ಹಾವೇರಿ: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬೇಕಾಬಿಟ್ಟಿ ಪಾರ್ಕಿಂಗ್ ಶುಲ್ಕ ಪಡೆಯುತ್ತಿದ್ದ ಗುತ್ತಿಗೆದಾರರ ಟೆಂಡರ್ ರದ್ದುಪಡಿಸಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ (ವಾಕರಸಾ) ಸಂಸ್ಥೆ, ಪಾರ್ಕಿಂಗ್ ಅವ್ಯವಸ್ಥೆ ಸರಿಪಡಿಸಲು ಇಲಾಖೆಯ ಸಿಬ್ಬಂದಿಯನ್ನೇ ನೇಮಿಸಿದೆ.
ಫೆ.12ರಂದು ಉಪಲೋಕಾಯುಕ್ತರು ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ್ದ ವೇಳೆ ಪಾರ್ಕಿಂಗ್ ಹಾಗೂ ಶೌಚಗೃಹದಲ್ಲಿ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಸುಮೊಟೊ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಹಳೆಯ ಟೆಂಡರ್ ರದ್ದುಪಡಿಸಿ, ಮಾಸಿಕವಾಗಿ 91,111 ರೂ. ದರ ನಿಗಧಿಪಡಿಸಿ ಜಯಚಂದ್ರ ಪೂಜಾರಿ ಎಂಬುವರಿಗೆ ಹೊಸ ಟೆಂಡರ್ ನೀಡಿದ್ದು, ಫೆ.13ರಿಂದಲೇ ಕಾರ್ಯಾರಂಭ ಮಾಡಿದ್ದರು. ಫೆ.15ರಂದು ಇವರೂ ಸಹ ನಿಗಧಿತ ಶುಲ್ಕ 4 ರೂ. ಬದಲು 30 ರೂ. ಹೆಚ್ಚುವರಿ ಶುಲ್ಕ ಪಡೆದಿದ್ದರು.
ಈ ಕುರಿತು ಉಪ ಲೋಕಾಯುಕ್ತರ ಎಚ್ಚರಿಕೆ ನಂತರವೂ ಸುಲಿಗೆ, ಟೆಂಡರ್ ನೀಡುವಲ್ಲಿ ಅವ್ಯವಹಾರ ನಡೆದಿದೆ ಎಂದು ‘ವಿಜಯವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತ ಸಾರಿಗೆ ಸಂಸ್ಥೆ ಜಯಚಂದ್ರ ಪೂಜಾರಿ ಟೆಂಡರ್ ರದ್ದುಪಡಿಸಿ, ಫೆ.21ರಿಂದ ಸಾರಿಗೆ ಸಂಸ್ಥೆಯ ನಾಲ್ವರು ಸಿಬ್ಬಂದಿಯನ್ನು ನೇಮಿಸಿ, ಪಾರ್ಕಿಂಗ್ ನಿರ್ವಹಣೆ ಮಾಡಲಾಗುತ್ತಿದೆ. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಲು ಸಂಸ್ಥೆ ಸೂಚಿಸಲಾಗಿದೆ ಎಂದು ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ ‘ವಿಜಯವಾಣಿ’ಗೆ ಪತ್ರದ ಮೂಲಕ ಸ್ಪಷ್ಟಪಡಿಸಿದ್ದಾರೆ.

ಮೂರು ಬಾರಿ ಬದಲಾವಣೆ
ಜ್ಯೋತಿ ಬಿ. ಶೆಟ್ಟಿ ಎಂಬುವರು ಸೆಪ್ಟೆಂಬರ್ 29 2023ರಿಂದ ಸೆಪ್ಟೆಂಬರ್ 28 2028ರವರೆಗೆ ಹಾವೇರಿ ಬಸ್ ನಿಲ್ದಾಣದ ಪಾರ್ಕಿಂಗ್ ನಿರ್ವಹಣೆಗೆ ಗುತ್ತಿಗೆ ಪಡೆದಿದ್ದರು. ಮಾಸಿಕ ಪರವಾನಗಿ ಬಾಕಿ ಶುಲ್ಕ ಪಾವತಿಸದ ಕಾರಣ ಹಾಗೂ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಇವರಿಗೆ ಸಂಸ್ಥೆಯಿಂದ ನೋಟಿಸ್ ನೀಡಲಾಗಿತ್ತು. ಆದರೂ ಸುಧಾರಿಸದ ಹಿನ್ನೆಲೆಯಲ್ಲಿ ಪರವಾನಗಿ ರದ್ದುಗೊಳಿಸಿ, ತಾತ್ಕಾಲಿಕವಾಗಿ ನಿರ್ವಹಿಸಲು ದಿನವಹಿ ಬಾಡಿಗೆಯಂತೆ ಭಾಸ್ಕರ ಶೆಟ್ಟಿ ಅವರಿಗೆ ವಹಿಸಲಾಗಿತ್ತು. ಇವರೂ ಹೆಚ್ಚುವರಿ ಶುಲ್ಕ ಪಡೆದು ಫೆ.12ರಂದು ಉಪಲೋಕಾಯುಕ್ತರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದಾದ ಬಳಿಕ ಜಯಚಂದ್ರ ಪೂಜಾರಿಗೆ ಅಧಿಕೃತ ಟೆಂಡರ್ ನೀಡಿದ್ದು, ಅವರೂ ಅದೇ ಚಾಳಿ ಮುಂದುವರಿಸಿದ್ದರಿಂದ ಇದೀಗ ಸಾರಿಗೆ ಸಂಸ್ಥೆ ತನ್ನ ಸಿಬ್ಬಂದಿಗೆ ಪಾರ್ಕಿಂಗ್ ಜವಾಬ್ದಾರಿ ನೀಡಿದೆ.