More

    ಖಾಸಗಿ ಕಂಪನಿಗಳಿಗೆ ಕಡಿವಾಣ ಹಾಕಿ; ಜಿಲ್ಲಾಡಳಿತಕ್ಕೆ ರೈತ ಮುಖಂಡರ ಒತ್ತಾಯ

    ಹಾವೇರಿ: ಕಳೆದ ವರ್ಷದಂತೆ ಈ ವರ್ಷ ಬೀಜ-ಗೊಬ್ಬರದ ಅಭಾವವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಖಾಸಗಿ ಕಂಪನಿಗಳು ಇಳುವರಿ ಕುರಿತಂತೆ ಆಕರ್ಷಕ ಜಾಹೀರಾತು ನೀಡಿ ರೈತರಿಗೆ ಮೋಸ ಮಾಡುವುದನ್ನು ತಡೆಗಟ್ಟಬೇಕು ಎಂದು ರೈತರು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅವರನ್ನು ಒತ್ತಾಯಿಸಿದರು.
    ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮುಂಗಾರು ಹಂಗಾಮಿನ ಬಿತ್ತನೆ ಪೂರ್ವ ಸಿದ್ಧತೆ ಕುರಿತು ಕೃಷಿ ಅಧಿಕಾರಿಗಳು, ಹಾವೇರಿ ಹಾಗೂ ಬ್ಯಾಡಗಿ ತಾಲೂಕಿನ ರೈತ ಮುಖಂಡರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ರೈತ ಮುಖಂಡರು ತಮ್ಮ ಅಹವಾಲುಗಳನ್ನು ಡಿಸಿ ಅವರ ಗಮನಕ್ಕೆ ತಂದರು
    ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರ ವಸೂಲಿ ಮಾಡುವ ಹಾಗೂ ರೈತರಿಗೆ ಬೇಕಾದ ಗೊಬ್ಬರ ಕೊಡದೆ ಇತರೆ ಗೊಬ್ಬರ ಲಿಂಕ್ ಮಾಡಿದರೆ ಮಾತ್ರ ಕೊಡುವುದಾಗಿ ಹೇಳುವ ಮಾರಾಟಗಾರರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ರೈತರಿಗೆ ಉಂಟಾಗುವ ತೊಂದರೆ ಗಮನಕ್ಕೆ ತಂದಾಗ ತಕ್ಷಣ ಪರಿಹರಿಸಬೇಕು. ನಮ್ಮ ಜಿಲ್ಲೆಯ ಹವಾಮಾನ ಹಾಗೂ ಮಣ್ಣಿನ ಗುಣಕ್ಕೆ ಸೂಕ್ತವಾದ ಬೀಜ ಮಾರಾಟಕ್ಕೆ ಕ್ರಮ ವಹಿಸಬೇಕು. ಬೆಳೆ ವಿಮೆ ಕಂಪನಿಗಳು ಜಿಲ್ಲಾ ಹಾಗೂ ತಾಲೂಕಾವಾರು ಕಚೇರಿ ತೆರೆಯುವಂತೆ ಸೂಚಿಸಬೇಕು. ಬೆಳೆವಿಮೆ ಕಂತು ತುಂಬುವಂತೆ ರೈತರಿಗೆ ಹೆಚ್ಚಿನ ಮಾಹಿತಿ ನೀಡಬೇಕು. ಗೊಬ್ಬರ ಹಾಗೂ ಬೀಜಗಳು ಸ್ಥಳೀಯವಾಗಿ ಲಭ್ಯವಾಗುವಂತೆ ಮಾರಾಟ ಪಾಯಿಂಟ್‌ಗಳನ್ನು ಆರಂಭಿಸಬೇಕು ಎಂದು ಮನವಿ ಮಾಡಿಕೊಂಡರು.
    ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಮಾತನಾಡಿ, ಮುಂಗಾರು ಹಂಗಾಮಿಗೆ ಬೀಜ- ಗೊಬ್ಬರದ ಕೊರತೆಯಾಗದಂತೆ ಕೃಷಿ ಇಲಾಖೆಯಿಂದ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಯಾವುದೇ ಭಾಗದಲ್ಲಿ ಬೀಜ-ಗೊಬ್ಬರ ಸಮಸ್ಯೆ ಉಂಟಾದರೆ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಗಮನಕ್ಕೆ ತನ್ನಿ. ತಕ್ಷಣ ಸ್ಪಂದಿಸಿ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
    ಜಿಲ್ಲೆಯ ಕೃಷಿ ಉತ್ಪಾದನೆ ಮೌಲ್ಯವರ್ಧನೆ ನೀಡುವ ನಿಟ್ಟಿನಲ್ಲಿ ರೈತ ಮುಖಂಡರುಗಳು ಬೆಳೆಗಳ ಆಯ್ಕೆ ಕುರಿತಂತೆ ಮಾಹಿತಿ ನೀಡಿದರೆ ಸರ್ಕಾರದ ವಿವಿಧ ಯೋಜನೆಗಳಡಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಅಗತ್ಯವಾದ ಅನುದಾನ ಹಾಗೂ ಜಮೀನು ಒದಗಿಸಿ ದೇಶ ಮತ್ತು ವಿದೇಶ ಮಾರುಕಟ್ಟೆ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುವುದು. ಬೆಳೆ ವಿಮೆ-ಬೆಳೆ ಪರಿಹಾರ ಪಾವತಿಯ ಕುರಿತಂತೆ ಯಾವುದೇ ನಿರ್ಧಿಷ್ಟ ಸಮಸ್ಯೆಗಳಿದ್ದಲ್ಲಿ ದಾಖಲೆ ಸಹಿತ ಮಾಹಿತಿ ಸಲ್ಲಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.
    ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, ಪ್ರತಿ ಎಕರೆಗೆ ಕೃಷಿ ವಿವಿ ನಿಗದಿಪಡಿಸಿದ ಪ್ರಮಾಣದಲ್ಲಿ ಬಿತ್ತನೆ ಬೀಜ ನೀಡಲಾಗುವುದು. ಡೀಲರ್‌ಗಳು ರೈತರು ಕೇಳಿದ ಗೊಬ್ಬರದ ಜತೆಗೆ ಬೇರೆ ಗೊಬ್ಬರ ಹಾಗೂ ಔಷಧ ಲಿಂಕ್ ಮಾಡಿ ಬಲವಂತವಾಗಿ ಖರೀದಿಸಲು ಷರತ್ತು ವಿಧಿಸಿದರೆ ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ರಸಗೊಬ್ಬರದ ದಾಸ್ತಾನು ಕುರಿತಂತೆ ಮಾರಾಟ ದರ, ದಾಸ್ತಾನು ವಿವರಗಳ ಫಲಕಗಳನ್ನು ಪ್ರದರ್ಶಿಸಲು ಮಾರಾಟಗಾರರಿಗೆ ಈಗಾಗಲೇ ಸೂಚಿಸಲಾಗಿದೆ. ಸೊಸೈಟಿಗಳ ಎಫ್‌ಪಿಒಗಳ ಮೂಲಕ ಗೊಬ್ಬರ ಮಾರಾಟಕ್ಕೆ ಆದ್ಯತೆ ನೀಡಲಾಗುವುದು, ನಂತರ ಡೀಲರ್‌ಗಳಿಗೆ ನೀಡುತ್ತೇವೆ. ಯಾವುದೇ ಸೊಸೈಟಿಗಳು ಗೊಬ್ಬರ ಮಾರಾಟಕ್ಕೆ ಲೈಸನ್ಸ್ ಪಡೆಯಲು ಮುಂದೆ ಬಂದರೆ ತಕ್ಷಣ ಪರವಾನಿಗೆ ನೀಡಲಾಗುವುದು ಎಂದರು.
    ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ, ಉಪ ವಿಭಾಗಾಧಿಕಾರಿ ನಾರಾಯಣರೆಡ್ಡಿ ಕನಕರೆಡ್ಡಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಇಬ್ರಾಹಿಂ ದೊಡ್ಡಮನಿ, ಬ್ಯಾಡಗಿ ಮತ್ತು ಹಾವೇರಿ ತಾಲೂಕಿನ ಕೃಷಿ ಇಲಾಖೆ ಉಪನಿರ್ದೇಶಕರು, ಸಹಾಯಕ ನಿರ್ದೇಶಕರು, ತೋಟಗಾರಿಕಾ ಇಲಾಖಾ ಅಧಿಕಾರಿಗಳು, ಅವಳಿ ತಾಲೂಕಿನ ರೈತ ಮುಖಂಡರು ಸಂವಾದಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts