ಗುರುವಾರ ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
    ನಗರದ ವಾಲ್ಮೀಕಿ ವೃತ್ತದಿಂದ ಪ್ರತಿಭಟನಾ ರ‌್ಯಾಲಿ ಆರಂಭಿಸಿ ನೂತನ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿವರೆಗೆ ರ‌್ಯಾಲಿ ನಡೆಸಿದರು. ಎಸ್‌ಪಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ವಾರದೊಳಗೆ ಆರೋಪಿತರನ್ನು ಬಂಧಿಸಬೇಕು. ಯಾವುದೋ ಒತ್ತಡಕ್ಕೆ ಮಣಿದಿರುವ ಶಿಗ್ಗಾಂವಿ ಡಿವೈಎಸ್‌ಪಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಮೃತ ಪ್ರಶಾಂತ ಕಳಸೂರನ ಕುಟುಂಬಕ್ಕೆ ಸೂಕ್ತ ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಗೋಪಾಲ ಅವರ ಮೂಲಕ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.
    ಪ್ರತಿಭಟನೆಯಲ್ಲಿ ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಮೇಶ ಆನವಟ್ಟಿ ಮಾತನಾಡಿ, ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯ ಸಿ.ಎಫ್.ಮುದಕಣ್ಣನವರ ಪೊಲೀಸ್ ಇಲಾಖೆ ಹೆಸರಿನಲ್ಲಿ ಪೋಕ್ಸೋ ಕೇಸು ದಾಖಲಿಸುವುದಾಗಿ ಹೆದರಿಸಿ ವಿದ್ಯಾರ್ಥಿ ಮತ್ತು ಆತನ ತಂದೆಗೆ ಬ್ಲಾಕ್‌ಮೇಲ್ ಮಾಡಿ 3 ಲಕ್ಷ ರೂ. ವಸೂಲಿ ಮಾಡಿದ್ದಾರೆ. ಇದರಿಂದ ಭಯಭೀತನಾಗಿ ವಿದ್ಯಾರ್ಥಿ ಪ್ರಶಾಂತ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದರು.
    ಪ್ರತಿಭಟನೆಯಲ್ಲಿ ಅಶೋಕ ಹರನಗೇರಿ, ನಾಗರಾಜ ಬಡಮ್ಮನವರ, ಶ್ರೀಧರ ದೊಡ್ಡಮನಿ, ಶ್ರೀಧರ ಆನವಟ್ಟಿ, ಮಾಲತೇಶ ಹೊಳೆಮ್ಮನವರ, ಮಾಲತೇಶ ರಿತ್ತಿ, ಮಾಲತೇಶ ಬಾಲಣ್ಣನವರ, ಮಲ್ಲಿಕಾರ್ಜುನ ಬೂದಗಟ್ಟಿ, ಜಗದೀಶ ಕೊಂಡೆಮ್ಮನವರ, ಶ್ರೀಕಾಂತ ತಳವಾರ, ಹೊನ್ನಪ್ಪ ಗೋಣಮ್ಮನವರ, ಜಗದೀಶ ಮನ್ನಂಗಿ, ಎಲ್ಲಪ್ಪ ದೇವಗೇರಿ, ಪ್ರಕಾಶ ಕಳಸೂರ, ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts