More

  ಎಸ್‌ಸಿ, ಎಸ್‌ಟಿ ವರ್ಗದವರನ್ನೇ ನೇಮಿಸಿ; ಜಿಲ್ಲಾ ಜಾಗೃತಿ ಸಭೆಯಲ್ಲಿ ಡಿಸಿ ರಘುನಂದನ ಮೂರ್ತಿ ಸೂಚನೆ

  ಹಾವೇರಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಕ್ಕೆ ಮೀಸಲಿರುವ ಸ್ಥಾನಗಳಿಗೆ ಆಯಾ ವರ್ಗದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಸೋಮವಾರ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜನರ ಮೇಲಿನ ದೌರ್ಜನ್ಯ ನಿಯಂತ್ರಣ ಹಾಗೂ ಜಿಲ್ಲಾ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗಳಗನಾಥ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಖಾಲಿ ಇರುವ ಬಿಸಿಯೂಟ ಅಡುಗೆ ಸಿಬ್ಬಂದಿಯನ್ನು ಮೀಸಲಾತಿ ಅನ್ವಯ ಭರ್ತಿ ಮಾಡಿಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
  ಕಳ್ಳಿಹಾಳ ಗ್ರಾಮದಲ್ಲಿ ಪರಿಶಿಷ್ಟ ಜನಾಂಗದವರ ಸ್ಮಶಾನ ಭೂಮಿಗೆ ದಾರಿ ನೀಡಲು ಜಮೀನು ಮಾಲೀಕರ ಮನವೊಲಿಸಿ ಹಾಗೂ ಸರ್ಕಾರದ ನಿಯಮಾವಳಿ ಅನುಸಾರ ಪರಿಹಾರ ನೀಡಲಾಗುವುದು. ರಾಣೆಬೆನ್ನೂರ ತಾಲೂಕು ಬೇಲೂರ ಗ್ರಾಮದ ನಿವಾಸಿಗೆ ನಿವೇಶನ ಹಕ್ಕು ಪತ್ರ ಹಂಚಿಕೆ ಪ್ರಕರಣದಲ್ಲಿ ಪರ್ಯಾಯವಾಗಿ ಗಾಂವಠಾಣಾ ಪ್ರದೇಶದಲ್ಲಿರುವ ಹಾಗೂ ಯಾವುದೇ ವ್ಯಾಜ್ಯವಿರದ ನಿವೇಶನ ಹಂಚಿಕೆ ಮಾಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
  ಶಿಗ್ಗಾಂವಿ ತಾಲೂಕು ನಿಡಗುಂದಿ ಗ್ರಾಮದ ಪ್ರಕರಣ ಹಾಗೂ ಪ್ರಕರಣವೊಂದರಲ್ಲಿ ಶಿಗ್ಗಾಂವಿ ಡಿವೈಎಸ್‌ಪಿ ಅವರ ಹಣದ ಬೇಡಿಕೆ ಆರೋಪದ ಕುರಿತು ಸೂಕ್ತ ಕ್ರಮ ವಹಿಸುವಂತೆ ಸಮಿತಿಯ ಅಧಿಕಾರೇತರ ನಾಮನಿರ್ದೇಶಿತ ಸದಸ್ಯರು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು. ಈ ಕುರಿತು ಸೂಕ್ತ ಕ್ರಮ ಜರುಗಿಸುವಂತೆ ಹಾಗೂ ನಿಡಗುಂದಿ ಗ್ರಾಮದಲ್ಲಿ ಶಾಂತಿಸಭೆ ಆಯೋಜಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.
  ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಮಮತಾ ಹೊಸಗೌಡ್ರ, ಡಿವೈಎಸ್‌ಪಿ ಎಂ.ಎಸ್.ಪಾಟೀಲ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ತಹಸೀಲ್ದಾರ ಜಿ.ಶಂಕರ, ಸಮಿತಿಯ ಅಧಿಕಾರೇತರ ನಾಮನಿರ್ದೇಶಿತ ಸದಸ್ಯರಾದ ರಮೇಶ ಆನವಟ್ಟಿ, ಮುತ್ತುರಾಜ ಮಾದರ ಹಾಗೂ ಎನ್.ಎಂ.ಗಾಳೆಮ್ಮನವರ, ಇತರರು ಉಪಸ್ಥಿತರಿದ್ದರು.
  30 ಲಕ್ಷ ರೂ. ಪರಿಹಾರ
  ಜನವರಿ-2024ರಿಂದ ಮೇ-2024ರವರೆಗೆ ಒಟ್ಟು 31 ಪ್ರಕರಣಗಳಲ್ಲಿ 30.71 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ರೇಷ್ಮಾ ಕೌಸರ್ ಸಭೆಗೆ ಮಾಹಿತಿ ನೀಡಿದರು.

  See also  ಲಿಡಕರ ಕೌಶಲ ಕೇಂದ್ರಕ್ಕೆ ತರಬೇತುದಾರರ ಮುತ್ತಿಗೆ; ಮಷಿನ್, ಟೂಲ್ ಕಿಟ್ ವಿತರಣೆಗೆ ಆಗ್ರಹ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts