ಹಾವೇರಿ: ಮನುಷ್ಯ ದೈವಾಂಶ ಸಂಭೂತ ಎಂಬುದು ಭಾರತೀಯರ ನಂಬಿಕೆ. ಆ ದೈವಾಂಶ ತನ್ನಷ್ಟಕ್ಕೆ ಹೊರಗೆ ಬರಲ್ಲ. ಮನುಷ್ಯ ಹುಟ್ಟುವಾಗ ಪ್ರಾಣಿಯಂತೆ ಇರುತ್ತಾನೆ. ಸಂಸ್ಕಾರವನ್ನು ಒಪ್ಪಿಕೊಳ್ಳದವರು ಮೃಗ ಆಗುತ್ತಾರೆ. ಸಂಸ್ಕಾರ ಸ್ವೀಕರಿಸಿದವರು ದೈವಾಂಶ ಸಂಭೂತರಾಗುತ್ತಾರೆ. ಏನೂ ಅರಿಯದ ಮಗುವನ್ನು ರಾಷ್ಟ್ರೋತ್ಥಾನ ಶಾಲೆಗೆ ಸೇರಿಸಿ, ಆ ಮಗು ದೈವಾಂಶ ಸಂಭೂತ ಆಗುವುದು ಶತಸಿದ್ಧ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ ಹೇಳಿದರು.
ತಾಲೂಕಿನ ದೇವಿಹೊಸೂರ ಬಳಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಶಾಲೆಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 1965ರಲ್ಲಿ ರಾಷ್ಟ್ರೋತ್ಥಾನ ಪರಿಷತ್ ಆರಂಭವಾಯಿತು. ಹಾನಗಲ್ಲ ತಾಲೂಕು ಕೇಂದ್ರದಲ್ಲಿ ಮೇನಲ್ಲಿ ಕಟ್ಟಡ ಲೋಕಾರ್ಪಣೆ ಆಗಲಿದೆ. ರಾಷ್ಟ್ರೋತ್ಥಾನ ಶಾಲೆಗಳು ಆರಂಭವಾದ ಕೆಲವೇ ದಿನಗಳ ಪ್ರವರ್ದಮಾನಕ್ಕೆ ಬರುತ್ತವೆ. ಇದಕ್ಕೆ ಕಾರಣ ಶಾಲೆಗಳಲ್ಲಿನ ವಿಶ್ವಾಸಾರ್ಹತೆ. ರಾಷ್ಟ್ರೋತ್ಥಾನ ಇದ್ದಲ್ಲಿ ಭರವಸೆಗಳು ಈಡೇರುತ್ತವೆ. ಶಿಕ್ಷಣ ವ್ಯಾಪಾರ ಆಗಬಾರದು. ಧರ್ಮ ಆಗಬೇಕು. ಮಕ್ಕಳಲ್ಲಿನ ದೈವತ್ವವನ್ನು ಹೊರತೆಗೆಯಬೇಕು ಎಂದರು.
ರಾಷ್ಟ್ರೋತ್ಥಾನ ಪರಿಷತ್ ಪ್ರಧಾನ ಕಾರ್ಯದರ್ಶಿ ದಿನೇಶ ಹೆಗ್ಡೆ ಮಾತನಾಡಿ, ರಾಷ್ಟ್ರೋತ್ಥಾನ ಪರಿಷತ್ ಸಾಹಿತ್ಯ, ಸೇವೆ, ಶಿಕ್ಷಣ ಮತ್ತು ಆರೋಗ್ಯ ನಾಲ್ಕು ವಿಭಾಗದಲ್ಲಿ ಕೆಲಸ ಮಾಡುತ್ತಿದೆ. ನಮ್ಮ ದೇಶದ ನೈಜ ಚರಿತ್ರೆ, ಪರಂಪರೆ, ಸಂಸ್ಕೃತಿ, ಇತಿಹಾಸವನ್ನು ಸಮಾಜಕ್ಕೆ ಪರಿಚಯಿಸುವ ಉದ್ದೇಶದಿಂದ ರಾಷ್ಟ್ರೋತ್ಥಾನ ಪರಿಷತ್ ಆರಂಭವಾಗಿದೆ ಎಂದರು.
ಅಂಬಿಗರ ಚೌಡಯ್ಯ ಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಮಾತನಾಡಿ, ನಿಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿ ವಿದೇಶಕ್ಕೆ ಕಳುಹಿಸುತ್ತೀರಿ. ನೀವು ಸತ್ತರೂ ಅವರು ಬರುವುದಿಲ್ಲ. ಅಲ್ಲಿಂದಲೇ ಫೋನ್ ಪೇ ಮಾಡಿ ಕೈತೊಳೆದುಕೊಳ್ಳುತ್ತಾರೆ. ವಿದೇಶಿ ಸಂಸ್ಕೃತಿ ಪ್ರಭಾವದಿಂದ ಇಂದಿನ ಮಕ್ಕಳ ಬಟ್ಟೆ, ಶಿಕ್ಷಣ, ಗುರು- ಶಿಷ್ಯರ ಪದ್ದತಿಯಲ್ಲಿ ಬದಲಾವಣೆ ಆಗಿದೆ. ರಾಷ್ಟ್ರೋತ್ಥಾನ ಪರಿಷತ್ ಹಳೆಯ ಗತಕಾಲ ಮರುಕಳಿಸುವಂತೆ ಮಾಡುತ್ತಿದೆ. ಸಂಸ್ಕಾರಯುತವಾದ ಶಿಕ್ಷಣ ನೀಡುತ್ತಿದೆ ಎಂದರು.
ಸಮಾರಂಭದಲ್ಲಿ ನೆಗಳೂರಿನ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ, ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಅಗಡಿಯ ಗುರುಸಿದ್ಧ ಸ್ವಾಮೀಜಿ, ಹರಸೂರ ಬಣ್ಣದ ಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ, ಗೌರಿಮಠದ ಶಿವಯೋಗಿ ಶಿವಾಚಾರ್ಯರು, ಆನಂದವನದ ಗುರುದತ್ತ ಚಕ್ರವರ್ತಿಗಳು, ವಿಶ್ವನಾಥ ಚಕ್ರವರ್ತಿಗಳು, ಹೊಸರಿತ್ತಿಯ ಗುದ್ದಲೀ ಶಿವಯೋಗೀಶ್ವರ ಶ್ರೀಗಳು, ಪವನ ಬಹದ್ದೂರ ದೇಸಾಯಿ, ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.
ವ್ಯಕ್ತಿ ನಿರ್ಮಾಣ ಮಾಡುವ ಶಾಲೆ
ಪ್ರತಿ ಜಿಲ್ಲೆಯಲ್ಲಿ ರಾಷ್ಟ್ರೋತ್ಥಾನ ಶಾಲೆ ಆರಂಭಿಸಲಾಗುವುದು. ಹಾವೇರಿಯಲ್ಲಿ ಶಾಲೆ ಆರಂಭಿಸುವ ಹತ್ತು ವರ್ಷಗಳ ಕನಸು ಈಗ ನನಸಾಗುತ್ತಿದೆ. ಇದು ಪರಿಷತ್‌ನ 21ನೇ ಶಾಲೆ. ಎಲ್ಲ ಶಾಲೆಗಳಂತೆ ನಮ್ಮ ಶಾಲೆ ಅಲ್ಲ. ವ್ಯಕ್ತಿ ನಿರ್ಮಾಣ ಮಾಡುವ ಶಾಲೆ. ಜಿಲ್ಲೆಯಲ್ಲಿ ಈ ಶಾಲೆ ಮಾದರಿಯಾಗಲಿದೆ. ಜಿಲ್ಲೆಯ ಶಿಕ್ಷಕರಿಗೂ ತರಬೇತಿ ನೀಡಲಿದೆ. ಏಳು ಎಕರೆ ಜಾಗದಲ್ಲಿ ಮುಖ್ಯ ಕಟ್ಟಡ, ಪಾಠದ ಕೊಠಡಿಗಳು, ಆಟದ ಮೈದಾನ, ಹಾಸ್ಟೆಲ್, ಗ್ರಂಥಾಲಯ, ಲ್ಯಾಬ್, ಸಿಬ್ಬಂದಿ ವಸತಿ ನಿಲಯ, ಇತರ ಸೌಲಭ್ಯಗಳು ಇರಲಿವೆ. ಸಿಬಿಎಸ್‌ಸಿ ಪಠ್ಯಕ್ರಮದ ಎಲ್‌ಕೆಜಿಯಿಂದ ಪಿಯುಸಿವರೆಗೆ ಕಲಿಕೆ ನಡೆಯಲಿದೆ. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಈ ಶಾಲೆ ಆರಂಭವಾಗಲಿದೆ ಎಂದು ದಿನೇಶ ಹೆಗ್ಡೆ ಭರವಸೆ ನೀಡಿದರು.
ಕೋಟ್:
ಕಳೆದ 14-15 ವರ್ಷಗಳ ಹಿಂದೆ ಇದ್ದ ಇಂಡಿಯಾ ಈಗ ಭಾರತ ಆಗುತ್ತಿದೆ. ಭಾರತ್ ಮಾತಾಕಿ ಜೈ ಕೇವಲ ಆರ್‌ಎಸ್‌ಎಸ್, ಬಿಜೆಪಿಯಲ್ಲಿ ಮಾತ್ರ ಇತ್ತು. ಈಗ ಎಲ್ಲೆಡೆ ಮೊಳಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಯಾವ ದೇಶಕ್ಕೆ ಹೋದರೂ ಅಲ್ಲಿ ಭಾರತ ಮಾತೆಗೆ ಜೈಕಾರ ಹಾಕುತ್ತಾರೆ. ಅಂತಃಕರಣದಲ್ಲಿ ಭಾರತ ಆಗಬೇಕು. ಯಾರೂ ಇಂಡಿಯಾ ಎನ್ನಬೇಡಿ. ಆ ಹೆಸರು ದರಿದ್ರ. ಆ ಹೆಸರು ಇಟ್ಟುಕೊಂಡವರು ಚೂರು ಚೂರು ಆಗುತ್ತಿದ್ದಾರೆ.
– ಸು.ರಾಮಣ್ಣ, ಆರ್‌ಎಸ್‌ಎಸ್ ಪ್ರಚಾರಕ