More

  ಗ್ರಾಪಂ ಗದ್ದುಗೆ ಏರಲು ಹರಸಾಹಸ; ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಶುರು

  ಕೇಶವಮೂರ್ತಿ ವಿ.ಬಿ. ಹಾವೇರಿ

  ವಿಧಾನಸಭೆ ಚುನಾವಣೆ, ಸರ್ಕಾರ ರಚನೆ ಕಸರತ್ತು ಮುಗಿಯುತ್ತಿದ್ದಂತೆ ಗ್ರಾಮ ಪಂಚಾಯಿತಿ ಮಿನಿ ರಾಜಕೀಯ ಸಮರ ಗರಿಗೆದರಿದೆ. ಗ್ರಾಮ ಪಂಚಾಯಿತಿಯಲ್ಲಿ ಎರಡನೇ ಅವಧಿಯ ಗದ್ದುಗೆ ಏರಲು ಹರಸಾಹಸ ಶುರುವಾಗಿದೆ. ಜಿಲ್ಲೆಯ ಎಂಟು ತಾಲೂಕುಗಳ 223 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸದ್ಯದಲ್ಲೇ ಚುನಾವಣೆ ನಡೆಯಲಿದೆ. ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಗ್ರಾಪಂ ಗದ್ದುಗೆ ಏರಲು ರಣತಂತ್ರ ಹೆಣೆಯುತ್ತಿವೆ. ಗ್ರಾಪಂ ಗದ್ದುಗೆ ಸಿಕ್ಕರೆ ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಲು, ಹೆಚ್ಚು ಮತಗಳನ್ನು ಸೆಳೆಯಲು ಸಾಧ್ಯವಾಗುತ್ತದೆ ಎಂಬ ಲೆಕ್ಕಾಚಾರ ರಾಜಕೀಯ ಪಕ್ಷಗಳದ್ದಾಗಿದೆ. ಈ ಹಿನ್ನೆಲೆಯಲ್ಲಿ ಲಾಭ- ನಷ್ಟದ ಲೆಕ್ಕಾಚಾರ ಜೋರಾಗಿಯೇ ನಡೆದಿದೆ. ಗ್ರಾಪಂ ಚುನಾವಣೆ ರಾಜಕೀಯ ಪಕ್ಷಗಳ ಹೊರತಾಗಿದ್ದರೂ ಕೂಡ ಪರೋಕ್ಷವಾಗಿ ರಾಜಕೀಯ ಪಕ್ಷಗಳು ಇಲ್ಲಿ ಪ್ರತಿಷ್ಠಯ ಪೈಪೋಟಿ ನಡೆಸುತ್ತವೆ. ಮೊದಲ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ಕೈತಪ್ಪಿದವರು ಈ ಬಾರಿ ಪ್ರಯತ್ನಿಸುತ್ತಿದ್ದಾರೆ. ಮೊದಲ ಅವಧಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಈ ಬಾರಿ ಕಾಂಗ್ರೆಸ್ ಸರ್ಕಾರವಿದೆ. ಹಾಗಾಗಿ, ಸಾಮಾನ್ಯವಾಗಿ ಅಧಿಕಾರದಲ್ಲಿ ಇರುವ ಪಕ್ಷದ ಕಡೆಗೆ ಗ್ರಾಪಂ ಸದಸ್ಯರು ಹೆಚ್ಚು ಒಲವು ತೋರುವುದು ಸಾಮಾನ್ಯ. ಈ ಬಾರಿ ಸದಸ್ಯರು ಯಾವ ಕಡೆ ಒಲವು ತೋರುತ್ತಾರೆ ಎಂಬುದು ಚುನಾವಣೆ ಬಳಿಕ ಗೊತ್ತಾಗಲಿದೆ. ಈಗಾಗಲೇ 223 ಗ್ರಾಪಂಗಳ ಸದಸ್ಯರ ಸಮ್ಮುಖದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪಟ್ಟಿ ಪ್ರಕಟಿಸಲಾಗಿದೆ. ಜುಲೈ 31ರ ಒಳಗಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಆಗಬೇಕಿದೆ. ಜು.25ರಿಂದ 30ರ ಒಳಗಾಗಿ ಚುನಾವಣೆ ನಡೆಯಲಿವೆ. ಇದಕ್ಕಾಗಿ ಜಿಲ್ಲಾಧಿಕಾರಿಯವರು ಸಕಲ ಸಿದ್ಧತೆ ನಡೆಸಿದ್ದಾರೆ. ತಹಶೀಲ್ದಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಚುನಾವಣೆಗೆ ನೇಮಿಸಿದ್ದಾರೆ. ಚುನಾವಣೆ ದಿನಕ್ಕಾಗಿ ಸದಸ್ಯರಲ್ಲಿ ದಿನಗಣನೆ ಶುರುವಾಗಿದೆ. ಬಾಕ್ಸ್ ಸ್ಥಳೀಯ ಶಾಸಕರ ಒಲವು ತಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರಿಗೆ ಅಧಿಕಾರ ವಹಿಸುವ ನಿಟ್ಟಿನಲ್ಲಿ ಹಾಗೂ ಗ್ರಾಪಂಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಹಾಲಿ ಮತ್ತು ಮಾಜಿ ಶಾಸಕರು, ಪಕ್ಷದ ಮುಖಂಡರು ಮುಂದಾಗಿದ್ದಾರೆ. ಸದ್ಯ ಅಧಿವೇಶನದಲ್ಲಿ ಶಾಸಕರು ಬಿಜಿಯಾಗಿದ್ದು, ಅಧಿವೇಶನದಿಂದ ವಾಪಸಾದ ಕೂಡಲೇ ಈ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯಲಿವೆ ಎನ್ನಲಾಗುತ್ತಿದೆ. ಬಾಕ್ಸ್ ರೆಸಾರ್ಟ್ ರಾಜಕೀಯ ಕಳೆದ ವರ್ಷ ದೇವರಗುಡ್ಡ ಗ್ರಾಪಂನ ಕೆಲ ಸದಸ್ಯರನ್ನು ರೆಸಾರ್ಟ್‌ನಲ್ಲಿ ಇರಿಸಿದ್ದು, ನಂತರ ವಿಮಾನದಲ್ಲಿ ಬಂದಿಳಿದ ಸದಸ್ಯರು ಅಧ್ಯಕ್ಷರನ್ನು ಆಯ್ಕೆ ಮಾಡಿದ್ದು ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು. ರೆಸಾರ್ಟ್ ರಾಜಕೀಯ ಮತ್ತೆ ಸದ್ದು ಮಾಡುವ ಸಂಭವವಿದೆ. ಮ್ಯಾಜಿಕ್ ಸಂಖ್ಯೆಗೆ ಅಗತ್ಯವಿರುವ ಸದಸ್ಯರನ್ನು ಈಗಾಗಲೇ ಕೆಲವರು ಹೈಜಾಕ್ ಮಾಡಿಕೊಂಡು ಗೌಪ್ಯ ಸ್ಥಳಕ್ಕೆ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

  ವಿವಿಧ ಗ್ರಾಮಗಳಲ್ಲಿ ಉಪ ಚುನಾವಣೆ
  ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಜು.23ರಂದು ಉಪ ಚುನಾಚಣೆ ನಡೆಯಲಿದೆ. ರಾಣೆಬೆನ್ನೂರ ತಾಲೂಕು ಅಂತರವಳ್ಳಿ ಗ್ರಾಪಂ ವ್ಯಾಪ್ತಿಯ ಆಲದಕಟ್ಟಿ ಹಾಗೂ ಬೇಲೂರ ಗ್ರಾ.ಪಂ. ವ್ಯಾಪ್ತಿಯ ಹೀಲದಹಳ್ಳಿ, ಸವಣೂರ ತಾಲೂಕಿನ ಚಿಲ್ಲೂರಬಡ್ನಿ ಗ್ರಾ.ಪಂ. ವ್ಯಾಪ್ತಿಯ ಚಿಲ್ಲೂರಬಡ್ನಿ ಕ್ಷೇತ್ರ, ಕುರುಬರಮಲ್ಲೂರ ಗ್ರಾ.ಪಂ. ವ್ಯಾಪ್ತಿಯ ಬರದೂರ ಹಾಗೂ ಹಿರೇಮಕರಳಿಹಳ್ಳಿ ಗ್ರಾ.ಪಂ.ನ ಹಿರೇಮರಳಿಹಳ್ಳಿ ಕ್ಷೇತ್ರದ ತಲಾ ಒಂದು ಸ್ಥಾನಕ್ಕೆ ಉಪ ಚುನಾವಣೆ ಜರುಗಲಿದೆ. ಜು.26ರಂದು ಬೆಳಗ್ಗೆ 8 ಗಂಟೆಯಿಂದ ಆಯಾ ತಾಲೂಕು ಕೇಂದ್ರದಲ್ಲಿ ಮತ ಎಣಿಕೆ ನಡೆಸುವ ಕುರಿತು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅಧಿಸೂಚನೆ ಹೊರಡಿಸಿದ್ದಾರೆ.

  ಕೋಟ್
  ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಚುನಾವಣೆಗೆ ನೇಮಿಸಿದ ಅಧಿಕಾರಿಗಳಿಗೆ ಜು.15ರಂದು ತರಬೇತಿ ನಡೆಯಲಿದೆ. ಒಬ್ಬ ಅಧಿಕಾರಿಗೆ ಮೂರು ಪಂಚಾಯಿತಿಯ ಚುನಾವಣೆ ಹೊಣೆ ನೀಡಲಾಗಿದೆ. ಜು.25ರಿಂದ 30ರ ಒಳಗಾಗಿ ಚುನಾವಣೆ ನಡೆಯುವ ಸಾಧ್ಯತೆ ಇದೆ.
  ಪೂಜಾರ ವೀರಮಲ್ಲಪ್ಪ, ಅಪರ ಜಿಲ್ಲಾಧಿಕಾರಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts