ಎಸ್ಸೆಸ್ಸೆಲ್ಸಿ ಪರೀಕ್ಷೆ 21ರಿಂದ; ಜಿಲ್ಲಾಡಳಿತದಿಂದ ಸಕ್ಕಲ ಸಿದ್ಧತೆ; ಡಿಸಿ ಡಾ.ವಿಜಯಮಹಾಂತೇಶ ದಾನಮ್ಮನವರ

blank

ಹಾವೇರಿ: ಮಾ.21ರಿಂದ ಏಪ್ರಿಲ್ 4ರವರೆಗೆ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ ನಡೆಯಲಿದ್ದು, ಜಿಲ್ಲೆಯಲ್ಲಿ ಸುಗಮ, ಸರಳ ಹಾಗೂ ಪಾರದರ್ಶಕ ಪರೀಕ್ಷೆ ನಡೆಸಲು ಜಿಲ್ಲಾಡಳಿತದಿಂದ ಸಕ್ಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶೇ.80ರಷ್ಟು ಫಲಿತಾಂಶದ ಗುರಿ ಹೊಂದಲಾಗಿದ್ದು, ವಿದ್ಯಾರ್ಥಿಗಳು ಧೈರ್ಯವಾಗಿ ಪರೀಕ್ಷೆ ಬರೆಯಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ವಿದ್ಯಾರ್ಥಿಗಳಿಗೆ ಅಭಯ ನೀಡಿದ್ದಾರೆ.
ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿ ಪರೀಕ್ಷೆ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರದ ಕಾಲಘಟ್ಟವಾಗಿದೆ. ಪಾಲಕರು, ಶಿಕ್ಷಕರ ನಿರೀಕ್ಷೆ ಹುಸಿ ಆಗದಂತೆ ಉತ್ತಮ ಫಲಿತಾಂಶ ತರಲು ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಹಾಗೂ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದು ತಿಳಿಸಿದರು.
ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ ಪೈಕಿ ಹಾವೇರಿ ಜಿಲ್ಲೆ ಟಾಪ್ 10ನೇ ಸ್ಥಾನದೊಳಗೆ ಬರಬೇಕು, ಶೇ.80ರಷ್ಟು ಫಲಿತಾಂಶದ ಗುರಿ ಹೊಂದಲಾಗಿದೆ. ಈ ಹಿನ್ನಲೆಯಲ್ಲಿ ಮೊದಲೇ ನಿರ್ಣಯಿಸಿದಂತೆ ಡಿಸೆಂಬರ್ 31ರೊಳಗೆ ಎಲ್ಲ ವಿಷಯಗಳ ಪಾಠಗಳನ್ನು ಮಾಡಿಮುಗಿಸಲಾಗಿದೆ. ವಿದ್ಯಾರ್ಥಿಗಳಿಗೆ ರಜಾ ದಿನಗಳಲ್ಲಿ, ಬೆಳಗ್ಗೆ ಹಾಗೂ ಸಂಜೆ ವಿಶೇಷ ತರಗತಿಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ನಡೆಸಲಾದ ಮೊದಲ ಕಿರು ಪರೀಕ್ಷೆಯಲ್ಲಿ ಶೇ.62, ಎರಡನೇ ಕಿರು ಪರೀಕ್ಷೆಯಲ್ಲಿ ಶೇ.72, ಪ್ರಥಮ ಸಂಕಲನ ಪರೀಕ್ಷೆಯಲ್ಲಿ ಶೇ.69 ಹಾಗೂ ರಾಜ್ಯದಾದ್ಯಂತ ನಡೆಯುವ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಶೇ.76 ರಷ್ಟು ಫಲಿತಾಂಶ ಬಂದಿದೆ. ಒಟ್ಟಾರೆ ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಾಗಿರುವುದು ಕಂಡುಬಂದಿದೆ. ಕಳೆದ ಸಾಲಿನ ಪರೀಕ್ಷೆಯಲ್ಲಿ ಗ್ರೆಸ್ ಅಂಕದಲ್ಲಿ ಉಂಟಾದ ಗೊಂದಲ ಹಿನ್ನೆಲೆಯಲ್ಲಿ ಈ ಪರೀಕ್ಷೆಯಲ್ಲಿ ಗ್ರೇಸ್ ಅಂಕ ನೀಡಲಾಗುವುದಿಲ್ಲ. ನೂರಕ್ಕೆ ನೂರರಷ್ಟು ಪಾರದರ್ಶಕ ಪರೀಕ್ಷೆ ನಡೆಸಲಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಾಲ್ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ಅತ್ಯಂತ ಅಚ್ಚುಕಟ್ಟಾಗಿ ಹಾಗೂ ವ್ಯವಸ್ಥಿತವಾಗಿ ನಡೆಸಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲ ತಾಲೂಕು ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳು ಪೊಲೀಸ್ ಬಂದೋಬಸ್ತ್‌ನಲ್ಲಿ ನೇರವಾಗಿ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು ಕ್ರಮವಹಿಸಲಾಗಿದೆ. ಪರೀಕ್ಷಾ ಗೌಪ್ಯತೆ ಕಾಪಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಲ್ಲೆಡೆ ಆರೋಗ್ಯ ಸಿಬ್ಬಂದಿ ನೇಮಿಸಿ, ಕುಡಿಯುವ ನೀರು, ಒಆರ್‌ಎಸ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್., ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ ಇತರರಿದ್ದರು.

24,736 ವಿದ್ಯಾರ್ಥಿಗಳು 
ಜಿಲ್ಲೆಯಲ್ಲಿ 12,585 ಗಂಡು ಹಾಗೂ 12,151 ಹೆಣ್ಣು ಮಕ್ಕಳು ಸೇರಿ ಒಟ್ಟು 24,736 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. 200 ಸರ್ಕಾರಿ, 157 ಅನುದಾನಿತ ಹಾಗೂ 102 ಅನುದಾನರಹಿತ ಸೇರಿ 459 ಪ್ರೌಢಶಾಲೆಗಳಿದ್ದು, ಈ ಪೈಕಿ 32 ಸರ್ಕಾರಿ, 36 ಅನುದಾನಿತ ಹಾಗೂ 12 ಅನುದಾನ ರಹಿತ ಸೇರಿ 80 ಶಾಲೆಗಳಲ್ಲಿ 1089 ಪರೀಕ್ಷಾ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಗಾಳಿ, ಬೆಳಕು, ಡೆಸ್ಕ್, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಎಲ್ಲ ಮೂಲ ಸೌಲಭ್ಯ ಒದಗಿಸಲಾಗುತ್ತಿದೆ. 1869 ಅಧಿಕಾರಿ-ಸಿಬ್ಬಂದಿ ನೇಮಿಸಲಾಗಿದೆ ಎಂದರು.
ಹಿಂದುಳಿದ ಮಕ್ಕಳಿಗೆ ವಿಶೇಷ ಒತ್ತು
ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕ್ಲಸ್ಟರ್ ಹಂತದಲ್ಲಿ ನಿಧಾನ, ಸಾಧಾರಣ ಹಾಗೂ ಪ್ರತಿಭಾವಂತ ಮಕ್ಕಳನ್ನು ವರ್ಗೀಕರಿಸಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಒತ್ತು ನೀಡಿ ಪಾಠ ಮಾಡಲಾಗಿದೆ. ಮಕ್ಕಳ ಗುಂಪು ಚರ್ಚೆಗೆ ಅವಕಾಶ ಕಲ್ಪಿಸಲಾಗಿತ್ತು. ದಾನಿಗಳ ಸಹಾಯ ಪಡೆದು ಆಸರೆ ಎಂಬ ಪುಸ್ತಕ ವಿತರಿಸಲಾಗಿದೆ. ಕಲಿಕೆಯಲ್ಲಿ ನಿಧಾನವಾಗಿರುವ ಮಕ್ಕಳ ಮೇಲೆ ನಿಗಾವಹಿಸಲು ಶಿಕ್ಷಕರ ತಂಡ ರಚಿಸಲಾಗಿದೆ, ಪ್ರತಿ ಶನಿವಾರ ರಸಪ್ರಶ್ನೆ ಆಯೋಜನೆ ಮೂಲಕ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಕ್ರಮವಹಿಸಲಾಗಿದೆ ಎಂದರು.
ಅಧಿಕಾರಿಗಳ ನಿಯೋಜನೆ
ಕಳೆದ ವರ್ಷ ಶೇ.40ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ, ಅಂತಹ ಶಾಲೆಗಳಿಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ನಾನು ಹಾವೇರಿ ನಗರದ ಸರ್ಕಾರಿ ಪ್ರೌಢಶಾಲೆ ನಂ.2ಕ್ಕೆ ಭೇಟಿ ನೀಡಿದ್ದೇನೆ. ಪ್ರತಿ ಶಿಕ್ಷಕರಿಗೆ 4 ಮಕ್ಕಳನ್ನು ದತ್ತು ನೀಡಲಾಗಿದೆ ಎಂದರು.
ವಿಶೇಷ ತಜ್ಞರೊಂದಿಗೆ ಸಂವಾದ
ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯ ಹೋಗಲಾಡಿಸಲು ಹಾಗೂ ಆತ್ಮಸ್ಥೈರ್ಯ ತುಂಬಲು ಗುರುರಾಜ ಪಾಟೀಲ ಹಾಗೂ ಡಾ.ಆನಂದ ಪಾಂಡುರಂಗಿ, ಸುರೇಶ ಕುಲಕರ್ಣಿ ಅವರಂತಹ ವಿಶೇಷ ತಜ್ಞರೊಂದಿಗೆ ವಿದ್ಯಾರ್ಥಿಗಳ ಸಂವಾದ ಆಯೋಜಿಸುವ ಮೂಲಕ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗಿದೆ ಎಂದರು.
ಸಿಸಿಟಿವಿ ಕ್ಯಾಮರಾ ಅಳವಡಿಕೆ
ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ವೆಬ್‌ಕಾಸ್ಟಿಂಗ್ ವೀಕ್ಷಣೆ ಮಾಡಲು ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ವೆಬ್‌ಕಾಸ್ಟಿಂಗ್‌ಗಾಗಿ 17 ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

 

Share This Article

ನಿಮ್ಮ ಸಂಪತ್ತು ವೃದ್ಧಿಯಾಗಬೇಕಾ? ಅಕ್ಷಯ ತೃತೀಯದಂದು ಹೀಗೆ ಮಾಡಬೇಕು… Akshaya Tritiya

Akshaya Tritiya: ಅಕ್ಷಯ ತೃತೀಯ ಹಬ್ಬವನ್ನು ಹಿಂದೂಗಳು ಬಹಳ ಪವಿತ್ರವೆಂದು ಪರಿಗಣಿಸುತ್ತಾರೆ. ಈ ಅಕ್ಷಯ ತೃತೀಯ…

ರಾತ್ರಿ ಏನೂ ತಿನ್ನದೆ ಮಲಗುತ್ತಿದ್ದೀರಾ? ಆದರೆ ನೀವು ಖಂಡಿತವಾಗಿಯೂ ಈ ವಿಷಯಗಳನ್ನು ತಿಳಿದುಕೊಳ್ಳಬೇಕು…Health Tips

Health Tips: ಇತ್ತೀಚೆಗೆ, ಅನೇಕ ಜನರು ಸಮಯದ ಅಭಾವ, ಹಸಿವಿನ ಅಭಾವ, ಉದ್ವೇಗ ಸೇರಿದಂತೆ ವಿವಿಧ…

ದಿನಾ ಒಂದು ಮೊಟ್ಟೆ ತಿನ್ನಿರಿ; ದೇಹದ ಸಕಾರಾತ್ಮಕ ಬದಲಾಣೆಗಳನ್ನು ಒಮ್ಮೆ ನೋಡಿ!: | Positive Changes

Positive Changes : ಮೊಟ್ಟೆಗಳನ್ನು ಪೋಷಕಾಂಶಗಳ ಶಕ್ತಿ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಇದು ಪ್ರೋಟೀನ್, ಜೀವಸತ್ವಗಳು ಮತ್ತು…