More

  ರಸ್ತೆಗೆ ಹಿಡಿ ಮಣ್ಣು ಹಾಕಲೂ ಆಗುತ್ತಿಲ್ಲ; ರಾಜ್ಯದಲ್ಲಿ ಅಭಿವೃದ್ಧಿ ಸ್ತಬ್ಧ; ಮಾಜಿ ಸಿಎಂ ಬೊಮ್ಮಾಯಿ ಲೇವಡಿ

  ಹಾವೇರಿ: ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಸ್ತಬ್ಧವಾಗಿವೆ. ಅಭಿವೃದ್ಧಿಯ ಯಾವುದೇ ಲಕ್ಷಣಗಳೂ ಕಾಣಿಸುತ್ತಿಲ್ಲ. ರಸ್ತೆಗೆ ಹಿಡಿ ಮಣ್ಣು ಹಾಕುವುದಕ್ಕೂ ರಾಜ್ಯ ಸರ್ಕಾರಕ್ಕೆ ಶಕ್ತಿ ಇಲ್ಲದಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದರು.
  ಸೋಮವಾರ ಇಲ್ಲಿನ ಅಶ್ವಿನಿನಗರದ ಶ್ರೀ ಶಿರಡಿ ಸಾಯಿಬಾಬಾ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು. ಸರ್ಕಾರಕ್ಕೆ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಬಹುಮತ ಪಡೆದ ಸರ್ಕಾರ ಯಾವ ರೀತಿ ಆಡಳಿತ ಮಾಡಬೇಕು ಆ ಲಕ್ಷಣಗಳು ಕಾಣಿಸುತ್ತಿಲ್ಲ. ರಾಜ್ಯದಲ್ಲಿ ಅಪ್ರಬುದ್ಧವಾದ ಆಡಳಿತ ನಡೆಯುತ್ತಿದೆ. ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಇಲಾಖೆಗಳಲ್ಲಿ ಕಮಿಷನ್ ದಂಧೆ ಹೆಚ್ಚಾಗುತ್ತಿದೆ ಎಂದರು.
  ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ನಡುವಿನ ಪೈಪೋಟಿ ಜನರ ಹಾಗೂ ಅಡಳಿತದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರಿದೆ. ಕೊಲೆ, ಸುಲಿಗೆ ಹೆಚ್ಚಾಗುತ್ತಿವೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಜನರ ನಿರೀಕ್ಷೆ ಹುಸಿಯಾಗಿದೆ. ದುಸ್ವಪ್ನವಾಗಿ ಕಾಡುವಂತಾಗಿದೆ ಎಂದು ಟೀಕಿಸಿದರು.
  ರೈತ ವಿರೋಧಿ ಸರ್ಕಾರ
  ರೈತರ ಆತ್ಮಹತ್ಯೆ ಅಷ್ಟು ಪ್ರಮಾಣದಲ್ಲಿ ಆಗಿಲ್ಲ ಎಂಬುದನ್ನು ಕೃಷಿ ಸಚಿವರು ಸುಳ್ಳು ಹೇಳಿಕೆ ನೀಡಿದ್ದರು. ಈಗ ಸ್ಪಷ್ಟವಾಗುತ್ತಿದೆ. ರಾಜ್ಯದಲ್ಲಿ 50ಕ್ಕಿಂತ ಹೆಚ್ಚು ಆತ್ಮಹತ್ಯೆ ಆದರೆ, ಅದರಲ್ಲಿ ಅರ್ಧದಷ್ಟು ಹಾವೇರಿ ಜಿಲ್ಲೆಯಲ್ಲಿ ಆಗಿದೆ. ಇದು ದೊಡ್ಡ ದುರಂತ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಲ್ಲಿಗೆ ಬಂದು ಹೋದರೂ ಯಾವುದೇ ಪ್ರಯೋಜನವಾಗಿಲ್ಲ. ರೈತರಿಗೆ ಆತ್ಮಸ್ಥೈರ್ಯ ಅಥವಾ ಸಹಕಾರ ಸರ್ಕಾರದಿಂದ ಆಗಿಲ್ಲ. ಬರಗಾಲ, ಎರಡು ಬಾರಿ ಬಿತ್ತನೆ ಮಾಡಿ ವಿಫಲವಾಗಿದ್ದು, ಸಾಲ ಸೌಲಭ್ಯ ಸಿಗದೇ ಇರುವುದರಿಂದ ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಈ ಸರ್ಕಾರ ಮಾನವೀಯತೆಯನ್ನೂ ಮರೆತಿರುವ ಸರ್ಕಾರ ಎಂದು ಬೊಮ್ಮಾಯಿ ಕುಟುಕಿದರು.
  ಸಮಾಧಾನ ಮಾಡುವ ಶಕ್ತಿ ನಮಗಿದೆ
  ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಹೋಗುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ಚುನಾವಣೆಯಲ್ಲಿ ಸೋತ ಹಿನ್ನೆಲೆ ಹಲವು ವಿಚಾರ ಹೊರಗೆ ಬರುತ್ತವೆ. ಸಮಾಧಾನ ಮಾಡುವ ಶಕ್ತಿ ನಮಗಿದೆ ಮಾಡುತ್ತೇವೆ. ಎಲ್ಲರೊಂದಿಗೂ ಕುಳಿತು ಚರ್ಚಿಸುತ್ತೇವೆ. ಈಗಾಗಲೇ ವರಿಷ್ಠರು ಇದರ ಬಗ್ಗೆ ಗಮನಿಸಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.
  ಗ್ಯಾರಂಟಿ ಕುರಿತು ಆತಂಕ
  ಐದು ಗ್ಯಾರಂಟಿ ಪೂರ್ಣಗೊಳಿಸುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ಈಗಾಗಲೇ ಸರ್ಕಾರಿ ನೌಕರರ ಸಂಬಳ ಸರಿಯಾಗಿ ಬರುತ್ತಿಲ್ಲ. ಎಲ್ಲ ಕಡೆ ಒಂದು ವಾರದಂತೆ ವಿಳಂಬ ಆಗುತ್ತಿದೆ. ಕರೆಂಟ್ ಬಿಲ್ ಹೆಚ್ಚು ಮಾಡಿದ್ದಾರೆ. ಆದರೆ, ಸರಿಯಾಗಿ ಕರೆಂಟ್ ಕೊಡುತ್ತಿಲ್ಲ. ಮುಂದಿನ ದಿನಗಳಲ್ಲಿ ನೀರಿನ ಕ್ಷಾಮ ಹಾಗೂ ವಿದ್ಯುತ್ ಕ್ಷಾಮವನ್ನು ರಾಜ್ಯ ಎದುರಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

  See also  ಸಂಘಟನೆ ಬಲಿಷ್ಠವಾದಾಗ ಸಮುದಾಯ ಅಭಿವೃದ್ಧಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts