More

  ಸವಣೂರಿನಲ್ಲಿ ಡಾ.ವಿ.ಕೃ.ಗೋಕಾಕರ ಜನ್ಮದಿನಾಚರಣೆ 9ರಂದು

  ಹಾವೇರಿ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ವಿ.ಕೃ.ಗೋಕಾಕರ ಜನ್ಮ ಸ್ಥಳ ಸವಣೂರಲ್ಲಿ ಆ.9ರಂದು ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದ್ದಾರೆ.
  ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಡಾ.ವಿ.ಕೃ.ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಹಾಗೂ ಹುತಾತ್ಮ ಮೈಲಾರ ಮಹಾದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಚಟುವಟಿಕೆಗಳ ಕಾರ್ಯಸೂಚಿ ಕುರಿತಂತೆ ಸದಸ್ಯರೊಂದಿಗೆ ಚರ್ಚಿಸಿದರು.
  ವಿ.ಕೃ.ಗೋಕಾಕರ ಕಾವ್ಯ, ನಾಟಕ, ಪ್ರಬಂಧ, ಮಹಾಕಾವ್ಯ ಒಳಗೊಂಡ ಸಮಗ್ರ ಸಾಹಿತ್ಯ ಪ್ರಾಕಾರಗಳ ಕುರಿತು ಕಾಲೇಜುಗಳಲ್ಲಿ ಅಧ್ಯಯನ ಕಮ್ಮಟಗಳನ್ನು ಆಯೋಜಿಸಬೇಕು. ಅವರ ಬದುಕು ಮತ್ತು ಬರಹಗಳ ಕುರಿತಂತೆ ವಿಚಾರ ಸಂಕಿರಣಗಳ ಆಯೋಜಿಸುವ ಕುರಿತಂತೆ ಪೂರ್ವಯೋಜಿತ ಕಾರ್ಯಸೂಚಿ ತಯಾರಿಸಿ ಸಭೆಗೆ ಮಂಡಿಸುವಂತೆ ಟ್ರಸ್ಟಿನ ಸದಸ್ಯ ಕಾರ್ಯದರ್ಶಿಗೆ ಸೂಚಿಸಿದರು.
  ವಿ.ಕೃ.ಗೋಕಾಕರ ಸಾಹಿತ್ಯ ಕೃತಿಗಳ ಆಧಾರಿತ ಸಂಶೋಧನೆ ಕೈಗೊಳ್ಳುವ ಆಸಕ್ತರಿಗೆ ವಿ.ಕೃ.ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನಿಂದ ಫೆಲೋಶಿಪ್ ನೀಡುವುದಾಗಿ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಿಗೆ ಪತ್ರ ಬರೆಯಲು ಸೂಚಿಸಿದರು.
  ಸವಣೂರಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ವಿ.ಕೃ.ಗೋಕಾಕ ಸಭಾಭವನದಲ್ಲಿ ಗ್ಯಾಲರಿಯಲ್ಲಿ ಗೋಕಾಕರ ಜೀವನ ಹಾಗೂ ಸಾಹಿತ್ಯಿಕ ರಚನೆಗಳ ಕುರಿತಂತೆ ಮಾಹಿತಿ ಹಾಗೂ ಛಾಯಾಚಿತ್ರಗಳು, ಪುಸ್ತಕಗಳು, ಅವರು ಬಳಕೆ ಮಾಡಿದ ಪುಸ್ತಕಗಳನ್ನು ಶಾಶ್ವತ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಬೇಕು. ಇದರೊಂದಿಗೆ ಜ್ಞಾನಪೀಠ ಪುರಸ್ಕೃತ ಕೃತಿಗಳು, ವಿವಿಧ ದಿಗ್ಗಜರ ಸಾಹಿತ್ಯ ಕೃತಿಗಳು ಒಳಗೊಂಡ ಗ್ರಂಥಾಲಯ ವಿಭಾಗವನ್ನು ತೆರೆಯಬೇಕು. ಸಾಹಿತ್ಯಾಸಕ್ತರಿಗೆ, ಸಂಶೋಧಕರಿಗೆ ಒಂದೇ ಸೂರಿನಲ್ಲಿ ಲಭ್ಯವಿರುವಂತೆ ಕ್ರಮವಹಿಸಲು ಸೂಚನೆ ನೀಡಿದರು.
  ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶಿದ್ದಲಿಂಗೇಶ ರಂಗಪ್ಪನವರ, ಹಾವೇರಿ ಹಾಗೂ ಸವಣೂರ ಉಪವಿಭಾಗಾಧಿಕಾರಿಗಳು, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಕ ಉಮೇಶಪ್ಪ, ತಹಶೀಲ್ದಾರ್ ಗಿರೀಶ ಸ್ವಾದಿ, ಟ್ರಸ್ಟ್‌ನ ಸದಸ್ಯರಾದ ಸತೀಶ ಕುಲಕರ್ಣಿ, ನಾಗೇಂದ್ರ ಕಡಕೋಳ, ಇತರರು ಉಪಸ್ಥಿತರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts