ಹಾವೇರಿ: ದಾನಕ್ಕಿಂತ ಶ್ರೇಷ್ಠವಾದದ್ದು ಜಗತ್ತಿನಲ್ಲಿ ಯಾವುದೂ ಇಲ್ಲ. ದಾನವೇ ನನ್ನ ಉಸಿರು. ದಾನ, ದಾಸೋಹ, ದೇವಸ್ಥಾನಗಳ ಜೀರ್ಣೋದ್ಧಾರ ಹಾಗೂ ನನ್ನೂರ ಶಾಲೆಯ ಅಭಿವೃದ್ಧಿ ನನ್ನ ಗುರಿ ಎಂದು ಚನ್ನವ್ವ ಶಿವಬಸಪ್ಪ ತೆಲಗಿ ಹೇಳಿದರು.
ತಾಲೂಕಿನ ಕೋಡಬಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1.50 ಲಕ್ಷ ರೂ. ದಾನದಿಂದ ನಿರ್ಮಿಸಿದ ರಂಗಮಂದಿರವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು. ಈ ಸಭಾಭವನದಲ್ಲಿ ನಿರಂತರವಾಗಿ ಸಾಂಸ್ಕೃತಿಕ ಸಮಾರಂಭಗಳು ನಡೆಯಲಿ. ಮಕ್ಕಳ ಪ್ರತಿಭೆ ಹೊರಬರಲಿ. ಮಕ್ಕಳು ಚೆನ್ನಾಗಿ ಅಭ್ಯಾಸ ಮಾಡಿ ಶಾಲೆಗೆ, ಗ್ರಾಮಕ್ಕೆ ಕೀರ್ತಿ ತರಬೇಕು ಎಂದರು.
ಮುಖ್ಯೋಪಾಧ್ಯಾಯ ಬಿ.ಎಸ್.ಬಿಗಸೂರ ಮಾತನಾಡಿ, ರಂಗಮಂದಿರ ನಿರ್ಮಿಸಿರುವ ಚನ್ನವ್ವ ಅವರು ಶಾಲೆಯ ಪ್ಲಾಟ್‌ಫಾರ್ಮ್‌ಗೆ ಆರ್‌ಸಿಸಿ ನಿರ್ಮಿಸಿಕೊಡಲು ಮುಂದಾಗಿದ್ದಾರೆ. ಸರ್ಕಾರಿ ಶಾಲೆಗಳಿಗೆ ಇಂತಹ ದಾನಿಗಳು ವರದಾನವಾಗಿ ಪರಿಣಮಿಸುತ್ತಾರೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಮಹಾಲಿಂಗಪ್ಪ ಯತ್ತಿನಹಳ್ಳಿ, ಎಚ್.ಎಂ.ಈಶ್ವರಪ್ಪ, ಬಸವರಾಜ ನೆಗಳೂರ, ರಾಜೇಶ್ವರಿ ಮೈದೂರ, ವಸಂತಲಕ್ಷ್ಮೀ ಘಂಟಿ, ಅಕ್ಬರಲಿ ಹುಬ್ಬಳ್ಳಿ, ಮಹಾದೇವಪ್ಪ ಇಟಗಿ, ಗ್ರಾಮಸ್ಥರು, ಇತರರು ಹಾಜರಿದ್ದರು.
ಸಂಘ ಸ್ಥಾಪನೆ :
ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಿಂದ ಹಳೆಯ ವಿದ್ಯಾರ್ಥಿಗಳ ಸಂಘ ಸ್ಥಾಪನೆಯಾಗಿದೆ. ಸಂಘದ ಅಧ್ಯಕ್ಷರಾಗಿ ನಿಂಗನಗೌಡ ಪಾಟೀಲ ಆಯ್ಕೆಯಾಗಿದ್ದಾರೆ.