More

    ಜಿಲ್ಲೆಗೆ ಶೀಘ್ರವೇ 53 ಹೊಸ ಬಸ್; ಶಾಸಕ ರುದ್ರಪ್ಪ ಲಮಾಣಿ ಹೇಳಿಕೆ; ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರಿಗೆ ಸಮಸ್ಯೆ ಪ್ರತಿಧ್ವನಿ

    ಹಾವೇರಿ: ತಾಲೂಕಿನ ವಿವಿಧ ಭಾಗಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಂಚಾರಕ್ಕೆ ತೊಂದರೆಯಾಗುತ್ತಿರುವ ಕಾರಣ ವಿವಿಧ ಮಾರ್ಗಗಳಲ್ಲಿ ಬಸ್ ಸಂಚಾರಕ್ಕೆ ಸಾರ್ವಜನಿಕರು ಬೇಡಿಕೆ ಸಲ್ಲಿಸಿದ್ದಾರೆ. ಬೇಡಿಕೆ ಇರುವ ಮಾರ್ಗಗಳಲ್ಲಿ ಗ್ರಾಮಗಳಲ್ಲಿ ಕೂಡಲೇ ಬಸ್ ಸಂಚಾರ ಆರಂಭಿಸಬೇಕು ಎಂದು ಶಾಸಕ ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ವಾಕರಸಾ ಸಂಸ್ಥೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
    ನಗರದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಗೆ ಈಗಾಗಲೇ 53 ಹೊಸ ಬಸ್‌ಗಳನ್ನು ನೀಡಲಾಗಿದೆ. ಇನ್ನೂ ಹೆಚ್ಚಿನ ಬಸ್ ನೀಡಲು ಕ್ರಮವಹಿಸಲಾಗುವುದು. ಗಣಜೂರ-ನಾಗೇಂದ್ರಮಟ್ಟಿ, ಕರ್ಜಗಿ-ರಾಮಾಪೂರ, ಸವಣೂರ-ತಿಮ್ಮಾಪೂರ ಮಾರ್ಗವಾಗಿ ಬಸ್ ಸಂಚಾರಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಈ ಬಗ್ಗೆ ಕ್ರಮ ಜರುಗಿಸಬೇಕು. ವಸತಿ ನಿಲಯಗಳು ಇರುವ ಸ್ಥಳಗಳಲ್ಲಿ ಬಸ್ ನಿಲುಗಡೆ ಮಾಡಬೇಕು ಎಂದು ಸೂಚನೆ ನೀಡಿದರು.
    ಡೆಂೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮನೆಗಳ ಸುತ್ತಮುತ್ತ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಟೈರ್, ಒಡೆದ ತೆಂಗಿನ ಚಿಪ್ಪುನಂತಹ ತ್ಯಾಜ್ಯಗಳಲ್ಲಿ ನೀರು ನಿಲ್ಲದಂತೆ ಜಾಗೃತಿ ವಹಿಸಲು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಜ್ವರದ ಲಕ್ಷಣಗಳು ಕಂಡುಬಂದರೆ ಕೂಡಲೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲು ತಿಳಿಸಬೇಕು. ಸೊಳ್ಳೆ ಉತ್ಪತ್ತಿ ತಾಣಗಳನ್ನು ಗುರುತಿಸಿ ಫಾಗಿಂಗ್ ಮಾಡಿಸಬೇಕು ಎಂದು ನಗರಸಭೆ ಪೌರಾಯುಕ್ತರಿಗೆ ಹಾಗೂ ತಹಸೀಲ್ದಾರರಿಗೆ ಸೂಚಿಸಿದರು.
    ಸಾರ್ವಜನಿಕರು ಅಹವಾಲುಗಳನ್ನು ಸಿಎಂವರೆಗೆ ತೆಗೆದುಕೊಂಡು ಹೋಗುವುದನ್ನು ತಪ್ಪಿಸಲು ರಾಜ್ಯಾದ್ಯಂತ ಜನ್ಪಸಂದನ ನಡೆಸಲಾಗುತ್ತಿದೆ. ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಹಂತದಲ್ಲಿನ ಸಮಸ್ಯೆಗಳಲ್ಲಿ ಅಲ್ಲೇ ಪರಿಹರಿಸಿದರೆ ಸಾರ್ವಜನಿಕರು ಜನಪ್ರತಿನಿಧಿಗಳ ಹತ್ತಿರ ಬರುವುದಿಲ್ಲ. ಇದರಿಂದ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂದರು.
    ಹೊಲಗಳ ದಾರಿ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಕಾನೂನು ತಿದ್ದುಪಡಿ ಮಾಡಲು ಸರ್ಕಾರದ ಉಪ ಕಾರ್ಯದರ್ಶಿಗಳೊಂದಿಗೆ ಈಗಾಗಲೇ ಚರ್ಚಿಸಿದ್ದೇನೆ. ಬರುವ ದಿನಗಳಲ್ಲಿ ಹೊಲಗಳ ದಾರಿ ಸಮಸ್ಯೆಗೆ ಪರಿಹಾರ ನೀಡಲು ಪ್ರಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದರು.
    ಮನೆಹಾನಿ ಪರಿಹಾರ, ವಸತಿ ನಿಲಯ, ಇ-ಸ್ವತ್ತು, ಪೊಲೀಸ್ ವಸತಿ ಗೃಹ ಸಮಸ್ಯೆ, ಕೋಣನತಂಬಿಗಿಯಲ್ಲಿ ಮೊರಾರ್ಜಿ ಶಾಲೆ ಆರಂಭಕ್ಕೆ ಮನವಿ ಸೇರಿದಂತೆ ವಿವಿಧ ದೂರುಗಳು ಸಲ್ಲಿಕೆಯಾಗಿದ್ದು, ಸಮಸ್ಯೆಗಳನ್ನು ಆದ್ಯತೆಗೆ ಮೇರೆಗೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
    ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಮಾತನಾಡಿ, ಬಸ್ ಸಂಚಾರ, ನಿಲುಗಡೆ ಬೇಡಿಕೆ ಕುರಿತು ಸಮೀಕ್ಷೆ ನಡೆಸಿ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸಬೇಕು. ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ನಿಗದಿತ ಸಮಯದೊಳಗೆ ಮನೆ ನಿರ್ಮಾಣ ಮಾಡದ ಫಲಾನುಭವಿಗಳ ಮನೆಹಾನಿ ಪರಿಹಾರ ಬ್ಲಾಕ್ ಆಗಿದ್ದು, ಅಂತಹ ಫಲಾನುಭವಿಗಳು ಜಿಪಿಎಸ್ ಫೋಟೋ ನೀಡಿದರೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಇಲ್ಲಿ ಸ್ವೀಕೃತವಾದ ಅರ್ಜಿಗಳನ್ನು 15 ದಿನಗಳಲ್ಲಿ ಇರ್ತ್ಯಪಡಿಸಬೇಕು. ಒಟ್ಟಾರೆ ಅಧಿಕಾರಿಗಳು ಚುರುಕಿನಂದ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
    ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ, ಉಪವಿಭಾಗಾಧಿಕಾರಿ ಎಚ್.ಬಿ.ಚನ್ನಪ್ಪ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಮಮತಾ ಹೊಸಗೌಡ್ರ, ತಹಸೀಲ್ದಾರ್ ಜಿ.ಶಂಕರ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಭರತ ಹೆಗಡೆ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
    ವಸತಿ ಕಾಲೇಜ್ ಸ್ಥಳಾಂತರ
    33 ಕೋಟಿ ರೂ. ವೆಚ್ಚದಲ್ಲಿ ಕಳ್ಳಿಹಾಳ ಗ್ರಾಮದ ಗುಡ್ಡದಲ್ಲಿ ನಿರ್ಮಿಸಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ವಸತಿಯುತ ಕಾಲೇಜು ಕಟ್ಟಡದಲ್ಲಿ ಪ್ರಸಕ್ತ ವರ್ಷದಿಂದ ತರಗತಿಗಳು ಹಾಗೂ ವಸತಿ ನಿಲಯ ಆರಂಭಿಸಬೇಕು ಎಂದು ಶಾಸಕ ರುದ್ರಪ್ಪ ಲಮಾಣಿ ಅಧಿಕಾರಿಗಳಿಗೆ ತಿಳಿಸಿದರು.
    ಕೇವಲ ಒಂಭತ್ತು ಅರ್ಜಿ
    ಜನಸ್ಪಂದನ ಸಮಾರಂಭದಲ್ಲಿ ಕೇವಲ ಒಂಭತ್ತು ಅರ್ಜಿಗಳು ಸಲ್ಲಿಕೆಯಾದವು. ಕಂದಾಯ ಇಲಾಖೆ-6, ಸಮಾಜ ಕಲ್ಯಾಣ ಇಲಾಖೆ, ತಾಲೂಕು ಪಂಚಾಯಿತಿ ಹಾಗೂ ನಗರಸಭೆಯ ತಲಾ ಒಂದು ಅರ್ಜಿಗಳು ಸ್ವೀಕೃತವಾಗಿವೆ.

    See also  ಗರ್ಭಿಣಿಯರು, ಮಕ್ಕಳು ತಪ್ಪದೇ ಲಸಿಕೆ ಹಾಕಿಸಿಕೊಳ್ಳಿ; ಡಿಸಿ ರಘುನಂದನ ಮೂರ್ತಿ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts