More

  ಯುವಜನ ರಕ್ತದ ಕೊರತೆ ನೀಗಿಸಬೇಕು; ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ

  ಹಾವೇರಿ: ಮನುಷ್ಯನ ಜೀವ ಉಳಿಸಲು ಅಗತ್ಯವಾದ ರಕ್ತದ ಕೊರತೆಯನ್ನು ನೀಗಿಸಲು 18 ವರ್ಷ ಮೇಲ್ಪಟ್ಟ ಯುವಜನರು ರಕ್ತದಾನಕ್ಕೆ ಮುಂದಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ ಮನವಿ ಮಾಡಿದರು.
  ನಗರದ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಸಹಯೋಗದಲ್ಲಿ ‘ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ’ ನಿಮಿತ್ತ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
  ರಕ್ತದಾನದ ಮಹತ್ವ ಕುರಿತು ಅರಿವು ಮೂಡಿಸಲು ಶಾಲಾ-ಕಾಲೇಜು, ಸಂಘ-ಸಂಸ್ಥೆಗಳು, ಸಮಾಜ ಸೇವಕರು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
  ಜಿಲ್ಲಾ ಏಡ್ಸ್ ನಿಯಂತ್ರಣಾಧಿರಿ ಡಾ.ನೀಲೇಶ ಎಂ.ಎನ್. ಮಾತನಾಡಿ, 2005ರಿಂದ ವಿಶ್ವ ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆ ಆಚರಿಸಲಾಗುತ್ತಿದೆ. ಈ ವರ್ಷದ ಘೋಷ ವಾಕ್ಯವು ರಕ್ತ ನೀಡಿ, ಪ್ಲಾಸ್ಮಾ ನೀಡಿ, ಜೀವನ ಹಂಚಿಕೊಳ್ಳಿ, ಹೆಚ್ಚು ಹೆಚ್ಚು ಹಂಚಿಕೊಳ್ಳಿ ಎಂದು ಇರುತ್ತದೆ. ಆದ್ದರಿಂದ ಎಲ್ಲರೂ ಒಟ್ಟುಗೂಡಿ ನಮ್ಮ ಜಿಲ್ಲೆಯಲ್ಲಿ ರಕ್ತದ ಕೊರತೆಗಾಗಿ ಕಾರ್ಯ ನಿರ್ವಹಿಸೋಣ ಎಂದರು.
  ಕಾರ್ಯಕ್ರಮದಲ್ಲಿ ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಬಸವರಾಜ ತಳವಾರ, ಜಿಲ್ಲಾ ಸರ್ವೇಕ್ಷಣಾ ಘಟಕದ ಅಧಿಕಾರಿ ಡಾ.ಜಗದೀಶ ಪಾಟೀಲ, ಜಿಲ್ಲಾ ಎ.ಆರ್.ಟಿ ಕೇಂದ್ರದ ವೈದ್ಯಾಧಿಕಾರಿ ಡಾ.ವಿ.ಜಯಲಕ್ಷ್ಮೀ, ಜಿಲ್ಲಾ ಐಇಸಿ ಅಧಿಕಾರಿ ಚನ್ನಪ್ಪ ಲಮಾಣಿ ಹಾಗೂ ಜಿಲ್ಲೆಯ ಐಸಿಟಿಸಿ ಕೇಂದ್ರದ ಆಪ್ತ ಸಮಾಲೋಚಕರು, ಪ್ರಯೋಗ ಶಾಲಾ ತಂತ್ರಜ್ಞ ಅಧಿಕಾರಿಗಳು, ಹಾವೇರಿ ಸ್ಪಂದನಾ ಮಹಿಳಾ ಒಕ್ಕೂಟ, ಸಂಜೀವಿನಿ ನಗರ ಮತ್ತು ಗ್ರಾಮೀಣಾಭಿವೃದ್ದಿ ಸಮುದಾಯ ಸೇವಾ ಸಂಸ್ಥೆ, ಸಮರ್ಪಣಾ ಸಂಸ್ಥೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts