ಜೀವ ಹಿಂಡುತ್ತಿದೆ ಡೇಂಜರ್ ಡೆಂಘೆ !; ಎರಡನೇ ಅಲೆಗೆ ಸುಸ್ತಾದ ರೋಗಿಗಳು; ಐದು ತಿಂಗಳಲ್ಲಿ ಬರೋಬ್ಬರಿ 162 ಪ್ರಕರಣ ಪತ್ತೆ

blank

ಕೇಶವಮೂರ್ತಿ ವಿ.ಬಿ. ಹಾವೇರಿ
ಜಿಲ್ಲೆಯಲ್ಲಿ ಕಳೆದ ವರ್ಷ ನಿಯಂತ್ರಣದಲ್ಲಿದ್ದ ಡೆಂಘೆ ಈ ವರ್ಷ ಅಪಾಯಕಾರಿ ಹಂತದತ್ತ ಸಾಗುತ್ತಿದೆ. 2024ರ ಜನವರಿಯಿಂದ ಮೇವರೆಗೆ ಜಿಲ್ಲೆಯಲ್ಲಿ ಬರೋಬ್ಬರಿ 162 ಪ್ರಕರಣಗಳು ಪತ್ತೆಯಾಗಿದ್ದು ಭಾರಿ ಆತಂಕಕ್ಕೆ ಕಾರಣವಾಗಿದೆ. ಕಳೆದ ವರ್ಷ ಈ ರೋಗಕ್ಕೆ ತುತ್ತಾಗಿದ್ದ ಕೆಲವರಲ್ಲಿ ಮತ್ತೊಮ್ಮೆ ಎರಡನೇ ಅಲೆ ಕಾಣಿಸಿಕೊಂಡು ಜೀವ ಹಿಂಡುತ್ತಿದೆ.
ಮಲೆನಾಡ ಸೆರಗು ಹಾನಗಲ್ಲ ತಾಲೂಕಿನಲ್ಲಿ ಡೆಂಘೆ ಪ್ರಮಾಣ ಭಾರಿ ಹೆಚ್ಚಳವಾಗುತ್ತಿದೆ. ಹಾನಗಲ್ಲ ತಾಲೂಕಿನಲ್ಲೇ ಐದು ತಿಂಗಳಲ್ಲಿ 69 ಪ್ರಕರಣಗಳು ಪತ್ತೆಯಾಗಿರುವುದು ಭಾರಿ ಆಘಾತಕಾರಿ ಅಂಶವಾಗಿದೆ. ಬ್ಯಾಡಗಿ ತಾಲೂಕಿನಲ್ಲಿ 30, ಹಿರೇಕೆರೂರ ತಾಲೂಕಿನಲ್ಲಿ 20, ರಾಣೆಬೆನ್ನೂರ ತಾಲೂಕಿನಲ್ಲಿ 18, ಹಾವೇರಿಯಲ್ಲಿ 10, ರಟ್ಟಿಹಳ್ಳಿಯಲ್ಲಿ 8, ಶಿಗ್ಗಾಂವಿಯಲ್ಲಿ 6, ಸವಣೂರಲ್ಲಿ 1 ಪ್ರಕರಣ ಪತ್ತೆಯಾಗಿದೆ. ಅದೃಷ್ಟವಶಾತ್ ಈವರೆಗೆ ಯಾವುದೇ ಸಾವಿನ ವರದಿಯಾಗಿಲ್ಲ.
ಕಳೆದ ವರ್ಷ ಡೆಂಘೆ ಟೈಪ್ 2 ರೋಗದ ಲಕ್ಷಣ ಜಿಲ್ಲೆಯಲ್ಲಿ ಕಂಡು ಬಂದಿತ್ತು. ಈ ವರ್ಷ ಡೆಂಘೆ ಟೈಪ್ 1 ಲಕ್ಷಣಗಳು ಜಿಲ್ಲೆಯಲ್ಲಿ ಕಂಡುಬಂದಿವೆ. ತಾಪಮಾನ ಏರುಪೇರಿನಿಂದ ಈ ಭಾಗದಲ್ಲಿ ಕೇಸ್‌ಗಳು ಹೆಚ್ಚಾಗುತ್ತಿವೆ. ಬರಗಾಲದ ಸಂದರ್ಭದಲ್ಲಿ ಕುಡಿಯುವ ನೀರಿನ ಕೊರತೆ ಹೆಚ್ಚಾಗಿದೆ. ಹಾಗಾಗಿ, ವಾರಕ್ಕೊಮ್ಮೆ, 15, 20 ದಿನಕ್ಕೊಮ್ಮೆ ಬರುವ ನೀರನ್ನೇ ಜನರು ನೀರಿನ ತೊಟ್ಟಿ, ಡ್ರಮ್, ಕೊಡ, ಬಕೆಟ್ ಮತ್ತಿತರ ವಸ್ತುಗಳಲ್ಲಿ ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ. ವಾರಗಟ್ಟಲೆ ನೀರನ್ನು ತೆರೆದು ಸಂಗ್ರಹಿಸಿಟ್ಟುಕೊಳ್ಳುವುದರಿಂದ ಅಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳು ಡೆಂಘೆ ಹರಡುತ್ತಿವೆ. ಕಳೆದ ವರ್ಷ ಡೆಂಘೆಗೆ ತುತ್ತಾದ 20ಕ್ಕೂ ಹೆಚ್ಚು ಜನರಿಗೆ ಮತ್ತೆ ಎರಡನೇ ಬಾರಿಗೆ ಡೆಂಘೆ ಪತ್ತೆಯಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ತಿಳಿ ನೀರಿನಲ್ಲಿ ಉತ್ಪತ್ತಿಯಾಗುವ ಈಡಿಸ್ ಈಜಿಪ್ಟ್ ಎಂಬ ಸೊಳ್ಳೆ ಕಚ್ಚುವುದರಿಂದ ಡೆಂಘೆ ರೋಗ ಕಾಣಿಸಿಕೊಳ್ಳುತ್ತದೆ. ಮನೆಯಲ್ಲೇ ಸಂಗ್ರಹಿಸಿ ಇಟ್ಟ ನೀರನಲ್ಲಿ ಈ ಸೊಳ್ಳೆಗಳು ಸೃಷ್ಟಿಯಾಗುತ್ತವೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳು, ಗರ್ಭಿಣಿಯರು, ವೃದ್ಧರು ಎಚ್ಚರಿಕೆ ವಹಿಸುವ ಅಗತ್ಯತೆ ಇದೆ.
ಜ್ವರ, ಲೋಬಿಪಿ, ಇತರ ಲಕ್ಷಣಗಳು
ಡೆಂಘೆ 1 ಮತ್ತು 2 ಟೈಪ್‌ಗಳ ಲಕ್ಷಣಗಳು ಬೇರೆ ಬೇರೆಯಾಗಿರುತ್ತದೆ. ಈ ಬಾರಿ ಕಾಣಿಸಿಕೊಂಡ ಟೈಪ್ 1 ಡೆಂಘೆಗೆ ತುತ್ತಾದವರಲ್ಲಿ ಜ್ವರ, ಕಣ್ಣಿನ ಹಿಂಭಾಗದಲ್ಲಿ ನೋವು, ಹೊಟ್ಟೆ ನೋವು, ಮೈಮೇಲೆ ಗುಳ್ಳೆಗಳು, ಲೋಬಿಪಿ, ಮತ್ತಿತರ ಲಕ್ಷಣಗಳು ಕಾಣಿಸುತ್ತಿವೆ. ಲಕ್ಷಣ ಇದ್ದವರು ನಿರ್ಲಕ್ಷೃ ವಹಿಸದೇ ಕೂಡಲೇ ಹತ್ತಿರದ ಆಸ್ಪತ್ರೆಗೆ ತೆರಳಿ ಅಗತ್ಯ ಚಿಕಿತ್ಸೆ ಪಡೆಯಬೇಕು ಎನ್ನುತ್ತಾರೆ ಡಾ.ಸರಿತಾ.

ಕೋಟ್:
ಗ್ರಾಮ, ನಗರದ ವಾರ್ಡ್‌ಗಳಲ್ಲಿ ಮನೆ ಮನೆ ಲಾರ್ವಾ ಸರ್ವೆ ಮಾಡಿಸಲಾಗುತ್ತಿದೆ. ಈ ಬಾರಿ ಡೆಂಘೆ
ಪರೀಕ್ಷೆಯನ್ನೂ ದುಪ್ಪಟ್ಟು ಮಾಡಲಾಗಿದೆ. ಈವರೆಗೆ 1,350 ಜನರ ರಕ್ತ ಪರೀಕ್ಷೆ ಮಾಡಲಾಗಿದೆ. ಡೆಂಘೆ ನಿಯಂತ್ರಣಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಲಭ್ಯವಿದೆ.
– ಡಾ.ಸರಿತಾ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ

ಕೋಟ್:
ಬರ, ಹವಾಮಾನ ವ್ಯತ್ಯಾಸ, ಇತರ ಕಾರಣದಿಂದ ಈ ವರ್ಷ ಡೆಂಘೆ
ಕೇಸ್‌ಗಳು ಹೆಚ್ಚಾಗಿವೆ. ಖಂಡಿತವಾಗಿ ಇದನ್ನು ನಿಯಂತ್ರಿಸುತ್ತೇವೆ. ಇದಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ. ಮನೆ ಸುತ್ತಮುತ್ತ, ಒಳಗೆ ಎಲ್ಲಿಯೂ ನೀರು ನಿಲ್ಲದಂತೆ ಎಚ್ಚರವಹಿಸಬೇಕು.
– ಡಾ.ಎಚ್.ಎಸ್.ರಾಘವೇಂದ್ರ, ಜಿಲ್ಲಾ ಆರೋಗ್ಯಾಧಿಕಾರಿ ಬಾಕ್ಸ್

ತಾಲೂಕುವಾರು ಅಂಕಿ-ಅಂಶ
ತಾಲೂಕು 2023 (ಜನವರಿ ಟು ಮೇ) 2024 (ಜನವರಿ ಟು ಮೇ)
ಹಾವೇರಿ 07 10
ಬ್ಯಾಡಗಿ 04 30
ರಾಣೆಬೆನ್ನೂರ 10 18
ಹಿರೇಕೆರೂರ 00 20
ರಟ್ಟಿಹಳ್ಳಿ 00 08
ಶಿಗ್ಗಾಂವಿ 02 06
ಸವಣೂರ 01 01
ಹಾನಗಲ್ಲ 01 69


ಒಟ್ಟು 24 162

Share This Article

ಉಪ್ಪಿನಕಾಯಿ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ | Health Tips

ಈ ವರ್ಷ ಗೂಗಲ್​ನಲ್ಲಿ ಅತಿ ಹೆಚ್ಚು ಹುಡುಕಿದ ಪಾಕವಿಧಾನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಇದರಲ್ಲಿ ಉಪ್ಪಿನಕಾಯಿ ಭಾರತದಲ್ಲಿ…

ಟಾಯ್ಲೆಟ್​​ನ ಕೊಳಕು ವಾಸನೆ, ಹಳದಿ ಕಲೆ ತೆಗೆದುಹಾಕುವುದೇಗೆ?; ಇಲ್ಲಿದೆ ಸಿಂಪಲ್​ ವಿಧಾನ | Tips

ಮನೆಯನ್ನು ಸ್ವಚ್ಛಗೊಳಿಸಲು ಮತ್ತು ಅಲಂಕರಿಸಲು ಜನರು ಶ್ರಮಿಸುತ್ತಾರೆ. ಹೊರಗಿನಿಂದ ಅವರ ಮನೆಯು ಸಾಕಷ್ಟು ಐಷಾರಾಮಿಯಾಗಿ ಕಾಣುತ್ತದೆ.…

ಚಳಿಗಾಲದಲ್ಲಿ ಬಿಸಿ ಚಹಾ ಮತ್ತು ಕಾಫಿ ಸೇವಿಸುತ್ತಿದ್ದೀರಾ; ಅಪಾಯ ತಪ್ಪಿದಲ್ಲ.. ಎಚ್ಚರದಿಂದಿರಿ | Health Tips

ಚಳಿಗಾಲ ಬಂದ ಕೂಡಲೆ ಟೀ, ಕಾಫಿ ಸೇವನೆ ಹೆಚ್ಚುತ್ತದೆ. ಈ ಬಿಸಿ ಪಾನೀಯವು ದೇಹಕ್ಕೆ ಶಾಖವನ್ನು…